ಕೋಲಾರ ಕಾಂಗ್ರೆಸ್‌ನ ಎರಡು ಶಕ್ತಿಶಾಲಿ ಬಣಗಳ ಜಗಳವು ರಾಜ್ಯ ರಾಜಕಾರಣದ ಪಾಲಿಗೆ ಅನಾಮಿಕರಂತಿದ್ದ ಯುವ ನಾಯಕ ಕೆ.ವಿ.ಗೌತಮ್‌ಗೆ ಲಾಭ ತಂದುಕೊಟ್ಟಿದೆ.
ಬೆಂಗಳೂರು : ಕೋಲಾರ ಕಾಂಗ್ರೆಸ್‌ನ ಎರಡು ಶಕ್ತಿಶಾಲಿ ಬಣಗಳ ಜಗಳವು ರಾಜ್ಯ ರಾಜಕಾರಣದ ಪಾಲಿಗೆ ಅನಾಮಿಕರಂತಿದ್ದ ಯುವ ನಾಯಕ ಕೆ.ವಿ.ಗೌತಮ್‌ಗೆ ಲಾಭ ತಂದುಕೊಟ್ಟಿದೆ. ಶನಿವಾರ ಹೈಕಮಾಂಡ್ ಪ್ರಕಟಿಸಿದ ಕಾಂಗ್ರೆಸ್‌ನ ನಾಲ್ಕನೇ ಹಾಗೂ ಅಂತಿಮ ಪಟ್ಟಿಯಲ್ಲಿ ಬಾಕಿ ಉಳಿದಿದ್ದ ಕೋಲಾರ ಕ್ಷೇತ್ರದ ಟಿಕೆಟ್ ಅನ್ನು ರಾಜ್ಯ ನಾಯಕತ್ವದ ಶಿಫಾರಸಿನಂತೆ ಗೌತಮ್ ಅವರಿಗೆ ದಯಪಾಲಿಸಿದೆ.
ಅದಾಗಿ, ಅಳಿಯ ಚಿಕ್ಕಪೆದ್ದಣ್ಣ ಪರವಾಗಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಎಲ್.ಹನುಮಂತಯ್ಯ ಪರವಾಗಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದ ಶಾಸಕರ ಬಣ ನಡೆಸಿದ್ದ ಪ್ರಯತ್ನ ವಿಫಲವಾಗಿದ್ದು, ಈ ಎರಡು ಬಣಗಳು ಇದೀಗ ಗೌತಮ್ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ತಾಕೀತಿಗೆ ಹೈಕಮಾಂಡ್‌ನಿಂದ ಒಳಗಾಗಿವೆ. ತನ್ಮೂಲಕ ನಾಲ್ಕೈದು ದಿನಗಳ ಹೈಡ್ರಾಮಾಗೂ ಬ್ರೇಕ್ ಬಿದ್ದಿದೆ.
ಗೌತಮ್ ಗೆಲ್ಲಿಸಿಕೊಂಡು ಬರುತ್ತೇವೆ- ಮುನಿಯಪ್ಪ:ಗೌತಮ್‌ಗೆ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಚ್. ಮುನಿಯಪ್ಪ, ಹೈಕಮಾಂಡ್ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಗೌತಮ್ ಅವರ ತಂದೆಗೆ ಮೇಯರ್ ಆಗಿದ್ದ ಇತಿಹಾಸ ಇದೆ. ಅವರ ಪರ ನಾನು ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುತ್ತೇನೆ. ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇದರಲ್ಲಿ ನನಗೆ ಯಾವುದೇ ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, 7 ಬಾರಿ ಸಂಸದ, 10 ವರ್ಷ ಮಂತ್ರಿ, ಸಿಡಬ್ಲ್ಯೂಸಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕವೂ ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ ನನಗೆ ಇನ್ನೇನು ಮಾಡಬೇಕು? ಹೀಗಾಗಿ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುವ ಜತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನನ್ನ ಪರ ಎಲ್ಲರೂ ಕೆಲಸ ಮಾಡುತ್ತಾರೆ- ಗೌತಮ್:
ಕೆ.ವಿ.ಗೌತಮ್ ಮಾತನಾಡಿ, ನನಗೆ ಆಶ್ಚರ್ಯಕರ ರೀತಿಯಲ್ಲಿ ದೊಡ್ಡ ಅವಕಾಶ ಬಂದೊದಗಿದೆ. ಟಿಕೆಟ್ ಆಯ್ಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕರೆದು ಟಿಕೆಟ್ ನೀಡಿದ್ದಾರೆ. ನಾನು ನ್ಯೂಟ್ರಲ್ ವ್ಯಕ್ತಿ. ಎರಡೂ ಬಣದ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ವಿಚಾರ ಬಂದಾಗ ಇಬ್ಬರೂ ಒಂದಾಗುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವಷ್ಟೇ ನಾನು ಪ್ರಚಾರಕ್ಕೆ ಹೋಗುತ್ತೇನೆ. ಹೀಗಾಗಿ ನನ್ನ ಪರ ಎಲ್ಲರೂ ಕೆಲಸ ಮಾಡಲಿದ್ದು, ಶೇ.100ರಷ್ಟು ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.