ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿರುವ ಬರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶ ನೀಡಲು ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ-2025ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಜಿಬಿಎ ಅಡಿಯಲ್ಲಿರುವ 5 ಪಾಲಿಕೆಗಳ ವಾರ್ಡ್‌ಗಳ ಗಡಿ ಗುರುತಿಸುವಿಕೆ ಸೇರಿದಂತೆ ಎಲ್ಲ ಸಿದ್ಧತೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ನ್ಯಾಯಾಲಯಕ್ಕೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. 198 ವಾರ್ಡ್‌ಗಳನ್ನು ಹೊಂದಿದ್ದ ಬಿಬಿಎಂಪಿ ಚುನಾವಣೆ ಕೊನೆಯ ಬಾರಿಗೆ ಆಗಸ್ಟ್ 2015 ರಲ್ಲಿ ನಡೆದಿತ್ತು. ಇದರ ಅವಧಿ ಸೆಪ್ಟೆಂಬರ್ 2020ರಲ್ಲಿ ಕೊನೆಗೊಂಡಿತ್ತು. ಅಂದಿನಿಂದ ಚುನಾವಣೆಗಳನ್ನು ಹಲವು ಬಾರಿ ಮುಂದೂಡಲಾಗಿದೆ.
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಭಜಿಸಿ ಜುಲೈ 19 ರಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 18 ರವರೆಗೆ ಅವಕಾಶವಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿಗೆ ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ಬೇಕು. ಐದು ಪಾಲಿಕೆಗಳಿಗೆ ಹೊಸ ವಾರ್ಡ್‌ಗಳ ರಚಿಸಿ ವಾರ್ಡ್‌ಗಳ ಗಡಿಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸ್ವೀಕರಿಸಬೇಕಿದೆ ನಂತರ ಅಂತಿಮ ಅಧಿಸೂಚನೆ ಹೊರಡಿಸಬೇಕು. ನವೆಂಬರ್ 1 ರ ಹೊತ್ತಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ಸರ್ಕಾರ ಹೇಳಿದೆ.
ಇದರ ನಡುವೆ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಲು ಪೂರಕವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ರ ಮೂರು ನಿಯಮಗಳನ್ನು ಬದಲಿಸಿ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ-2025 ವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಿದೆ. ಇದಕ್ಕಾಗಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮದರ್ ತೆರೆಸಾ ಶಾಲೆಗೆ ದೇಗುಲದ ಜಾಗ ಗುತ್ತಿಗೆ:
ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿಯ ಜಾಲಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 73ರಲ್ಲಿರುವ ಹನುಮಂತ ದೇವರ ದೇವಾಲಯಕ್ಕೆ ಸೇರಿದ 1.32 ಎಕರೆ ಜಮೀನನ್ನು ಜಾಲಹಳ್ಳಿಯ ಮದರ್ ತೆರೆಸಾ ಶಾಲೆಗೆ ಮಕ್ಕಳ ಆಟದ ಮೈದಾನಕ್ಕೆ ಗುತ್ತಿಗೆಗೆ ನೀಡಲು ಒಪ್ಪಿಗೆ ನೀಡಲಾಗಿದೆ. ಈ ಮೊದಲು 2025ರಲ್ಲಿ 20 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು. ಆ ಅವಧಿಯನ್ನು 30 ವರ್ಷಗಳ ಅವಧಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.