ಮಾಜಿ ಸಚಿವ ಜಮೀರ್‌ಗೆ ಪ್ರಾಸಿಕ್ಯೂಷನ್‌ ಸಂಕಷ್ಟ

Published : Jul 11, 2026, 06:49 AM IST
Zameer Ahmed Khan

ಸಾರಾಂಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ಮುಖಂಡ ಜಮೀರ್‌ ಅಹಮ್ಮದ್ ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸುವ ಸಂಬಂಧ ಅಭಿಯೋಜನೆಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಲೋಕಾಯುಕ್ತ ಪೊಲೀಸರು ಮನವಿ

 ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ಮುಖಂಡ ಜಮೀರ್‌ ಅಹಮ್ಮದ್ ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸುವ ಸಂಬಂಧ ಅಭಿಯೋಜನೆಗೆ (ಪ್ರಾಸಿಕ್ಯೂಷನ್‌) ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಲೋಕಭವನಕ್ಕೆ ಸಾವಿರಾರು ಪುಟಗಳ ದಾಖಲೆ ಸಹಿತ ಲೋಕಾಯುಕ್ತ ಪೊಲೀಸರು ಗುರುವಾರ ಕೋರಿಕೆ ಸಲ್ಲಿಸಿದ್ದು, ಜಮೀರ್‌ ಅವರು ವಾರ್ಷಿಕ ಆದಾಯ ಮೀರಿ ಸುಮಾರು 25 ಕೋಟಿ ರು. ಮೌಲ್ಯದ ಸಂಪತ್ತನ್ನು ಅಕ್ರಮವಾಗಿ ಗಳಿಸಿರುವುದಕ್ಕೆ ಪುರಾವೆ ಸಿಕ್ಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಇದರಿಂದ ಮಾಜಿ ಸಚಿವ ಜಮೀರ್ ಅವರ ಮೇಲಿನ ಕಾನೂನು ಸಂಕಷ್ಟದ ಚೆಂಡು ಲೋಕಭವನದ ಅಂಗಳಕ್ಕೆ ಬಿದ್ದಂತಾಗಿದ್ದು, ಪ್ರಾಸಿಕ್ಯೂಷನ್‌ಗೆ (ಪಿಎಸ್‌ಓ) ರಾಜ್ಯಪಾಲರು ಸಮ್ಮತಿಸಿದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಲಿದೆ ಎಂದು ರಾಜ್ಯ ಗೃಹ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಏನಿದು ಪ್ರಕರಣ?:

2018ರಲ್ಲಿ ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಹಗರಣ ಸಂಬಂಧ ಅಂದಿನ ವಕ್ಫ್‌ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿತ್ತು. ಬಳಿಕ ಜಮೀರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿರುವ ಶಂಕೆ ಇದ್ದು, ಈ ಬಗ್ಗೆ ಎಫ್‌ಐಆರ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇ.ಡಿ. ಶಿಫಾರಸು ಮಾಡಿತ್ತು. ಅಂತೆಯೇ ಎಸಿಬಿ ತನಿಖೆ ಆರಂಭಿಸಿತ್ತು.

ಎಸಿಬಿ ರದ್ದಾದ ಬಳಿಕ ಆ ಪ್ರಕರಣ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆಯಾಯಿತು. ಮಾಜಿ ಸಚಿವರ ಸಂಪತ್ತಿನ ತನಿಖೆಯನ್ನು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಮಾರ್ಗದರ್ಶನದಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜ್ ಹಾಗೂ ಡಿವೈಎಸ್ಪಿ ಎಚ್.ಎಂ.ಸತೀಶ್ ನೇತೃತ್ವದ ತಂಡ ನಡೆಸಿತು.

2 ದಶಕಗಳ ಆಸ್ತಿ ಲೆಕ್ಕ ಹಾಕಿದ ಪೊಲೀಸರು:

ಶಾಸಕರಾಗುವ ಮುನ್ನ ಸಾರಿಗೆ, ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಲ್ಲಿ ಜಮೀರ್ ತೊಡಗಿದ್ದರು. 2005ರಲ್ಲಿ ಚಾಮರಾಜಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅಂತೆಯೇ ಶಾಸಕರಾಗಿ ಆಯ್ಕೆಯಾದ ವರ್ಷದಿಂದ ಜಮೀರ್ ಅವರ ಎರಡು ದಶಕಗಳ ಸಂಪತ್ತಿನ ಲೆಕ್ಕವನ್ನು ಲೋಕಾಯುಕ್ತ ಪೊಲೀಸರು ಶೋಧಿಸಿದ್ದಾರೆ. 2005ರಿಂದ 2025ರ ವರೆಗೆ ಐದು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿ ಜಮೀರ್ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಆಕ್ರಮವಾಗಿ ಆಸ್ತಿ ಸಂಪಾದಿಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಎಷ್ಟು ಆಸ್ತಿ ಸಂಪಾದನೆ?:

ಶಾಸಕರಾಗುವ ಮುನ್ನ ಬೆಂಗಳೂರಿನ ಸದಾಶಿವನಗರದ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌, ಮೈಸೂರಿನಲ್ಲಿ ನಿವೇಶನ ಹಾಗೂ ಲಕ್ಷದ ಲೆಕ್ಕದಲ್ಲಿ ಅವರ ಖಾತೆಯಲ್ಲಿ ಹಣವಿತ್ತು. ಆದರೆ ಶಾಸಕರಾದ ನಂತರ ಶಿವಾಜಿನಗರದಲ್ಲಿ 20 ಕೋಟಿ ರು.ಗೂ ಅಧಿಕ ಮೌಲ್ಯದ ವೈಭೋಪೇತ ಬಂಗಲೆ ಕಟ್ಟಿದ್ದಾರೆ. ಅದೇ ರೀತಿ ಕೋಟ್ಯಂತರ ರು. ವಿನಿಯೋಗಿಸಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಜಮೀರ್ ಮಾಡಿದ್ದರು. ವಿದೇಶ ಪ್ರವಾಸ ಹಾಗೂ ತಮ್ಮ ಬಳಿ ನೆರವು ಕೇಳಿ ಬರುವ ಜನರಿಗೆ ಕೈ ಬಿಚ್ಚಿ ಹಣ ದಾನ ಕೊಟ್ಟಿದ್ದಾರೆ.

ಇನ್ನು ನಟಿ ರಾಧಿಕಾ ಕುಮಾರಸ್ವಾಮಿ, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಚೆಲುವರಾಯಸ್ವಾಮಿ, ಶಾಸಕ ಎಚ್‌.ಸಿ.ಬಾಲಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಮಲ್ಲಿಕಾರ್ಜನ್ ಸೇರಿ ಸುಮಾರು 30ಕ್ಕೂ ಹೆಚ್ಚಿನ ಪರಿಚಿತರಿಂದ ಕೋಟ್ಯಂತರ ರು. ಕೈ ಸಾಲ ಪಡೆದಿದ್ದಾರೆ. ಆದರೆ ಈ ಸಾಲ ಮರಳಿಸಿರುವ ಬಗ್ಗೆ ದಾಖಲೆ ಸಿಕ್ಕಿಲ್ಲ.

ಅದೇ ರೀತಿ ತಮ್ಮ ಕೆಲ ಸ್ನೇಹಿತರಿಗೆ ಜಮೀರ್ ಕೂಡ ಕೈ ಸಾಲ ಕೊಟ್ಟಿರುವುದಕ್ಕೂ ಲೆಕ್ಕಪತ್ರವಿಲ್ಲ. ಇನ್ನು ಈ ಪ್ರಕರಣ ಸಂಬಂಧ ಜಮೀರ್ ಹಾಗೂ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ವ್ಯವಹಾರಿಕ ಪಾಲುದಾರರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು. ಅಂತಿಮವಾಗಿ ತನಿಖೆಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ಏನಿದು ಕೇಸ್‌?

- 2018ರಲ್ಲಿ ಐಎಂಎ ಕಂಪನಿ ವಂಚನೆ ಸಂಬಂಧ ಜಮೀರ್‌ ಅಹಮದ್‌ ಖಾನ್‌ ಮೇಲೆ ಇ.ಡಿ. ದಾಳಿ

- ಅಕ್ರಮ ಆಸ್ತಿ ಸಂಪಾದನೆ ಶಂಕೆ ಇದ್ದು, ತನಿಖೆ ನಡೆಸಿ ಎಂದು ಅಂದಿನ ಎಸಿಬಿಗೆ ಸೂಚಿಸಿದ್ದ ಇ.ಡಿ.

- ತನಿಖೆ ಪ್ರಾರಂಭ, ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಪೊಲೀಸರಿಂದ ತನಿಖೆ ಮುಂದುವರಿಕೆ

- ಆದಾಯಕ್ಕೂ ಮೀರಿ 25 ಕೋಟಿ ರು. ಆಸ್ತಿಯನ್ನು ಜಮೀರ್‌ ಗಳಿಸಿರುವುದಕ್ಕೆ ತನಿಖೆಯಲ್ಲಿ ಪುರಾವೆ

- ಚಾರ್ಜ್‌ಶೀಟ್‌ ಸಲ್ಲಿಸಲು ಪ್ರಾಸಿಕ್ಯೂಷನ್‌ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಮೊರೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶಾಶ್ವತ ನಿವಾಸಿ ಪತ್ರಕ್ಕೆ ಬಿಜೆಪಿಯಿಂದ ವಿರೋಧ
ಬರ ಘೋಷಣೆಗೆ ಮುನ್ನವೇ ಬರ ಅಧ್ಯಯನಕ್ಕೆ ಜೆಡಿಎಸ್‌,