ಮೈಸೂರಿನ 43 ನಿವೇಶನಗಳು ಕುಮಾರಸ್ವಾಮಿ ಕುಟುಂಬ ವಾಪಸ್ ನೀಡುತ್ತಾರೆಯೇ? ಡಾ.ಎಂ.ಸಿ.ಸುಧಾಕರ್‌

KannadaprabhaNewsNetwork |  
Published : Oct 03, 2024, 01:20 AM ISTUpdated : Oct 03, 2024, 05:06 AM IST
Dr MC Sudhakar

ಸಾರಾಂಶ

ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುಟುಂಬದವರು ಒಟ್ಟು 43 ನಿವೇಶನ ಪಡೆದಿದ್ದು, ಅವುಗಳನ್ನು ಹಿಂತಿರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಆಗ್ರಹಿಸಿದ್ದಾರೆ.  

 ಚಿಕ್ಕಬಳ್ಳಾಪುರ : ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುಟುಂಬದವರು ಒಟ್ಟು 43 ನಿವೇಶನ ಪಡೆದಿದ್ದು, ಅ‍ವುಗಳನ್ನು ಹಿಂತಿರುಗಿಸುತ್ತಾರೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಪ್ರಶ್ನಿಸಿದರು.

ನಗರದ ಜಿಲ್ಲಾ ಜಿಲ್ಲಾಸ್ಪತ್ರೆ ಆವರಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 8.20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಡಿಯಾಲಜಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ಬುಧವಾರ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವ ಆಧಾರದಲ್ಲಿ ಸೈಟ್‌ ಪಡೆದರು

ಮೈಸೂರಲ್ಲಿ ಕುಮಾರಸ್ವಾಮಿ ಅವರ ಕುಟುಂಬ ಸದಸ್ಯರ ಹೆಸರಲ್ಲಿ 43 ಸೈಟ್‌ಗಳಿವೆ. 1984 ರಲ್ಲಿ ಯಾವ ಅಧಾರದ ಮೇಲೆ ಸೈಟ್ ಪಡೆದುಕೊಂಡರು. ಮೈಸೂರಲ್ಲಿ ವಾಸ ಇದ್ದೀವಿ ಅಂತ ಸಹೋದರಿಯರು, ಭಾವಂದಿರು, ಸಂಬಂಧಿಕರ ಹೆಸರಿನಲ್ಲಿ ಸೈಟ್‌ ಪಡೆದಿದ್ದಾರೆ. ಅವುಗಳನ್ನು ವಾಪಾಸ್ ಕುಮಾರಸ್ವಾಮಿ ವಾಪಸ್ ಕೊಡಲಿ ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪ ಮಾಡಿದ ಮಾತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳ್ಳರಾಗಲು ಸಾಧ್ಯವಿಲ್ಲ. ಕಳ್ಳ ಎಂಬ ಆರೋಪ ಸಾಬೀತು ಮಾಡಬೇಕು. ಸಿದ್ದರಾಮಯ್ಯನವರು ನನ್ನ ಪ್ರಕಾರ ಯಾವುದೇ ತಪ್ಪು ಮಾಡಿಲ್ಲ. ಜಮೀನು ಸ್ವಾಧೀನ ಕಾರಣ ನಿವೇಶನ ಪಡೆದುಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಮರ್ಥಿಸಿದರು.

ಸಿಎಂ ಪತ್ನಿ ಸೈಟ್‌ ವಾಪಸ್‌ನೈತಿಕತೆಯ ವಿಚಾರ ಇದ್ದುದರಿಂದ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರು ಮೂಡಾ ನಿವೇಶನಗಳನ್ನು ವಾಪಾಸ್ ಕೊಟ್ಟಿದ್ದಾರೆ.ತಪ್ಪಾಗಿದೆ ಅಂತ ವಾಪಾಸ್ ಕೊಟ್ಟಿಲ್ಲ. ರಾಜಕಾರಣದಲ್ಲಿ ತಪ್ಪು ಮಾಡದವರಿಗೂ ಕಿರುಕುಳದಿಂದ ಮಾನಸಿಕವಾಗಿ ನೋವಾಗಿದೆ.40 ವರ್ಷ ಕಳಂಕರಹಿತ ರಾಜಕಾರಣ ಮಾಡಿರೋರು ಸಿದ್ದರಾಮಯ್ಯ.ಕೆಟ್ಟ ಹೆಸರು ಬಂತು ಅಂತ ಪತ್ನಿಯವರು ಸೈಟ್ ವಾಪಾಸ್ ಮಾಡಿದ್ದಾರೆ ಎಂದರು.

ಮುಡಾದಲ್ಲಿ ಯಾವುದೇ ಹಣ ಡೈವರ್ಟ್ ಆಗಿಲ್ಲ. ಹಿಂದಿನ ಸರ್ಕಾರ ಸಹ 310 ಕೋಟಿ ಖರ್ಚು ಮಾಡಿದೆ. ಸಿದ್ದರಾಮಯ್ಯ ಬಂದ ಮೇಲೆ 60 ಕೋಟಿ ಖರ್ಚು ಆಗಿರಬಹುದು. ಶ್ರೀರಂಗಪಟ್ಟಣ ಹಾಗೂ ವರುಣಾ ಕ್ಷೇತ್ರ ಮುಡಾ ವ್ಯಾಪ್ತಿಗೆ ಬರುತ್ತದೆ. ನಿಯಮಗಳಲ್ಲಿ ಅವಕಾಶ ಇದ್ದು ಅಭಿವೃದ್ಧಿಗೆ ಕೊಟ್ಟಿರೋದು ತಪ್ಪಾ. ಸರ್ಕಾರ ಬೀಳಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕುತಂತ್ರ ಮಾಡ್ತಿದ್ದಾರೆ. ಕುಮಾರಸ್ವಾಮಿಗೆ ಕೇಂದ್ರದಲ್ಲಿ ಕೆಲಸ ಮಾಡಲು ಕಷ್ಟ ಆಗ್ತಿರಬಹುದು. ಅವರಿಗೆ ಭಾಷಾ ಸಮಸ್ಯೆ ಇದೆ. .ರಾಜ್ಯಕ್ಕೆ ಮರಳಿ ಬರೋದಕ್ಕೆ ಒದ್ದಾಡ್ತಿದ್ದಾರೆ. ಯಾವ ಆರೋಪ ಮಾಡಿದರೂ ಅದು ಅರ್ಧಂ ಬರ್ಧ ಇರುತ್ತದೆ ಎಂದು ಹೇಳಿದರು.

ಬಿಎಸ್‌ವೈ ಅರೆಸ್ಟ್‌ ತಪ್ಪಿಸಿದ್ದು ಯಾರು?

ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾಕೆ ಅರೆಸ್ಟ್ ಆಗಲಿಲ್ಲ. ಬಂಧನದಿಂದ ತಪ್ಪಿಸಿದವರು ಯಾರು, ದ್ವೇಷದ ರಾಜಕಾರಣ ಮಾಡಿದ್ರೆ ಯಡಿಯೂರಪ್ಪ ಅರೆಸ್ಟ್ ಮಾಡಬಹುದಿತ್ತು ಎಂದರು.ಮೆಡಿಕಲ್ ಕಾಲೇಜು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ.ಎಂ.ಸಿ.ಸುಧಾಕರ್ ರಾಜಮನೆತನದವರು ನೂರು ಎಕರೆ ಕೊಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ನೀಡಿದ ಹೇಳಿಕೆಗೆ ಪ್ರತಿಕ್ರಿಸಿದ ಸಚಿವರು, ಡಾಲರ್ಸ್ ಕಾಲೋನಿಯಲ್ಲಿ ನಮ್ಮ ತಂದೆಯವರಿಗೆ ಬಂದ ಬದಲಿ ನಿವೇಶನ ಒಂದೂವರೆ ಲಕ್ಷ ಹಣ ಕಟ್ಟಿ ಪಡೆದಿರೋದು. ಬ್ಯಾಂಕ್ ಸಾಲ ಪಡೆದು ನಾನು ಮನೆ ಕಟ್ಟಿದ್ದೇನೆ. ಆದರೆ ಮೇಷ್ಟ್ರು ಮಗ ಅಂತ ಹೇಳಿ ಸಂಸದರು ಸಾವಿರಾರು ಕೋಟಿ ಒಡೆಯ ಹೇಗಾದರು ಅಂತ ಹೇಳಲಿ ಎಂದು ಸವಾಲು ಹಾಕಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪತ್ರಕರ್ತರು ಹೆದರದೆ ಕರ್ತವ್ಯ ನಿರ್ವಹಿಸಿ: ಬಸವರಾಜ ಹೊರಟ್ಟಿ
ಸಂವಿಧಾನದ ಕುರಿತು ಜಾಗೃತಿ ಮೂಡಿಸಿ: ಸತೀಶ್ ಜಾರಕಿಹೊಳಿ