;Resize=(412,232))
ರಾಮನಗರ : ನಮ್ಮ ನಾಯಕರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಹೇಳಿಕೆಗೆ ನಾನು ಈಗಲೂ, ಕೊನೆಯವರಗೂ ಕೂಡ ಬದ್ಧವಾಗಿರುತ್ತೇನೆ. ಭಗವಂತನಿಂದ ಶಕ್ತಿ ಪಡೆದವರು ಕೊಟ್ಟ ದಿನಾಂಕವನ್ನೇ ನಾನು ಹೇಳಿದ್ದು, ಡಿಸಿಎಂ ಅವರಿಗೆ ಅಜ್ಜಯ್ಯ ಅವರ ಆರ್ಶೀವಾದ ಸದಾ ಇರುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಭಗವಂತನಿಂದ ಶಕ್ತಿಯನ್ನು ಪಡೆದುಕೊಂಡಿದ್ದಾರೋ ಅವರು ಕೊಟ್ಟಿದ್ದ ದಿನಾಂಕವನ್ನು ನಾನು ಹೇಳಿದ್ದೇನೆ. ಆ ಕಾರಣದಿಂದಲೇ ಜ.6 ಅಥವಾ 9 ಎಂದು ದಿನಾಂಕ ಹೇಳಿದ್ದೇನೆ. ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ ಅಲ್ಲ. ನಮ್ಮ ನಾಯಕರು ಸಿಎಂ ಆಗ್ತಾರೆ ಎನ್ನುವುದಕ್ಕೆ ಸದಾ ಬದ್ಧನಾಗಿರುವೆ. ಎಲ್ಲಾ ನಾಯಕರಿಗೂ ಶಕ್ತಿ ತುಂಬಲು ಒಬ್ಬೊಬ್ಬರು ಗುರುಗಳು ಇರುತ್ತಾರೆ. ಅವರಿಂದ ರಾಜಕಾರಣಿಗಳು ಆಶೀರ್ವಾದ ಪಡೆಯುತ್ತಾರೆ. ಅದರಂತೆ ಡಿ.ಕೆ.ಶಿವಕುಮಾರ್ ಅವರು ನೊಣವಿನಕೆರೆಯ ಅಜ್ಜಯ್ಯ (ಲಿಂಗೈಕ್ಯ ಗಂಗಾಧರ ಜಗದ್ಗುರುಗಳು) ಅವರಿಂದ ಆರ್ಶೀವಾದ ಪಡೆಯುತ್ತಾರೆ. ನಾನು ಸಹ ಹೊಸ ವರ್ಷಕ್ಕೆ ಹೊಸ ಸಿಎಂ ಆಗುತ್ತಾರೆಂದು ದೇವರನ್ನು ನಂಬಿ ಕಾಯುತ್ತಿದ್ದೇನೆ ಎಂದರು.
ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳು, ನೀರಾವರಿ, ಕೆರೆತುಂಬಿಸುವ ಕೆಲಸ, ರಸ್ತೆ ಅಭಿವೃದ್ದಿ ಸೇರಿದಂತೆ ಸಾಕಷ್ಟು ಚರ್ಚೆಗಳು ನಡೆದಿವೆ. ವಿರೋಧ ಪಕ್ಷದವರು ವಿನಾಕಾರಣ ಸಿಎಂ ಯಾರು ಅನ್ನೋ ಚರ್ಚೆ ಮಾಡಿ ಅಧಿವೇಶನದ ಕಾಲಹರಣ ಮಾಡಿದರು. ₹5000 ಕೋಟಿ ಗೃಹಲಕ್ಷ್ಮಿ ಹಣ ಚುನಾವಣೆಗಳಿಗೆ ಬಳಕೆ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪ ಸುಳ್ಳು. 2 ತಿಂಗಳು ಹಾಕಿಲ್ಲ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಸಚಿವರಿಗೆ ಕೊಟ್ಟಿರಲಿಲ್ಲ. ಆ ಬಗ್ಗೆ ಸದನದಲ್ಲೇ ಸಚಿವರು ಮತ್ತು ಸಿಎಂ ಸ್ಪಷ್ಟನೆ ಸಹ ಕೊಟ್ಟಿದ್ದಾರೆ ಎಂದು ಇಕ್ಬಾಲ್ ಹೇಳಿದರು.