ಹೊಸ ಸಂಪುಟದಲ್ಲೇ ಬದಲಾವಣೆಗೆ ಕೈ ಚಿಂತನೆ : ಯಾರು ಔಟ್, ಯಾರು ಇನ್ ?

Published : Aug 07, 2026, 05:18 AM IST
Karnataka Congress Rahul Gandhi

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನಗೊಂಡಿರುವ ಶಾಸಕರು ಹಾಗೂ ನಾಯಕರನ್ನು ಸಮಾಧಾನಪಡಿಸಲು ಸಂಪುಟದಲ್ಲಿ ಕೆಲ ಸಣ್ಣ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ ಎನ್ನಲಾಗಿದೆ.

 ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನಗೊಂಡಿರುವ ಶಾಸಕರು ಹಾಗೂ ನಾಯಕರನ್ನು ಸಮಾಧಾನಪಡಿಸಲು ಸಂಪುಟದಲ್ಲಿ ಕೆಲ ಸಣ್ಣ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ ಎನ್ನಲಾಗಿದೆ.

ಕುರುಬ ಸಮುದಾಯದಿಂದ ತಾವು ಸೂಚಿಸಿದ್ದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹೆಸರು ಪರಿಗಣಿಸದೆ ಹಠಾತ್ ಆಗಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಪರಿಗಣಿಸಿದ್ದು ಹಾಗೂ ಅಲ್ಪಸಂಖ್ಯಾತ ಶಾಸಕರೊಬ್ಬರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅವರ ಬೇಸರ ನೀಗಿಸಲು ಶಿವಣ್ಣವರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಚಿಂತನೆ ಕಾಂಗ್ರೆಸ್‌ನಲ್ಲಿದೆ.

ಹಾಲಿ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಇರುವುದರಿಂದ ಆ ಸ್ಥಾನಕ್ಕೆ ಶಿವಣ್ಣವರ ಅವರಿಗೆ ಕುರುಬ ಕೋಟದಿಂದ ಅವಕಾಶ ಕೊಡಬಹುದು. ಹೀಗೆ ಮಾಡಿದರೆ ಇಡೀ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ದೊರೆಯದಂತಾಗುತ್ತದೆ. ಹೀಗಾಗಿ ಮಹಿಳಾ ಕೋಟದಿಂದ ಒಬ್ಬರಿಗಾದರೂ ಅವಕಾಶ ನೀಡುವ ಅನಿವಾರ್ಯತೆಯಿದೆ.

ಈ ಅನಿವಾರ್ಯತೆ ನೀಗಿಸಲು ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಸಂಪುಟದಿಂದ ಕೈ ಬಿಟ್ಟು ಅವರ ಸ್ಥಾನಕ್ಕೆ ಅವರ ಪುತ್ರಿ ರೂಪಾ ಶಶಿಧರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ. ಹೀಗೆ ಮಾಡಿದರೆ ಮಹಿಳಾ ಕೋಟಾ ಹಾಗೂ ಕೋಲಾರ ಜಿಲ್ಲೆಗೂ ಪ್ರಾತಿನಿಧ್ಯ ದೊರೆತಂತೆ ಆಗುತ್ತದೆ ಎಂಬುದು ಉದ್ದೇಶ.

ಆದರೆ, ಈ ಚಿಂತನೆ ಕಾರ್ಯಗತಗೊಳ್ಳಬೇಕಾದರೆ ಡಿಸಿಎಂ ಹುದ್ದೆಗೆ ಬೇಡಿಕೆಯಿಟ್ಟಿದ್ದ ಮುನಿಯಪ್ಪ ಅವರನ್ನು ಸಚಿವ ಸ್ಥಾನಬಿಡಲು ಮನವೊಲಿಸಬೇಕು. ಆದರೆ, ಮುನಿಯಪ್ಪ ಅವರ ಆಪ್ತ ಮೂಲಗಳು, ಇಂತಹ ಯಾವುದೇ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕತ್ವ ಈ ಕ್ಷಣದವರೆಗೂ ಮುನಿಯಪ್ಪ ಅವರೊಂದಿಗೆ ಚರ್ಚಿಸಿಲ್ಲ, ಹೀಗಾಗಿ ಅಂತಹ ಪ್ರಶ್ನೆ ಉದ್ಭವಿಸುವುದಿಲ್ಲ ಎನ್ನುತ್ತವೆ.

ಒಂದು ವೇಳೆ, ಈ ಸೂತ್ರ ಕಾರ್ಯಗತಗೊಳ್ಳದಿದ್ದರೆ ಸಿದ್ದರಾಮಯ್ಯ ಅವರ ಮನಸ್ಸಿಗೆ ವಿರುದ್ಧವಾಗಿ ಸಂಪುಟಕ್ಕೆ ತೆಗೆದುಕೊಂಡಿರುವ ಮುಸ್ಲಿಂ ಸಚಿವರೊಬ್ಬರನ್ನು ಕೈ ಬಿಟ್ಟು ಆ ಸ್ಥಾನಕ್ಕೆ ಕಲ್ಯಾಣ ಕರ್ನಾಟಕ ಭಾಗದ ಮಹಿಳೆ ಖನೀಜ್‌ ಫಾತಿಮಾ ಅವರಿಗೆ ಸ್ಥಾನ ನೀಡಬಹುದೇ ಎಂಬ ಚಿಂತನೆಯೂ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ ಬಳ್ಳಾರಿ ಮೂಲದ ಸಚಿವರೊಬ್ಬರ ರಾಜೀನಾಮೆ ಕೊಡಿಸಿ ಅದೇ ಜಿಲ್ಲೆಯ ಅನ್ನಪೂರ್ಣಾ ತುಕಾರಾಂ ಅವರಿಗೆ ಮಂತ್ರಿ ಹುದ್ದೆನನೀಡುವ ಚಿಂತನೆಯೂ ಇದೆ ಎಂದು ಗೊತ್ತಾಗಿದೆ.

ಸಂಪುಟಕ್ಕೆ ಎಂ. ಕೃಷ್ಣಪ್ಪ?:

ಸಚಿವ ಸ್ಥಾನ ಸಿಗದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಹಾಲಿ ಸಂಪುಟದಲ್ಲಿರುವ ಒಕ್ಕಲಿಗ ಸಚಿವರೊಬ್ಬರನ್ನು ಕೈ ಬಿಡುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆಯಿದೆ.

ವಾಸ್ತವವಾಗಿ ಕೃಷ್ಣಪ್ಪ ಅವರ ಮನವೊಲಿಸಲು ಅವರ ಪುತ್ರ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರಿಗೆ ಪ್ರಬಲ ನಿಗಮ- ಮಂಡಳಿ ನೀಡುವ ಭರವಸೆಯನ್ನು ಪಕ್ಷ ನೀಡಿತ್ತು. ಅಲ್ಲದೆ, ಖುದ್ದು ರಾಹುಲ್‌ ಗಾಂಧಿ ಅವರೇ ದೂರವಾಣಿ ಕರೆ ಮಾಡಿ ಕೃಷ್ಣಪ್ಪ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ, ಸಚಿವ ಸ್ಥಾನಕ್ಕೆ ಕೃಷ್ಣಪ್ಪ ಅವರು ಪಟ್ಟು ಹಿಡಿದಿರುವುದರಿಂದ ಒಕ್ಕಲಿಗ ಸಚಿವರೊಬ್ಬರನ್ನು ಕೈಬಿಟ್ಟು ಅವರಿಗೆ ಅವಕಾಶ ನೀಡಲು ಸಾಧ್ಯವೇ ಎಂದು ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ನಾಯಕರ ಲೆಕ್ಕಾಚಾರ ಏನು?

- ಕುರುಬ ಕೋಟಾದಲ್ಲಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಆಗಿದ್ದ ಗಾಯತ್ರಿ ಶಾಂತೇಗೌಡರನ್ನು ಕೈಬಿಡಲಾಗಿತ್ತು

- ಇದೀಗ ಅದೇ ಕುರುಬ ಕೋಟಾದಲ್ಲಿ ಸಿದ್ದರಾಮಯ್ಯ ಆಪ್ತ ಬಸವರಾಜ ಶಿವಣ್ಣವರಗೆ ಸ್ಥಾನ ಸಂಭವ

- ಹಿರಿಯ ಸಚಿವ ಕೆ.ಎಚ್‌. ಮುನಿಯಪ್ಪರನ್ನು ಕೈಬಿಟ್ಟು ಮಗಳು ರೂಪಾ ಶಶಿಧರ್‌ಗೆ ಸಚಿವ ಹುದ್ದೆ ನಿರೀಕ್ಷೆ

- ಈ ರೀತಿ ಮಾಡಿದರೆ ಮಹಿಳಾ ಕೋಟಾ ಭರ್ತಿ. ಪ್ರಾತಿನಿಧ್ಯ ರಹಿತ ಕೋಲಾರ ಜಿಲ್ಲೆಗೂ ಸ್ಥಾನಮಾನ

- ಬಳ್ಳಾರಿಯ ನೂತನ ಸಚಿವರೊಬ್ಬರ ಕೈಬಿಟ್ಟು ಅನ್ನಪೂರ್ಣಾ ತುಕಾರಾಂಗೆ ಮಂತ್ರಿಪಟ್ಟ ಗುಸುಗುಸು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಫೀಲ್ಡಿಗಿಳಿದ ಹೊಸ ಸಚಿವರು ಜಿಲ್ಲೆಗಳಲ್ಲಿ ಬರ ಅಧ್ಯಯನ
ಆ.15ಕ್ಕೆ ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’