ಆ.15ಕ್ಕೆ ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’

Published : Aug 06, 2026, 11:35 AM IST
vidhan soudha

ಸಾರಾಂಶ

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ‘ಬೆಂಗಳೂರು ನಗರದ ಫ್ರೀಡಂ ಹಬ್ಬ’ವಾಗಿ ವಿಶಿಷ್ಟ ರೀತಿಯಲ್ಲಿ, ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

  ಬೆಂಗಳೂರು :  ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ‘ಬೆಂಗಳೂರು ನಗರದ ಫ್ರೀಡಂ ಹಬ್ಬ’ವಾಗಿ ವಿಶಿಷ್ಟ ರೀತಿಯಲ್ಲಿ, ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ವಿಧಾನಸೌಧದ ಮೆಟ್ಟಿಲುಗಳ ಮುಂದೆ ಫ್ರೀಡಂ ಹಬ್ಬ ಆಚರಿಸಲಾಗುವುದು. ಇಡೀ ದಿನ ಬೆಂಗಳೂರಿನ ಎಲ್ಲಾ ಭಾಷೆ, ಸಂಸ್ಕೃತಿಯ ಜನ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದಿನಾಚರಣೆಯ ಮಹತ್ವ, ಜೊತೆಗೆ ಸಂಭ್ರಮ ಎಲ್ಲವೂ ಇರಲಿದೆ. ಇದಕ್ಕಾಗಿ ಸರ್ಕಾರದ ಅನುಮತಿ ಪಡೆದಿದ್ದು, ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು.

ಪೀಪಲ್ಸ್‌ ಪೆರೇಡ್‌:

ಬೆಳಗ್ಗೆ 11ರ ನಂತರ ವಿಧಾನಸೌಧದಲ್ಲಿ ಪೀಪಲ್ಸ್ ಪೆರೇಡ್ ನಡೆಯಲಿದೆ. ನಗರದ ಕೊಡವ, ಕೊಂಕಣಿ, ಉತ್ತರ ಕರ್ನಾಟಕ, ಲಂಬಾಣಿ, ಮಲೆಯಾಳಿ, ತಮಿಳು, ಬೆಂಗಾಲಿ ಸೇರಿ ವಿವಿಧ ಸಮುದಾಯಗಳಿಂದ ಅವರ ಉಡುಗೆ, ತೊಡುಗೆ, ಜೀವನ ಶೈಲಿ, ಜಾನಪದ ಕಲೆಗಳ ಕುರಿತು 30 ತಂಡಗಳಿಂದ ಪೆರೇಡ್ ನಡೆಯಲಿದೆ.

‘ಇಂಡಿಯಾ ಪೆರೇಡ್’, ಸ್ವಾತಂತ್ರ್ಯ ಚಳವಳಿ ‘ಲಿವಿಂಗ್ ಮ್ಯೂಸಿಯಂ’ ನಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆ ಬಿಂಬಿಸುವ ಹಳೆಯ 19 ಜಿಲ್ಲೆಗಳಿಂದ ಒಂದೊಂದು ಐತಿಹಾಸಿಕ ಘಟನೆಗಳ ಕಿರು ನಾಟಕ, ಸಂವಿಧಾನ ಚೌಕ, ಮಕ್ಕಳ ಕಲಿಕೆ ಮತ್ತು ಚಟುವಟಿಕೆ ವಲಯಗಳು, ವಿಧಾನಸೌಧದ ಮಾರ್ಗದರ್ಶಿ ಪ್ರವಾಸಗಳು, 200 ಅಡಿಗಳ ಸಾರ್ವಜನಿಕ ಕಲಾ ಗೋಡೆ, ಸೋಲ್ ಸಂತೆ ಮಳಿಗೆಗಳು, ಸಂಜೆಯ ಸಂಗೀತ ಕಛೇರಿ ಮತ್ತು ಭವ್ಯ ಪಟಾಕಿ ಬಾಣ-ಬಿರುಸುಗಳ ಪ್ರದರ್ಶನ, ರಾತ್ರಿ ಸಂಗೀತ ರಸಸಂಜೆ ನಡೆಯಲಿದ್ದು, ಖ್ಯಾತ ಗಾಯಕ-ಗಾಯಕಿಯರಾದ ಎಂ.ಡಿ.ಪಲ್ಲವಿ, ರಘು ದೀಕ್ಷಿತ್, ಸಂಜಿತ್ ಹೆಗ್ಡೆ, ಸಂತೋಷ್, ಪ್ರವೀಣ ರಾವ್, ಪ್ರವೀಣ್ ಗೋಡ್ಕಿಂಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ಮಕ್ಕಳಿಗಾಗಿ ಸ್ಪರ್ಧೆ

ಮಕ್ಕಳಿಗಾಗಿ ಚಿತ್ರಬರೆಯುವ ಸ್ಪರ್ಧೆ, ಗೇಮ್ಸ್, ಮುಖದ ಮೇಲೆ ಬಣ್ಣ ಹಚ್ಚಿಕೊಳ್ಳುವ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ಮಕ್ಕಳಿಗೆ ವಿಧಾನಸಭಾ ಅಧಿವೇಶನ ಗ್ಯಾಲರಿಗೆ ಪ್ರವೇಶ, ಅಂದು ಮಕ್ಕಳಿಗೆ ಯಾವುದೇ ಪಾಸ್ ಅಗತ್ಯವಿಲ್ಲ. ಮಕ್ಕಳ ಜೊತೆ ಬರುವ ಪೋಷಕರಿಗೆ ಮಕ್ಕಳೇ ಪಾಸ್, ಮಕ್ಕಳಿದ್ದರೆ ಸಾಕು ಅವರಿಗೆ ಗ್ಯಾಲರಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದರು.

ಅಲ್ಲದೆ, ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಶಿವಪುರ ಸತ್ಯಾಗ್ರಹ, ಜಲಿಯನ್ ವಾಲಾಬಾಗ್, ಮೈಸೂರು-ಆಂಗ್ಲೋ ಇಂಡಿಯನ್ ಘಟನೆಗಳ ಕಿರು ನಾಟಕ ಏರ್ಪಡಿಸಲಾಗಿದೆ. 19 ಜಿಲ್ಲೆಗಳಿಂದ ಸ್ವಾತಂತ್ರ್ಯ ಹೋರಾಟಕ್ಕೆ ಆ ಜಿಲ್ಲೆಗಳ ಕೊಡುಗೆ ಏನಿತ್ತು ಎಂಬುದರ ಕುರಿತು ಹೇಳಲು ಒಂದೊಂದು ಸ್ಟಾಲ್ ತೆರೆಯಲಾಗುವುದು.

ಫ್ರೀಡಂ ಹಬ್ಬಕ್ಕೆ ಬರಬೇಕಾ? ನೋಂದಣಿ ಮಾಡಿಕೊಳ್ಳಿ

ವಿಧಾನಸೌಧಕ್ಕೆ ಪ್ರವೇಶ ಕಲ್ಪಿಸುವುದರಿಂದ ಇದು ಅತಿ ಸೂಕ್ಷ್ಮ ವಲಯವಾಗಿದ್ದರೂ ಪ್ರವೇಶ ಉಚಿತ. ಹೀಗಾಗಿ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಭಾಗವಹಿಸುವವರ ನೋಂದಣಿ ಕಡ್ಡಾಯ. ಫ್ರೀಡಂ ಹಬ್ಬದ ವೆಬ್ ಸೈಟ್ ಮತ್ತು ಸಹಾಯವಾಣಿ ಮೂಲಕ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ಇದರ ವಿವರಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಬಿ ಜಿ ರಾಮ್‌ಜಿ ಸ್ಕೀಂ ಜಾರಿಗೆ ಮೊದಲ ತಿಂಗಳೇ ಭಾರಿ ಹಿನ್ನಡೆ
ಬಡಿದೆದ್ದ ಬಂಡಾಯ ಬಹುತೇಕ ಥಂಡಾಯ