;Resize=(412,232))
ಕಳೆದ ಬಾರಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ₹7145 ಕೋಟಿಗಳ ಅನುದಾನ ಒದಗಿಸಿದ್ದ ರಾಜ್ಯ ಸರ್ಕಾರ, ಈ ಬಾರಿ ₹1228 ಕೋಟಿಗಳನ್ನು ಹೆಚ್ಚಿಸಿದೆ. ಪ್ರಸ್ತಕ ಸಾಲಿನಲ್ಲಿ ₹8373 ಕೋಟಿ ಮೀಸಲಿಡುವ ಮೂಲಕ ಒಟ್ಟು ಆಯವ್ಯಯದಲ್ಲಿ ಶೇ.2ರಷ್ಟು ಅನುದಾನ ಒದಗಿಸಿದೆ.
ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಹಣಕಾಸು ನೆರವು. ಉತ್ತಮ ಗುಣಮಟ್ಟದ ಕೃಷಿ ಪರಿಕರ ಹಾಗೂ ಬೆಳೆಗಳ ನಿರ್ವಹಣೆ ಮತ್ತು ಕೊಯ್ಲೋತ್ತರ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಿದೆ.
ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಾರುಕಟ್ಟೆ ಸಂಪರ್ಕ ಬಲಪಡಿಸುವ ಮೂಲಕ ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲ ಸೃಜಿಸಲು ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಜಾರಿಗೆ ತರಲು ಮುಂದಿನ ಮೂರು ವರ್ಷಗಳಲ್ಲಿ ₹100 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟ ಹೆಚ್ಚಿಸಲು ʻವಸುಧಾಮೃತʼ ಯೋಜನೆ ಮತ್ತು ಬೆಳೆಗೆ ಕಂಟಕವಾಗುವ ಕೀಟಗಳ ನಿಯಂತ್ರಣ ಹಾಗೂ ಆರಂಭದಲ್ಲೇ ರೋಗಗಳನ್ನು ಪತ್ತೆ ಹಚ್ಚಲು ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿದೆ.
ರೈತರಿಗೆ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಎಂಎಸ್‌ಐಎಲ್ ವತಿಯಿಂದ ‘ರೈತ ಮಾಲ್’ಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಅಥಣಿಯಲ್ಲಿ ಕೃಷಿ ಕಾಲೇಜ್ ಸ್ಥಾಪನೆಗೆ ಮೊದಲ ಹಂತದಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ರೈತರಿಗೆ ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶ ಒದಗಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ ಎನ್‌ಎಬಿಎಲ್ ಮಾನ್ಯತೆ ಪಡೆದು ವೈಜ್ಞಾನಿಕ ಪರೀಕ್ಷಣಾ ಸೇವೆ ಒದಗಿಸುವುದು. ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ರೈತರಲ್ಲಿ ಪ್ರೇರೇಪಿಸಲು ನೀಡುತ್ತಿರುವ ಸಹಾಯಧನ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿದೆ.
ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೆ ಉದ್ದೇಶಿಸಲಾಗಿದೆ. ಮಿಲೆಟ್‌ಹಬ್ ಮೂಲಕ ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆ ಮಾಡುವುದಾಗಿ ಹೇಳಲಾಗಿದೆ.
ರೈತ ಕರೆ ಕೇಂದ್ರವನ್ನು ಎಐ ತಂತ್ರಜ್ಞಾನದ ಅಳವಡಿಸುವುದು ಮತ್ತು ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼವನ್ನಾಗಿ ಉನ್ನತೀಕರಿಸಲಾಗುವುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಲಾಗಿದೆ.
ಸಣ್ಣ, ಅತೀ ಸಣ್ಣ ರೈತರಿಗೆ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಿದೆ. ಹವಾಮಾನ ಬದಲಾವಣೆಗೆ ಹೊಂದಾಣಿಕೆ ಹಾಗೂ ತಗ್ಗಿಸುವಿಕೆಯ ರಾಜ್ಯದ ಪ್ರಯತ್ನಗಳನ್ನು ಬಲಪಡಿಸಿ ಕೃಷಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಲು ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವ ವಿಧಾನಗಳನ್ನು ಉತ್ತೇಜಿಸುವುದಾಗಿ ಪ್ರಕಟಿಸಲಾಗಿದೆ.
ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಲು ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಲಾಗಿದೆ.