;Resize=(412,232))
ಹಾಸನ : ರಾಜ್ಯ ರಾಜಕಾರಣದಲ್ಲಿ ಇಡ್ಲಿ-ವಡೆ, ನಾಟಿ ಕೋಳಿ ತಿಂದ ಡಿನ್ನರ್ ಪಾಲಿಟಿಕ್ಸ್ ಕುರಿತು ಮಾತನಾಡುವುದಿಲ್ಲ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಸಹ ನನಗೆ ಬೇಕಾಗಿಲ್ಲ. ಆದರೆ, ರಾಜ್ಯದ ಜನ 140 ಸೀಟು ನೀಡಿದ್ದಾರೆನ್ನುವ ಕಾಂಗ್ರೆಸ್ ನಾಯಕರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಾರೆ. ಕೇಂದ್ರವನ್ನ ಮನವೊಲೊಸೋದಕ್ಕೆ ನಿಮ್ಮ ಕೊಡುಗೆ ಏನು? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಶಾಸಕ ಎಚ್.ಪಿ.ಸ್ವರೂಪ್ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಜೀವನ, ಆಡಳಿತ ಅನುಭವ, ರಾಜ್ಯ ಸರ್ಕಾರದ ಕಾರ್ಯವೈಖರಿಯಲ್ಲಿ ನನಗೆ ಭಗವಂತ 5ನೇ ಬಾರಿ ಜೀವನ ಕೊಟ್ಟಿದ್ದಾನೆ. ನಾನು 2 ಬಾರಿ ಮುಖ್ಯಮಂತ್ರಿ ಆಗಿದ್ದು, ಆಡಳಿತದ ಅನುಭವವಿದೆ. ಖಜಾನೆ ಖಾಲಿ ಮಾಡುವುದೇ ಅಭಿವೃದ್ಧಿ ಅಲ್ಲ. ಹಣವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಮಾಡಬಹುದು. ಅದಕ್ಕಾಗಿ ಕೇಂದ್ರ ಸರ್ಕಾರವಾಗಲಿ, ಬೇರೆ ಯಾವ ಸರ್ಕಾರಗಳ ಆರ್ಥಿಕ ನೆರವೂ ನನಗೆ ಬೇಕಿಲ್ಲ. ರಾಜ್ಯದ ಜನರು ಕಡೆಯ ಬಾರಿ ಒಂದು ಅವಕಾಶ ಕೊಡಲಿ ಎಂದು ಕೇಳಿಕೊಂಡರು.
ರಾಜಕೀಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಭಿಕ್ಷೆ ಕೊಡ್ರಪ್ಪಾ, ಒಂದು ಮತ ಹಾಕಿ’ ಎಂದು ಬೇಡಿಕೊಂಡೆ. ಆದರೂ ಜನ ನಮಗೆ ಮತ ಹಾಕಲಿಲ್ಲ. ಅದು ನನ್ನ ಬದುಕಿನ ಅತ್ಯಂತ ನೋವಿನ ಕ್ಷಣ. ನಾನು ಮತ್ತೆ ಸಿಎಂ ಆಗಬೇಕೆಂಬ ಬಯಕೆ ನನಗಿಲ್ಲ. ನಾನು ಬದುಕಿರುವವರೆಗೆ ನನ್ನ ಮೇಲೆ ವಿಶ್ವಾಸವಿಟ್ಟು ಬರುವ ಬಡವನಿಗೆ ಏನಾದರೂ ಶಕ್ತಿ ತುಂಬಲು ಸಾಧ್ಯವಾಗುತ್ತದೆಯೇ ಎನ್ನುವುದೇ ನನ್ನ ಚಿಂತೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಪರಿಸ್ಥಿತಿ ಹೇಗಿತ್ತು ಎಂದರೆ ಯಾರ ಕೈಗೂ ಸಿಗದೆ ಒಂದು ಅರಣ್ಯಕ್ಕೆ ಹೋಗಿ ಗುಪ್ತವಾಗಿ ಇರಬೇಕು ಅನ್ನಿಸಿತ್ತು ಎಂದು ಅವರು ಮನದಾಳದ ನೋವು ಹಂಚಿಕೊಂಡರು.
ನನ್ನಲ್ಲಿ ಯಾವುದೇ ಸಣ್ಣತನವಿಲ್ಲ. ಮುಕ್ತವಾಗಿ ಬಿಜೆಪಿ ಜೊತೆ ಸಂಬಂಧ ಬೆಳೆಸಿದ್ದೇನೆ. ಕಾಂಗ್ರೆಸ್ ಅನ್ನು ನಾನು ಚೆನ್ನಾಗಿ ನೋಡಿದ್ದೇನೆ. ದೇವೇಗೌಡರು ಕಾಂಗ್ರೆಸ್ ನಂಬಿ ಅವರ ಜೀವನ ಹಾಳು ಮಾಡಿಕೊಂಡರು. ದೇವೇಗೌಡರ ರಾಜಕೀಯ ಜೀವನ ಹಾಳಾಗಲು ಪ್ರಮುಖ ಕಾರಣವೇ ಕಾಂಗ್ರೆಸ್ ಎಂದು ಗಂಭೀರ ಆರೋಪ ಮಾಡಿದರು.
ನರೆಗಾ ಜಾರಿಯಾದ ನಂತರ ಎಷ್ಟು ಲಕ್ಷ ಕೋಟಿ ರು. ಖರ್ಚು ಮಾಡಿದ್ದೀರಿ? ರೈತರಿಗೆ ಗೊಬ್ಬರ ಖರೀದಿಗೆ ಎಷ್ಟು ಹಣ ಕೊಟ್ಟಿದ್ದೀರಿ?. ಗಾಂಧೀಜಿ ಹೆಸರಿನಲ್ಲಿ ಎಷ್ಟು ಲೂಟಿ ಮಾಡಿದ್ದೀರಿ? ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ ಅವರು, ಎತ್ತಿನಹೊಳೆ ರಾಜ್ಯ ಸರ್ಕಾರದ ಯೋಜನೆ. ಪರಿಸರ ಇಲಾಖೆಯನ್ನು ಕನ್ವಿನ್ಸ್ ಮಾಡಬೇಕಾದ್ದದ್ದು ಸರ್ಕಾರದ ಕೆಲಸ ಅಲ್ಲವೇ? ಯೋಜನೆ ಆರಂಭವಾಗಿ ಎಷ್ಟು ವರ್ಷ ಆಯ್ತು? ಎಷ್ಟು ಹಣ ಖರ್ಚಾಗಿದೆ? ಎಷ್ಟು ನೀರು ಬಂದಿದೆ? ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಎಂದು ಸರಣಿ ಪ್ರಶ್ನೆಗಳನ್ನು ಎಸೆದರು.
ಸಿದ್ದು ವಿರುದ್ಧ ವಾಗ್ದಾಳಿ:
ಸಿಎಂ ಸಿದ್ದರಾಮಯ್ಯ ಅವರ ‘ಅಹಿಂದ’ ರಾಜಕೀಯದ ಕುರಿತು ಮಾತನಾಡಿದ ಸಚಿವರು, ಅಹಿಂದಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು? ಅದನ್ನು ಅವರು ತಮ್ಮ ರಾಜಕೀಯ ಬದುಕಿಗೆ ಮಾತ್ರ ಬಳಸಿಕೊಂಡಿದ್ದಾರೆ. ಆದರೆ ಅಹಿಂದ ಜನರ ಬದುಕಿಗೆ ಏನೂ ಕೊಡುಗೆ ಕೊಟ್ಟಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಲಕ್ಷ್ಮಣ್, ಒಕ್ಕಲಿಗರ ಸಂಘದ ಸುಮುಖ ರಘುಗೌಡ ಇತರರು ಉಪಸ್ಥಿತರಿದ್ದರು.