ಕನ್ನಡಪ್ರಭ ವಾರ್ತೆ ಮೈಸೂರು
ಅನುದಾನ ಹಂಚಿಕೆ ಮಾಡುವಾಗ ಯಾವ ಕ್ಷೇತ್ರಕ್ಕೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಕಾಂಗ್ರೆಸ್ ಪಕ್ಷದವರೇ ತೀರ್ಮಾನಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿಪಕ್ಷಗಳ ಶಾಸಕರು ಇರುವ ಕಡೆ ಸರ್ಕಾರ ಬೇಕಾಬಿಟ್ಟಿಯಾಗಿ ಅನುದಾನ ಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ ಕೊಡುತ್ತಿದ್ದಾರೆ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಮುಖ್ಯಮಂತ್ರಿಗಳು ಎಲ್ಲಾ ಶಾಸಕರನ್ನು ಸಮನಾಗಿ ಕಾಣಬೇಕು ಎಂದು ನಾವು ಮನವಿ ಮಾಡುವುದಾಗಿ ಹೇಳಿದರು.ವಿಧಾನಸೌಧದ ಮೆಟ್ಟಿಲ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುವಾರ್ ಬಿದ್ದಾಕ್ಷಣ ಸರ್ಕಾರ ಬೀಳೋದಿಲ್ಲ. ಸರ್ಕಾರ 140 ಸೀಟು ತೆಗೆದುಕೊಂಡು ಅಧಿಕಾರಕ್ಕೆ ಬಂದಿರುವ ಕಾರಣ ಭದ್ರವಾಗಿದೆ. ಸರ್ಕಾರ ಬೀಳುತ್ತಾ ಅಥವಾ ಇಲ್ಲವೇ ಏನು ಎಂಬುದನ್ನು ಆ ಪಕ್ಷದವರನ್ನೇ ಕೇಳಬೇಕು. ರಾಜ್ಯ ಸರ್ಕಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರೇ ಅಸವಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ನಿಖಿಲ್ ಕುವಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತೇವೆ ಅಂತ ಎಲ್ಲೂ ಹೇಳಿಲ್ಲ. ನಿಖಿಲ್ ಅವರು ಪಕ್ಷ ಸಂಘಟನೆ ಮಾಡಲಿಕ್ಕೆ ಸಾಮಾನ್ಯ ಕಾರ್ಯಕರ್ತನಂತೆ ಮುಂದೆ ಬಂದಿದ್ದಾರೆ. ಅಧಿಕಾರ ಸಿಗುತ್ತದೆ ಎಂದು ಅವರು ಮುಂದಾಗಿಲ್ಲ ಎಂದರು.
ವಿನಾಕಾರಣ ಚುನಾವಣೆ ಮುಂದೂಡಿತ್ತು: ಜಿ.ಡಿ.ಹರೀಶ್ ಗೌಡ
ಆಡಳಿತ ಮಂಡಳಿಯ ಅವಧಿ ಮುಗಿದ ಮೇಲೆ ಚುನಾವಣೆ ನಡೆಸದೆ ವಿನಾಕಾರಣ ಮುಂದೂಡಲಾಗುತ್ತಿದ್ದು, ಸರ್ಕಾರ ಒಂದೂವರೆ ವರ್ಷಗಳ ಕಾಲ ಚುನಾವಣೆ ನಡೆಸದಿರುವ ಕುರಿತು ಕಾರಣವನ್ನೇ ಹೇಳಲಿಲ್ಲ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಆರೋಪಿಸಿದರು.
ಸಹಕಾರಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇತ್ತೀಚೆಗೆ ಎದುರಾಗಿದೆ. ಆದರೆ ಸರ್ಕಾರ ಚುನಾವಣೆ ನಡೆಸದೆ ಸತಾಯಿಸುತ್ತಿತ್ತು. ಸಹಕಾರಿ ಚುನಾವಣೆಯಲ್ಲಿ ಸಹಕಾರ ಸಂಘದ ಪ್ರತಿನಿಧಿಗಳು ಸ್ಪರ್ಧಿಸಬಹುದು. ನಾನು ಕಳೆದ 10 ವರ್ಷದ ಅವಧಿಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎರಡೂ ಜಿಲ್ಲೆಗಳ ಸಹಕಾರ ಸಂಘಗಳ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ನಾನು ಅಧ್ಯಕ್ಷನಾಗಿದ ಆರಂಭದಲ್ಲಿ ಕೇವಲ 370 ರೂ. ಠೇವಣಿ ಇತ್ತು. ನಾನು ಅಧ್ಯಕ್ಷ ಸ್ಥಾನದಿಂದ ಇಳಿಯುವ ವೇಳೆ 1 ಸಾವಿರ ಕೋಟಿ ಠೇವಣಿ ಇತ್ತು. ನನಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ ಎಂದರು.