ನೂತನ ಸಚಿವರು ಯಾರು ? : ನಾಡಿದ್ದು ಬರಲಿದೆ ಲಕೋಟೆ - ಸೋಮವಾರ ಡಿಕೆ ಸಂಪುಟ ವಿಸ್ತರಣೆ?

Published : Jul 31, 2026, 06:41 AM IST
DK Shivakumar And Siddaramaiah

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ಸಂಬಂಧ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗಿನ ರಾಜ್ಯ ನಾಯಕರ ಸಭೆ ಗುರುವಾರ ನಡೆದರೂ ಪಟ್ಟಿ ಅಂತಿಮಗೊಂಡಿಲ್ಲ. ಭಾನುವಾರ ಹೈಕಮಾಂಡ್ ಒಪ್ಪಿತ ಪಟ್ಟಿಯೊಂದಿಗೆ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರೇ ಬೆಂಗಳೂರಿಗೆ ಬರಲಿದ್ದಾರೆ.

 ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಸಂಬಂಧ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗಿನ ರಾಜ್ಯ ನಾಯಕರ ಸಭೆ ಗುರುವಾರ ನಡೆದರೂ ಪಟ್ಟಿ ಅಂತಿಮಗೊಂಡಿಲ್ಲ. ಭಾನುವಾರ ಹೈಕಮಾಂಡ್ ಒಪ್ಪಿತ ಪಟ್ಟಿಯೊಂದಿಗೆ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರೇ ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿಯವರೆಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 2ನೇ ಹಂತದ ಸಚಿವ ಸಂಪುಟ ಸೇರುವವರು ಯಾರು ಎಂಬುದನ್ನು ತಿಳಿಯಲು ಕಾಯಬೇಕಿದೆ!

ಅರ್ಥಾತ್‌, ಹೈಕಮಾಂಡ್‌ ಒಪ್ಪಿತ ಪಟ್ಟಿ ರೂಪುಗೊಳ್ಳಲು ಇನ್ನೂ ಮೂರು ದಿನದ ಸಮಯಾವಕಾಶವಿದೆ. ಹೀಗಾಗಿ ದೆಹಲಿ ಮಟ್ಟದಲ್ಲಿ ಯಾವ ಆಟ ಬೇಕಾದರೂ ನಡೆಯಬಹುದಾಗಿರುವುದರಿಂದ 2ನೇ ಹಂತದ ಸಚಿವ ಸಂಪುಟ ವಿಸ್ತರಣೆ- ಪಿಕ್ಚರ್‌ ಅಭಿ ಬಾಕಿ ಹೇ!

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಕಡೆಗೂ ಗುರುವಾರ ಸಂಜೆ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೂ ಇದ್ದರು.

ಸಭೆಯಲ್ಲಿ ರಾಜ್ಯ ನಾಯಕರಿಂದ ಅಭಿಪ್ರಾಯ ಪಡೆಯಲಾಗಿದೆ. ಅನಂತರ ಭಾನುವಾರ ಕೆ.ಸಿ.ವೇಣುಗೋಪಾಲ್ ಅವರೇ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿ ನಾಯಕರನ್ನು ಬೀಳ್ಕೊಟ್ಟಿದ್ದಾರೆ. ನಂತರ ಸಿಎಂ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಗರಕ್ಕೆ ಹಿಂತಿರುಗಿದರೆ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಅವರು ರಾಹುಲ್‌ ಜತೆಗೆ ಸಭೆ ಮುಂದುವರೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ವೇಣುಗೋಪಾಲ್‌ ಆಗಮಿಸಿದರೆ, ಸೋಮವಾರ ನೂತನ ಪ್ರಮಾಣವಚನ ಸ್ವೀಕಾರ ನಡೆಯಲಿದೆ.

ಹರಿಪ್ರಸಾದ್‌ ಜತೆ ಪ್ರತ್ಯೇಕ ಚರ್ಚೆ:

ಸಿಎಂ ಹಾಗೂ ಮಾಜಿ ಸಿಎಂ ತೆರಳಿದ ನಂತರವೂ ಸುಮಾರು 20 ನಿಮಿಷ ಹರಿಪ್ರಸಾದ್ ಅವರೊಂದಿಗೆ ಹೈಕಮಾಂಡ್‌ ನಾಯಕರು ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ 2ನೇ ಹಂತದಲ್ಲಿ 18 ಸ್ಥಾನಗಳನ್ನು ತುಂಬಲು ನಿರ್ಧರಿಸಲಾಗಿದ್ದು, ಈ ಪೈಕಿ ಸುಮಾರು 14 ಹೆಸರು ಬಗ್ಗೆ ಗೊಂದಲವಿಲ್ಲ. ಇನ್ನೂ ನಾಲ್ಕು ಹೆಸರುಗಳ ಬಗ್ಗೆ ಹೈಕಮಾಂಡ್ ಅಂತಿಮ ನಿಲುವು ಕೈಗೊಂಡಿಲ್ಲ. ಬಾಕಿ ಉಳಿದ ಎರಡು ಸ್ಥಾನ ಖಾಲಿ ಉಳಿಸಿಕೊಳ್ಳುವ ಇರಾದೆ ಹೈಕಮಾಂಡ್‌ಗೆ ಇದೆ.

ಈ ಚರ್ಚೆ ವೇಳೆ 2ನೇ ಹಂತದ ಸಂಪುಟಕ್ಕೆ ಅರ್ಹರ ಆಯ್ಕೆ ಬಗ್ಗೆ ಮಾತ್ರವಲ್ಲದೆ, ಸ್ಪೀಕರ್‌, ಡೈಪುಟಿ ಸ್ಪೀಕರ್‌, ಸಭಾಪತಿ, ಉಪ ಸಭಾಪತಿ ಹಾಗೂ ಎರಡು ಸದನಗಳ ಮುಖ್ಯ ಸಚೇತಕರ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಸಭೆಯಲ್ಲಿ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್‌ ಅವರು ತಾವು ಶಿಫಾರಸು ಮಾಡುವ ಸಚಿವಾಕಾಂಕ್ಷಿಗಳ ಹೆಸರು, ವಿವರ ಹಾಗೂ ಅವರನ್ನು ಯಾವ ಕಾರಣಕ್ಕೆ ಸಚಿವರನ್ನಾಗಿ ಮಾಡಬೇಕು. ಮಾಡದಿದ್ದರೆ ಪಕ್ಷ ಅಥವಾ ಸರ್ಕಾರಕ್ಕೆ ಆಗಬಹುದಾದ ನಷ್ಟವೇನು ಎಂಬ ಕುರಿತು ಪೂರ್ಣ ವಿವರಣೆ ನೀಡಿದರು ಎಂದು ತಿಳಿದುಬಂದಿದೆ.

ಮೂರು ನಾಯಕರಿಂದಲೂ ಪಟ್ಟಿ ಹಾಗೂ ವಿವರಣೆ ಪಡೆದಿರುವ ರಾಹುಲ್‌ ಅವರು ಎಲ್ಲಾ ಮಾಹಿತಿ ಕ್ರೋಢೀಕರಿಸಿ ತಮ್ಮ ಅಂತಿಮ ಪಟ್ಟಿ ಸಿದ್ಧಪಡಿಸಲಿದ್ದಾರೆ. ಈ ಪಟ್ಟಿ ಸಿದ್ಧಪಡಿಸಲು ಇನ್ನೂ ಮೂರು ದಿನ ಕಾಲಾವಕಾಶವನ್ನು ಹೈಕಮಾಂಡ್‌ ತೆಗೆದುಕೊಂಡಿದೆ.

ಸೋಮವಾರ ನೂತನ ಸಚಿವರ ಪದಗ್ರಹಣ:

ಭಾನುವಾರದ ವೇಳೆಗೆ ಪಟ್ಟಿ ಬಂದರೆ ಆ.3ರಂದು (ಸೋಮವಾರ) ಪದ ಗ್ರಹಣ ನಡೆಯಲಿದೆ. ಜೂ.3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ.ಶಿವಕುಮಾರ್ ಅವರು ಭರ್ತಿ ಎರಡು ತಿಂಗಳ ಬಳಿಕ ನೂತನ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿ 13 ಮಂದಿ ಸಚಿವರೊಂದಿಗೆ ಜೂ.3 ರಂದು ಅಧಿಕಾರ ಸ್ವೀಕರಿಸಿದ್ದರು. ಸುದೀರ್ಘ ಅವಧಿವರೆಗೂ ಸಚಿವ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಪಕ್ಷದ ವಲಯದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇದು ಪ್ರತಿಪಕ್ಷಗಳಿಗೆ ಅಸ್ತ್ರವಾಗಿಯೂ ಬದಲಾಗಿತ್ತು.

- ರಾಹುಲ್‌ ಗಾಂಧಿ ಅನ್ಯ ಕೆಲಸಗಳಲ್ಲಿ ವ್ಯಸ್ತರಾಗಿದ್ದರಿಂದ 3 ದಿನಗಳಿಂದ ಭೇಟಿ ನಿರೀಕ್ಷೆಯಲ್ಲಿದ್ದ ರಾಜ್ಯದ ನಾಯಕರು

- ಕೊನೆಗೂ ಗುರುವಾರ ಸಂಜೆ ಕಾಂಗ್ರೆಸ್‌ ವರಿಷ್ಠನ ಜತೆ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರ ಮಾತುಕತೆ

- ಡಿಕೆಶಿ, ಸಿದ್ದು, ಹರಿಪ್ರಸಾದ್‌, ಖರ್ಗೆ ಜತೆ ರಾಹುಲ್‌ ಚರ್ಚೆ. ವೇಣುಗೋಪಾಲ್‌, ಸುರ್ಜೇವಾಲಾ ಕೂಡ ಉಪಸ್ಥಿತಿ

- ತಾವು ಶಿಫಾರಸು ಮಾಡಿದವರನ್ನು ಏಕೆ ಸಚಿವರನ್ನಾಗಿ ಮಾಡಬೇಕು ಎಂದು ನಾಯಕರಿಂದ ವಾದ ಮಂಡನೆ

- ಡಿಕೆ, ಬಿಕೆ, ಸಿದ್ದುರಿಂದ ಪಟ್ಟಿ, ವಿವರಣೆ ಪಡೆದಿರುವ ರಾಹುಲ್‌. ಎಲ್ಲ ಮಾಹಿತಿ ಆಧರಿಸಿ ಅಂತಿಮ ಪಟ್ಟಿ ತಯಾರಿ

- ಆ ಕಾರ್ಯಕ್ಕೆ ಮೂರು ದಿನ ಕಾಲಾವಕಾಶ ಕೋರಿಕೆ. ಭಾನುವಾರ ವೇಣು ಮೂಲಕ ಪಟ್ಟಿ ಕಳಿಸುವುದಾಗಿ ಸೂಚನೆ

- ಡಿಕೆಶಿ, ಸಿದ್ದು ಬೆಂಗಳೂರಿಗೆ ವಾಪಸ್‌. ಆನಂತರ ಹರಿಪ್ರಸಾದ್‌ ಜತೆಗೆ ಮಾತುಕತೆ ಮುಂದುವರಿಸಿದ ರಾಹುಲ್‌

- 18 ಸ್ಥಾನಗಳನ್ನು ಭರ್ತಿ ಮಾಡಿ, 2 ಸ್ಥಾನ ಖಾಲಿ ಇಟ್ಟಕೊಳ್ಳುವ ಬಯಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ

- ಈ ಪೈಕಿ 14 ಹೆಸರುಗಳ ಬಗ್ಗೆ ಗೊಂದಲ ಇಲ್ಲ. 4 ಹೆಸರಿನ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸುಪ್ರೀಂ ಹೇಳೋವರೆಗೂ ನೀರು ಬಿಡಬೇಕಿಲ್ಲ : ತಜ್ಞರು
ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ : ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ