;Resize=(412,232))
ಬೆಂಗಳೂರು : ಯಾರಿಗೆ ಸಚಿವ ಸ್ಥಾನ ಕೊಡಬೇಕೆಂಬ ಪಟ್ಟಿಯ ಜೊತೆಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷ, ಉಪ ಸಭಾಧ್ಯಕ್ಷ ಹಾಗೂ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕೆಂಬುದನ್ನು ಸಹ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಯು.ಟಿ. ಖಾದರ್ ಹಾಗೂ ರುದ್ರಪ್ಪ ಲಮಾಣಿ ಅವರು ಸಚಿವರಾಗಿರುವುದರಿಂದ ತೆರವಾಗಿರುವ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಜಿ.ಎಸ್. ಪಾಟೀಲ್, ಉಪಸಭಾಧ್ಯಕ್ಷ ಸ್ಥಾನಕ್ಕೆ ಎ.ಎಸ್. ಪೊನ್ನಣ್ಣ ಹಾಗೂ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹಿರಿಯ ಸದಸ್ಯ ಸಲೀಂ ಅಹಮದ್ ಮತ್ತು ಮತ್ತು ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ನೇಮಕ ಮಾಡಲು ಹೈಕಮಾಂಡ್ ಉದ್ದೇಶಿಸಿದೆ.
ಯು.ಟಿ. ಖಾದರ್ ರಾಜೀನಾಮೆಯಿಂದ ತೆರವಾಗಿರುವ ಕೆಳಮನೆಯ ಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಹೈಕಮಾಂಡ್ ಅಶ್ಚರ್ಯಕರ ರೀತಿಯಲ್ಲಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕೊಡಗು ಜಿಲ್ಲೆಯಿಂದ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷ ಸ್ಥಾನಕ್ಕೆ ಹೆಸರಿಸಿದೆ. ಮೊದಲ ಬಾರಿಗೆ ಶಾಸಕರಾಗಿರುವ ಪೊನ್ನಣ್ಣ ಅವರಿಗೆ ಉಪಸಭಾಧ್ಯಕ್ಷ ಸ್ಥಾನ ದೊರಕಿರುವುದು ಗಮನಾರ್ಹವಾಗಿದೆ.
ಇನ್ನು ಹಿರಿಯರ ಮನೆ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಬಲ ಹೆಚ್ಚಿದೆ. ಹೀಗಾಗಿ ತನ್ನ ಪಕ್ಷದವರನ್ನೇ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧರಿಸಿರುವ ಹೈಕಮಾಂಡ್ ಹಿರಿಯ ಸದಸ್ಯರಲ್ಲಿ ಒಬ್ಬರಾದ ಸಲೀಂ ಅಹಮದ್ ಅವರನ್ನು ಸಭಾಪತಿ ಸ್ಥಾನಕ್ಕೆ ಹೆಸರಿಸಿದೆ. ಸಂಪುಟದಲ್ಲಿ ಸೇರ್ಪಡೆಯಾಗುವ ತುಂಬು ವಿಶ್ವಾಸ ಹೊಂದಿದ್ದ ಸಲೀಂ ಅಹಮದ್ ಅವರನ್ನು ಸಮಾಧಾನಪಡಿಸಲು ಸಭಾಪತಿ ಸ್ಥಾನ ನೀಡಲು ಪಕ್ಷ ತೀರ್ಮಾನಿಸಿದೆ. ಈವರೆಗೆ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕರಾಗಿದ್ದ ಸಲೀಂ ಅಹಮದ್ ಅವರು ಹೊಸ ಹುದ್ದೆಯ ಜವಾಬ್ದಾರಿ ನಿಭಾಯಿಸಬೇಕಾಗಿದೆ. ಉಳಿದಂತೆ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಉಮಾಶ್ರೀ ಅವರನ್ನು ಉಪಸಭಾಪತಿ ಸ್ಥಾನಕ್ಕೆ ಹೆಸರಿಸಲಾಗಿದೆ.
ಮೂರನೇ ಬಾರಿ ಮಹಿಳಾ ಉಪಸಭಾಪತಿ
ವಿಧಾನಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವರು ಕಾರ್ಯನಿರ್ವಹಿಸಿದರೆ ಪರಿಷತ್ ಇತಿಹಾಸದಲ್ಲಿ ಮೂರನೇ ಬಾರಿ ಮಹಿಳೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದಂತಾಗುತ್ತದೆ. ಈ ಹಿಂದೆ 1980ರಲ್ಲಿ ಕಾಂಗ್ರೆಸ್ಸಿನ ರಾಣಿ ಸತೀಶ್ ಹಾಗೂ 2011ರಲ್ಲಿ ಬಿಜೆಪಿಯ ವಿಮಲಾಗೌಡ ಅವರು ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಇದನ್ನು ಹೊರತುಪಡಿಸಿದರೆ 1980ರಲ್ಲಿ ಸಭಾಪತಿಯಾಗಿ ಕಾಂಗ್ರೆಸ್ಸಿನ ಬಸವರಾಜೇಶ್ವರಿ ಕಾರ್ಯನಿರ್ವಹಿಸಿದ್ದರು.