ಪಹಲ್ಗಾಂ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ರಾಜ್ಯ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು : ಪಹಲ್ಗಾಂ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ರಾಜ್ಯ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕೆ.ಆರ್.ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್ಕ್‌ಸ್ಕ್ವೇರ್‌ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಲಿದೆ. ಈ ವೇಳೆ ಸರ್ಕಾರದ ಎಲ್ಲಾ ಸಚಿವರು, ಶಾಸಕರು, ಕೆಪಿಸಿಸಿ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪಕ್ಷ ಸೂಚನೆ ನೀಡಿದೆ.
ಸಾರ್ವಜನಿಕರಿಗೂ ಕರೆ:
ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಜೊತೆಗೆ ‘ದೇಶಪ್ರೇಮ ಮೆರೆಯೋಣ, ಐಕ್ಯತೆ ಸಾರೋಣ’ ಎಂಬ ಘೋಷವ್ಯಾಕ್ಯದಡಿ ಸರ್ಕಾರಿ, ಖಾಸಗಿ ನೌಕರರು, ಚಿತ್ರರಂಗದವರು, ಪಕ್ಷ ಭೇದ ಮರೆತು ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದೆ. ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಡ್ಡಾಯವಾಗಿ ಭಾರತದ ಧ್ವಜ ಮಾತ್ರ ಪ್ರದರ್ಶಿಸುವಂತೆ ಸೂಚನೆ ನೀಡಲಾಗಿದೆ.
ಬೆಂಬಲ ಪ್ರತಿಯೊಬ್ಬರ ಕರ್ತವ್ಯ:
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಒಕ್ಕೊರಲಿನ ಬೆಂಬಲ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯಲ್ಲಿ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ಮಹಿಳೆಯರು, ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ನೌಕರರು, ಸಂಘ ಸಂಸ್ಥೆಗಳು, ಚಲನಚಿತ್ರರಂಗದವರು ಸೇರಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಹೀಗಿರಲಿದೆ ಕೈ ಯಾತ್ರೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ
ಕೆ.ಆರ್. ವೃತ್ತದಿಂದ ಮಿನ್ಸ್ಕ್ ಸ್ವ್ಕೇರವವರೆಗೆ ನಡೆಯಲಿದೆ ಬೃಹತ್ ಯಾತ್ರೆ
ಶಾಸಕರು, ಕಾಂಗ್ರೆಸ್ ಪದಾಧಿಕಾರಿಗಳಿಗೆ ಕಡ್ಡಾಯ ಹಾಜರಿಗೆ ಸೂಚನೆ
ಸರ್ಕಾರಿ, ಖಾಸಗಿ ನೌಕರರಿಗೂ ಯಾತ್ರೆಯಲ್ಲಿ ಭಾಗಿಯಾಗುವಂತೆ ಕರೆ
ಬೆಳಗ್ಗೆ 9.30ಕ್ಕೆ ನಡೆವ ಯಾತ್ರೆಯಲ್ಲಿ ಕೇವಲ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಸೂಚನೆ