ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ : ಸಿಎಂ

KannadaprabhaNewsNetwork | Updated : Jun 28 2025, 06:11 AM IST

‘ಸಚಿವ ಕೆ.ಎನ್‌. ರಾಜಣ್ಣ ರಾಜಕೀಯ ಬೆಳವಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುವುದು ಉತ್ತಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ‘ಸಚಿವ ಕೆ.ಎನ್‌. ರಾಜಣ್ಣ ರಾಜಕೀಯ ಬೆಳವಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುವುದು ಉತ್ತಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪತ್ರಕರ್ತನಲ್ಲ. ನೀವು ಏನೇನೋ ಊಹೆ ಮಾಡಿಕೊಳ್ಳಬಾರದು. ರಾಜಣ್ಣ ಬೆಳವಣಿಗೆ ಆಗಬಹುದು ಎಂದಷ್ಟೇ ಹೇಳಿದ್ದಾರೆ. ಇದಕ್ಕೆಲ್ಲಾ ಪ್ರಾಮುಖ್ಯತೆ ನೀಡದೆ ನಿರ್ಲಕ್ಷ್ಯ ಮಾಡಬೇಕು ಎಂದು ಹೇಳಿದರು.

ಸುದ್ದಿಗಾರರ ಮೇಲೆ ಸಿಎಂ ಗರಂ:

ಪಕ್ಷದಲ್ಲಿ ಆಂತರಿಕ ಕಿತ್ತಾಟದ ನಡುವೆಯೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಆಂತರಿಕ ಜಗಳ ಎಲ್ಲಿದೆ? ಸುರ್ಜೇವಾಲಾ ಬೆಂಗಳೂರಿಗೆ ಬರುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಕಿತ್ತಾಟ ಇದೆ ಅಂತಾನಾ? ಕಿತ್ತಾಟ ಇದೆ ಎಂದು ನಿಮಗೆ ಯಾರು ಹೇಳಿದ್ದು?’ ಎಂದು ಸುದ್ದಿಗಾರರ ವಿರುದ್ಧ ಸಿದ್ದರಾಮಯ್ಯ ಗರಂ ಆದರು.

ಬಿಜೆಪಿಯಲ್ಲೂ ಆಗುತ್ತೆ

ಸೆಪ್ಟೆಂಬರ್‌ ಕ್ರಾಂತಿ

ನಾನು ಹೇಳಿದ ಸೆಪ್ಟೆಂಬರ್‌ ಕ್ರಾಂತಿ ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಆಗಲಿದೆ. ಸೆಪ್ಟೆಂಬರ್‌ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಲಿದ್ದು ಬಿಜೆಪಿಯದ್ದೇ ನಿಯಮದಂತೆ ಅವರು ಮಾರ್ಗದರ್ಶಕ ಮಂಡಳಿ ಸೇರಬಹುದು.

ಕೆ.ಎನ್‌. ರಾಜಣ್ಣ, ಸಹಕಾರ ಸಚಿವ

ನಮ್ಮಲ್ಲಿ ಯಾವುದೇ ಕ್ರಾಂತಿ ಇಲ್ಲ

ನಮ್ಮ ಪಕ್ಷದಲ್ಲಿ ಯಾವುದೇ ಕ್ರಾಂತಿ ಇಲ್ಲ. ಕಾಲಕಾಲಕ್ಕೆ ಏನೇನು ಆಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ರಾಜಣ್ಣ ಹಿರಿಯರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜೆಡಿಎಸ್‌, ಬಿಜೆಪಿಯಿಂದ ಶಾಸಕರು ಕಾಂಗ್ರೆಸ್‌ಗೆ ಸೇರ್ತಾರೆ ಎನ್ನುವ ಅರ್ಥದಲ್ಲಿ ಹೇಳಿರಬಹುದು.-ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ

ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಸೆಪ್ಟೆಂಬರ್‌ಗೆ ಯಾವುದೇ ರೀತಿಯ ಕ್ರಾಂತಿ ಆಗುವುದಿಲ್ಲ. ರಾಜಣ್ಣ ಅವರು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಯಾವ ಸಂಧರ್ಭದಲ್ಲಿ ಯಾವ ಕಾರಣಕ್ಕೆ ಹೇಳಿದ್ದಾರೆ ಗೊತ್ತಿಲ್ಲ. ಎಲ್ಲ ತೀರ್ಮಾನವನ್ನೂ ಹೈಕಮಾಂಡ್‌ ಮಾಡುತ್ತೆ.

- ಎನ್‌.ಎಸ್‌. ಬೋಸರಾಜು, ವಿಜ್ಞಾನ ಸಚಿವ

Read more Articles on