;Resize=(412,232))
ಪ್ರಯಾಗರಾಜ್ : ‘ಯುವಕರು ಭಾರತದ ಬಲವಾಗಿದ್ದು, ಅವರ ಶಕ್ತಿಗೆ ಸರಿಸಾಟಿ ಇಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುವಶಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.
ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಜತೆಗಿನ ‘ಛಾತ್ರೋ ಕಿ ಗೂಂಜ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘40 ಕೋಟಿ ಯುವಕರು ಈ ದೇಶದ ಶಕ್ತಿ ಹಾಗೂ ಹೆಮ್ಮೆ. ಅಮೆರಿಕ, ರಷ್ಯಾ, ಚೀನಾದವರೊಂದಿಗೆ ಹೋಲಿಸಿದರೆ, ನಮ್ಮ ಯುವಶಕ್ತಿಗೆ ಅವರು ಸಮನಾಗಿಲ್ಲ’ ಎಂದರು.
ಯುವಕರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ‘ಇಂದು ಶೈಕ್ಷಣಿಕ ಪ್ರಮಾಣಪತ್ರಗಳು ನೌಕರಿ ಕೊಡಿಸುವಲ್ಲಿ ಶಕ್ತವಾಗಿಲ್ಲ. ಉತ್ಪಾದನೆ ಕುಸಿತ, ಸಾಲ ಪಡೆಯುವಾಗ ಎದುರಿಸುವ ತೊಂದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಉದ್ಯೋಗಗಳ ಕೆಲಸ ಕಬಳಿಸುವ ಕೃತಕ ಬುದ್ಧಿಮತ್ತೆ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿವೆ. ಆದರೆ ಇತ್ತೀಚೆಗೆ ನಡೆದ (ನೀಟ್ ಸೋರಿಕೆ ವಿರೋಧಿ) ವಿದ್ಯಾರ್ಥಿ ಪ್ರತಿಭಟನೆಯು ಕತ್ತಲಲ್ಲಿ ಬೆಳಗಿದ ಜ್ಯೋತಿಯಂತೆ ದೇಶದಲ್ಲಿ ಬದಲಾವಣೆಗೆ ಕಾರಣವಾಯಿತು’ ಎಂದ ರಾಹುಲ್, ‘ನಾವು ದ್ವೇಷ, ಹಿಂಸೆಯ ಮೊರೆ ಹೋಗುವುದಿಲ್ಲ. ಬದಲಿಗೆ ಪ್ರೀತಿ, ವಾತ್ಸಲ್ಯದಿಂದ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ’ ಎಂದು ಹೇಳಿದರು. ಬಳಿಕ ವಸತಿಗೃಹ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದರು.
- ಇತ್ತೀಚಿನ ಪ್ರತಿಭಟನೆ ಕತ್ತಲಲ್ಲಿ ಬೆಳಗಿದ ಜ್ಯೋತಿಯಂತೆ
- ಪ್ರೀತಿ ವಾತ್ಸಲ್ಯದಿಂದಲೇ ವ್ಯವಸ್ಥೆ ಬದಲಾಯಿಸುತ್ತೇವೆ