ಮಂಡ್ಯ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಬಿಜೆಪಿ-ಜೆಡಿಎಸ್‌ನವರ ಕಣ್ಣು ಕುಕ್ಕುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಬಾರದು ಎನ್ನುವುದಷ್ಟೇ ಅವರ ಉದ್ದೇಶ. ಅದಕ್ಕಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಮುಖ್ಯಮಂತ್ರಿಗಳ ಮೇಲೆ ರಾಜ್ಯದ ಜನರಿಗಿರುವ ಪ್ರೀತಿಯನ್ನು ನೋಡಿ ದೋಸ್ತಿ ಪಕ್ಷದ ನಾಯಕರ ಹೊಟ್ಟೆಗೆ ಬೆಂಕಿ ಬಿದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ೧೩೬ ಸ್ಥಾನದಲ್ಲಿ ಗೆಲುವು ಸಾಧಿಸಿರುವುದು ಬಿಜೆಪಿ-ಜೆಡಿಎಸ್ ಕಣ್ಣನ್ನು ಕೆಂಪಾಗಿಸಿದೆ. ಏನೂ ಸಿಗದ ಕಾರಣ ಮುಡಾ ವಿಚಾರ ಎತ್ತಿದ್ದಾರೆ ಅಷ್ಟೇ. ಅಂತಿಮವಾಗಿ ಅವರಿಗೆ ಫಲ ಸಿಗೋಲ್ಲ. ಪ್ರಕರಣವನ್ನು ಕಾನೂನು ರೀತಿಯಲ್ಲಿ ಎದುರಿಸುತ್ತೇವೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕುಮಾರಸ್ವಾಮಿಯ ಅವರದ್ದೇ ಹಿಟ್ ಅಂಡ್ ರನ್. ಅವರ ಜೊತೆ ಇದ್ದು ರಾಜಕೀಯ ವಿಚಾರಗಳನ್ನು ನೋಡಿದ್ದೇವೆ. ಯಾವ ವಿಚಾರವನ್ನೂ ಪೂರ್ಣಗೊಳಿಸುವುದಿಲ್ಲ. ಸಿದ್ದರಾಮಯ್ಯ ಪತ್ನಿ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ಪತಿ ಅವರಿಗೆ ಮಾನಸಿಕ ಹಿಂಸೆ ಆಗಬಾರದು ಅಂತ ಈ ತೀರ್ಮಾನ ಮಾಡಿದ್ದಾರೆ. ಅದಕ್ಕೆ ಹಿಟ್ ಅಂಡ್ ರನ್, ಯೂ-ಟರ್ನ್ ಎಂದರೆ ಏನರ್ಥ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿ ಎಡಿಜಿಪಿ ಚಂದ್ರಶೇಖರ್ ಮೇಲೆ ಬಿದ್ದಿದ್ದಾರೆ. ಕಾನೂನಲ್ಲಿ ಅಧಿಕಾರಿಗಳಿಗೆ ಒಂದು ಲಿಮಿಟೆಷನ್ ಇದೆ. ಅವರು ಕೂಡ ಈ ದೇಶದ ಪ್ರಜೆ. ಅವರ ಬಗ್ಗೆ ಏನು ಬೇಕಾದರೂ ಮಾತನಾಡಬಹುದಾ. ಕಾನೂನಾತ್ಮಕ ವಿಚಾರವನ್ನು ಅಧಿಕಾರಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಎದುರಿಸಲಿ. ಕುಮಾರಸ್ವಾಮಿ ಮಾತನಾಡಿರೋದು ದೇವೇಗೌಡರು ಕರೆಕ್ಟ್ ಎಂದರೆ ನಾನೂ ಒಪ್ಪುತ್ತೇನೆ ಎಂದರು.
ಅರ್ಜುನನ ಹಿಂದೆ ಕೃಷ್ಣ ಇದ್ದ ಹಾಗೆ ಕುಮಾರಸ್ವಾಮಿ ಅವರಿಗೆ ದೇವೇಗೌಡರು ಇದ್ದಾರೆ. ಅವರ ರಕ್ಷಣೆ ಇರುವುದರಿಂದಲೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರದ ಮಂತ್ರಿ. ಒಳ್ಳೆಯ ಕೆಲಸಕ್ಕೆ ರಾಜ್ಯದ ಜೊತೆ ಇರಬೇಕು. ಅವರಿಗೆ ರಾಜ್ಯದ ಕೆಲಸ, ಕೇಂದ್ರ ಕೆಲಸ ಮುಖ್ಯವಾಗಿಲ್ಲ. ವಾರಕ್ಕೆ ಮೂರು ದಿನ ಬೆಂಗಳೂರಿಗೆ ಬಂದು ಅವರಿವರ ಬಗ್ಗೆ ಮಾತನಾಡೊದಷ್ಟೇ ಕೆಲಸ ಎಂದು ಜರಿದರು.
ಕಾವೇರಿ ಆರತಿ ವಿಚಾರವಾಗಿ ಇನ್ನೂ ಚರ್ಚೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿಯವರು ಸಂಪೂರ್ಣವಾಗಿ ತೀರ್ಮಾನ ಮಾಡುತ್ತಾರೆ. ಕಾವೇರಿ ಆರತಿ ಒಂದು ಬಾರಿ ನಡೆಸಿದರೆ ಪ್ರಯೋಜನವಿಲ್ಲ. ಶಾಶ್ವತವಾಗಿ ಕಾವೇರಿ ಆರತಿ ನಡೆಯಬೇಕು. ತಾಲೂಕು ಆಡಳಿತ ಸಾಂಕೇತಿಕವಾಗಿ ಕಾವೇರಿ ಆರತಿ ನಡೆಸುತ್ತಿದೆ. ಸರ್ಕಾರದ ಮಟ್ಟದಲ್ಲಿ ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಜಾಗ ಗುರುತಿಸಿ ಕಾವೇರಿ ಆರತಿ ನಡೆಸಲಾಗುವುದು. ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.