;Resize=(412,232))
ನವದೆಹಲಿ : ‘ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ ಎಚ್ಚರಿಕೆ ಬಗ್ಗೆ ಕೇಳಿದಾಗ, ‘ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ’ ಎಂದರು.
ಈ ಕಾರ್ಯಾಚರಣೆ ಸಿಎಂ ಆಗುವ ಮುನ್ನವೇ ಅಥವಾ ಸಿಎಂ ಆದ ಬಳಿಕ ನಡೆದಿದೆಯೇ ಎಂದು ಕೇಳಿದಾಗ, ‘ಮುಖ್ಯಮಂತ್ರಿಯಾದ ಬಳಿಕ ನಡೆದಿರುವ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದೇನೆ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.
ತಮ್ಮ ವಿರುದ್ಧದ ಪ್ರಯತ್ನಗಳ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಬೇರೆ ರಾಜ್ಯದವರೂ ಇದ್ದಾರೆಯೇ ಎಂಬ ಬಗ್ಗೆ ಕೇಳಿದಾಗ, ‘ನಾನು ನಿಮ್ಮ ಬಳಿ ಎಲ್ಲವನ್ನೂ ಬಹಿರಂಗಪಡಿಸಲು ಹೋಗುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ’ ಎಂದು ಹೇಳಿದರು.
ಸಚಿವರನ್ನು ಸಿಕ್ಕಿ ಹಾಕಿಸಲು ಏಜೆಂಟರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, ‘ಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ.
ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ. ಹಿಂದೆ ಮಾಧ್ಯಮದಿಂದ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು. ಹಾಗಾಗಿ ಈಗಲೇ ಎಚ್ಚರಿಕೆ ನೀಡಲಾಗಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆ’ ಎಂದರು.