ಜನಾದೇಶ ಸಿಗದ್ದಕ್ಕೆ ರಾಹುಲ್‌ ಹತಾಶ: ಮತಗಳ್ಳತನ ಆರೋಪಕ್ಕೆ ಬಿಜೆಪಿ ಕಿಡಿ

KannadaprabhaNewsNetwork |  
Published : Aug 08, 2025, 01:01 AM ISTUpdated : Aug 08, 2025, 05:07 AM IST
ಬಿಜೆಪಿ  | Kannada Prabha

ಸಾರಾಂಶ

ಬಿಜೆಪಿಯೊಂದಿಗೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಚುನಾವಣಾ ಆಯೋಗ ಕರ್ನಾಟಕ ಸೇರಿದಂತೆ ಹಲವೆಡೆ ಮತಗಳ್ಳತನ ಮಾಡಿದೆ ಎಂಬ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

 ನವದೆಹಲಿ: ಬಿಜೆಪಿಯೊಂದಿಗೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಚುನಾವಣಾ ಆಯೋಗ ಕರ್ನಾಟಕ ಸೇರಿದಂತೆ ಹಲವೆಡೆ ಮತಗಳ್ಳತನ ಮಾಡಿದೆ ಎಂಬ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧ ದೊಡ್ಡ ಪಿತೂರಿಯ ಭಾಗವಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ವ್ಯವಸ್ಥಿತವಾಗಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ರಾಹುಲ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ‘ರಾಹುಲ್ ಗಾಂಧಿ ಬೇಜವಾಬ್ದಾರಿಯುತ ಹಾಗೂ ನಾಚಿಕೆಯಿಲ್ಲದ ಹೇಳಿಕೆ ನೀಡಿದ್ದಾರೆ. ನಾಚಿಕೆಗೆಟ್ಟತನದ ಎಲ್ಲಾ ಎಲ್ಲೆಗಳನ್ನು ಮೀರಿ, ಚುನಾವಣಾ ಆಯೋಗವನ್ನು ವಂಚಕ ಎಂದು ಕರೆದಿದ್ದಾರೆ. ಕಾಂಗ್ರೆಸ್‌ಗೆ ಜನಾದೇಶ ಸಿಗದ ಕಾರಣ ಹತಾಶೆ ಮತ್ತು ಕೋಪಗೊಂಡಿರುವ ಅವರು, ಆಯೋಗದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂಥ ವ್ಯಕ್ತಿತ್ವ ಹಾಗೂ ನಡವಳಿಕೆಯಿಂದಾಗಿಯೇ ಜನರು ನಿಮಗೆ ಮತ ಹಾಕುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಹುಲ್‌ ಮೆದುಳೇ ಕಳ್ಳತನವಾಗಿದೆ-ಫಡ್ನವೀಸ್ ವ್ಯಂಗ್ಯ

ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸೇರಿ ಚುನಾವಣಾ ಆಯೋಗ ಮತಗಳ್ಳತನ ನಡೆಸಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಳ್ಳಿಹಾಕಿದ್ದಾರೆ. ಪಣಜಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ತಮ್ಮ ಮೆದುಳನ್ನು ಪರೀಕ್ಷಿಸಿಕೊಳ್ಳಬೇಕು ಎಂದು ನನಗನಿಸುತ್ತದೆ. ಅವರ ಮೆದುಳು ಕಳ್ಳತನವಾಗಿರಬೇಕು ಅಥವಾ ಅದರೊಳಗಿನ ಚಿಪ್ ಕಾಣೆಯಾಗಿರಬೇಕು. ಹಾಗಾಗಿ ಅವರು ಆಗಾಗ ಇಂಥ ಹೇಳಿಕೆಗಳನ್ನು ನೀಡುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಬಿಹಾರ ಆ.17ರಿಂದ ಕಾಂಗ್ರೆಸ್ ಮತದಾತ ಅಧಿಕಾರ ಯಾತ್ರೆ

ಪಟನಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಇದೇ ತಿಂಗಳ 17ರಿಂದ 15 ದಿನಗಳ ಕಾಲ ಕಾಂಗ್ರೆಸ್ ಬಿಹಾರದಲ್ಲಿ ‘ಮತದಾತ ಅಧಿಕಾರ ಯಾತ್ರೆ’ಯನ್ನು ಹಮ್ಮಿಕೊಂಡಿದೆ.

ಆ.17ರಂದು ರೋಹ್ತಾಸ್‌ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಉಪಸ್ಥಿತರಿರುತ್ತಾರೆ. ಆರ್‌ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಕೂಟದ ಎಲ್ಲಾ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 15 ದಿನಗಳ ಬಳಿಕ ರಾಜಧಾನಿ ಪಟನಾದಲ್ಲಿ ಯಾತ್ರೆ ಅಂತ್ಯವಾಗಲಿದೆ.‘ಸಾಧ್ಯವಾದ ಮಟ್ಟಿಗೆ ಯಾತ್ರೆಯ ಅಷ್ಟೂ ದಿನ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇತರ ಕಡೆಗಳಲ್ಲಿ ನಿಗದಿಯಾದ ಕಾರ್ಯಕ್ರಮಗಳನ್ನು ನೋಡಿಕೊಂಡು, ಹೊರಹೋಗುತ್ತಾರೆ’ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಾಜೇಶ್‌ ಕುಮಾರ್‌ ಹೇಳಿದ್ದಾರೆ.

PREV
Read more Articles on

Recommended Stories

ಬಿಜೆಪಿ ಕೈಗೊಂಬೆಯಾದ ಪ್ರಜಾಪ್ರಭುತ್ವದ ಕಾವಲುಗಾರ ಚುನಾವಣಾ ಆಯೋಗ !
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ