ಕೆಪಿಸಿಸಿ ಅಧ್ಯಕ್ಷತೆಗೆ ಸತೀಶ್‌, ಖಂಡ್ರೆ ಹೆಸರು ಶಿಫಾರಸು ಮಾಡಿದ ಸಿಎಂ ಸಿದ್ದರಾಮಯ್ಯ?

KannadaprabhaNewsNetwork | Updated : Apr 04 2025, 04:11 AM IST

ಸಾರಾಂಶ

ವಿಧಾನಪರಿಷತ್‌ ನೇಮಕ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಾಗೂ ಹನಿಟ್ರ್ಯಾಪ್‌ ಪ್ರಕರಣ ಸೇರಿದಂತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

 ಬೆಂಗಳೂರು :  ವಿಧಾನಪರಿಷತ್‌ ನೇಮಕ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಾಗೂ ಹನಿಟ್ರ್ಯಾಪ್‌ ಪ್ರಕರಣ ಸೇರಿದಂತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಗುರುವಾರ ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ಭೇಟಿ ವೇಳೆ ಪರಿಷತ್‌ನಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ ತಮ್ಮ ಆಯ್ಕೆಯ ಕೆಲ ಹೆಸರುಗಳನ್ನು ಸೂಚಿಸಿದ್ದಾರೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಈಶ್ವರ್‌ ಖಂಡ್ರೆ ಹಾಗೂ ಸತೀಶ್‌ ಜಾರಕಿಹೊಳಿ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದಿರುವ ರಾಹುಲ್‌ ಗಾಂಧಿ ಅವರು ಈ ಬಗ್ಗೆ ಎಐಸಿಸಿಯ ಇತರ ಹಿರಿಯ ಮುಖಂಡರ ಜತೆ ಸಮಾಲೋಚನೆ ನಂತರ ಈ ಬಗ್ಗೆ ಹೈಕಮಾಂಡ್‌ನ ಸೂಕ್ತ ನಿರ್ಧಾರ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ವಿಧಾನಪರಿಷತ್‌ 4 ಸ್ಥಾನಗಳ ಭರ್ತಿ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲೇ ಇನ್ನು ಕೆಲ ಸುತ್ತಿನ ಸಭೆಗಳು ನಡೆಯಬೇಕಿದೆ. ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೊಂಚ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಅಧ್ಯಕ್ಷರ ಬದಲಾವಣೆ- ಸಿಎಂ ಒಲವು?:

ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ರಾಹುಲ್‌ ಅವರ ಭೇಟಿಯ ವೇಳೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹಾಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಇರುವ ಹೆಚ್ಚುವರಿ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂಬ ಬಗ್ಗೆ ಕಾಂಗ್ರೆಸ್‌ನ ಕೆಲ ಸಚಿವರು ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಬದಲಾವಣೆ ಮಾಡಲು ಹೈಕಮಾಂಡ್‌ ನಿರ್ಧರಿಸಿದರೆ ತಾವು ಕೆಲವರ ಹೆಸರು ಸೂಚಿಸಬಯಸುವುದಾಗಿ ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

ಅದರಂತೆ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯದಿಂದ ಈಶ್ವರ್‌ ಖಂಡ್ರೆ ಅವರ ಹೆಸರು ಪರಿಗಣಿಸಬಹುದು. ಇಲ್ಲದಿದ್ದರೆ ಪರಿಶಿಷ್ಟ ಪಂಗಡದಿಂದ ಸತೀಶ್ ಜಾರಕಿಹೊಳಿ ಅವರ ಹೆಸರು ಪರಿಗಣಿಸಬಹುದು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಈಶ್ವರ್‌ ಖಂಡ್ರೆ ಅವರಿಗೂ ದೆಹಲಿಗೆ ಕರೆಸಿಕೊಂಡು ಚರ್ಚಿಸಲಾಗಿದೆ.

ಇನ್ನು ಈಶ್ವರ್‌ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರೂ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೂ ಒಂದು ವರ್ಷ ಸಚಿವ ಸ್ಥಾನ ಮುಂದುವರೆಸಬೇಕು ಎಂಬ ಷರತ್ತು ಇಟ್ಟಿದ್ದಾರೆ. ಈ ಬಗ್ಗೆ ತಾವು ಅಂತಿಮ ತೀರ್ಮಾನ ಕೈಗೊಳ್ಳಬಹುದು ಎಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Share this article