ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ : ತನಿಖೆ

Published : Aug 09, 2026, 07:09 AM IST
Nagendra

ಸಾರಾಂಶ

ಸಚಿವ ನಾಗೇಂದ್ರ ಮಂತ್ರಿ ಕುರ್ಚಿ ಅಲುಗಾಡತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾಮೀನು ನೀಡುವಾಗ ಕೋರ್ಟ್‌ ವಿಧಿಸಿದ್ದ ಷರತ್ತು ಉಲ್ಲಂಘಿಸಿ, ಅನುಮತಿಯನ್ನೇ ಪಡೆಯದೆ ನಾಗೇಂದ್ರ ದೆಹಲಿ ಪ್ರವಾಸ ಮಾಡಿದ್ದಾರೆ ಎಂಬ ಆರೋಪ ಕುರಿತು ಜಾರಿ ನಿರ್ದೇಶನಾಲಯ ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ.

 ಎಚ್.ಎಸ್. ಅವಿನಾಶ್

 ಬೆಂಗಳೂರು : ಖಾತೆ ಸಿಗುವ ಮುನ್ನವೇ ಸಚಿವ ನಾಗೇಂದ್ರ ಅವರ ಮಂತ್ರಿ ಕುರ್ಚಿ ಅಲುಗಾಡತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾಮೀನು ನೀಡುವಾಗ ಕೋರ್ಟ್‌ ವಿಧಿಸಿದ್ದ ಷರತ್ತು ಉಲ್ಲಂಘಿಸಿ, ಅನುಮತಿಯನ್ನೇ ಪಡೆಯದೆ ನಾಗೇಂದ್ರ ದೆಹಲಿ ಪ್ರವಾಸ ಮಾಡಿದ್ದಾರೆ ಎಂಬ ಆರೋಪ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ. ಸರಿಯಾದ ದಾಖಲೆ ಸಿಕ್ಕಿಬಿಟ್ಟರೆ ಸಚಿವ ನಾಗೇಂದ್ರ ಅವರ ಜಾಮೀನು ರದ್ದತಿ ಕೋರಿ ಇ.ಡಿ.ಯು ಕೋರ್ಟ್ ಮೆಟ್ಟಿಲೇರುವುದು ಖಚಿತ ಎನ್ನಲಾಗಿದೆ.

ಕರ್ನಾಟಕದಿಂದ ಹೊರಗೆ ಹೋಗುವುದಾದರೆ ಕೋರ್ಟ್‌ನಿಂದ ಲಿಖಿತ ಅನುಮತಿ ಪಡೆಯಬೇಕು ಎಂಬುದೂ ಸೇರಿದಂತೆ ಹಲವು ಷರತ್ತುಗಳೊಂದಿಗೆ ಜನಪ್ರತಿನಿಧಿಗಳ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡಿತ್ತು. ಆದರೆ, ಜಾಮೀನು ಷರತ್ತು ನಿಯಮ ಉಲ್ಲಂಘಿಸಿ ಇದೇ ಜುಲೈ 15 ಮತ್ತು ಜುಲೈ 26ರಂದು ಸಚಿವ ನಾಗೇಂದ್ರ ಅವರು ದೆಹಲಿ ಪ್ರವಾಸ ಕೈಗೊಂಡಿದ್ದರು ಎನ್ನುವ ಮಾಹಿತಿಯ ಬೆನ್ನತ್ತಿದ್ದಾರೆ ಇ.ಡಿ. ಅಧಿಕಾರಿಗಳು.

ಜುಲೈ 15ರ ಸಂಜೆ 6.15ರ ಇಂಡಿಗೋ ವಿಮಾನ (ಸಂಖ್ಯೆ- 6ಇ6034) ಹಾಗೂ ಜುಲೈ 26ರ ಮಧ್ಯಾಹ್ನ 1.55ರ ಇಂಡಿಗೋ ವಿಮಾನದ (ಸಂಖ್ಯೆ - 6ಇ840) ಮೂಲಕ ಸಚಿವ ನಾಗೇಂದ್ರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದೆ. ಈ ಮಾಹಿತಿ ಹಿಡಿದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ, ಶಿಷ್ಟಾಚಾರ ವಿಭಾಗದ ರಿಜಿಸ್ಟರ್‌ಗಳು ಹಾಗೂ ವಿಮಾನಯಾನದ ದಾಖಲಾತಿಗಳ ಹುಡುಕಾಟವನ್ನು ಇ.ಡಿ. ಆರಂಭಿಸಿದೆ.

ಸಚಿವ ನಾಗೇಂದ್ರ ಅವರು ಸಚಿವಗಿರಿಗಾಗಿ ಲಾಬಿ ನಡೆಸಲು ದೆಹಲಿ ಪ್ರವಾಸ ನಡೆಸಿದ್ದು ಹೌದಾದರೂ ಅಲ್ಲೆಲ್ಲೂ ಮಾಧ್ಯಮ ಪ್ರತಿನಿಧಿಗಳಿಗೆ ಮುಖಾಮುಖಿ ಆಗಲಿಲ್ಲ. ಯಾವುದೇ ಸಂದರ್ಶನ ನೀಡಿಲ್ಲ. ಜುಲೈ 17ರಂದು ಮಾತ್ರ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್‌ ಸಿಂಗ್‌, ಶಾಸಕರಾದ ಎ.ಎಸ್. ಪೊನ್ನಣ್ಣ, ಎನ್.ಎಚ್. ಕೋನರೆಡ್ಡಿ ಅವರ ಜೊತೆ ಇರುವುದು ಮಾತ್ರ ಕೆಲವು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ, ಆ ದಿನ ಅವರ ದೆಹಲಿ ಪ್ರವಾಸಕ್ಕೆ ಕೋರ್ಟ್ ಅನುಮತಿ ಇದೆ.

ಯಾವಾಗೆಲ್ಲ ಅನುಮತಿ?:

ಸಚಿವ ನಾಗೇಂದ್ರ ಅವರು ಕರ್ನಾಟಕದ ಹೊರಗಡೆ ಪ್ರವಾಸ ಮಾಡಲು ಮೂರು ಬಾರಿ ಕೋರ್ಟ್ ಅನುಮತಿ ನೀಡಿದೆ. 2026ರ ಏಪ್ರಿಲ್ 26 ರಿಂದ 2026ರ ಜೂನ್ 2ರವರೆಗೆ ಹಾಗೂ ಜೂನ್ 11 ರಿಂದ ಜುಲೈ 7ರವರೆಗೆ ಹಾಗೂ ಜುಲೈ 16ರಿಂದ ಜುಲೈ 25ರವರೆಗೆ ಕರ್ನಾಟಕದ ಹೊರಗೆ ನಾಗೇಂದ್ರ ಅವರ ಪ್ರವಾಸಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು. ಆದರೆ ನಾಗೇಂದ್ರ ಜು.15 ಹಾಗೂ ಜು.26ರಂದೂ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಇ.ಡಿ.ಗೆ ಲಭಿಸಿದೆ.

ಈ ನಡುವೆ, ಜುಲೈ 26 ರಿಂದ ಆಗಸ್ಟ್ 10ರವರೆಗೆ ರಾಜ್ಯದಿಂದ ಹೊರಕ್ಕೆ ಹೋಗಲು ಅನುಮತಿ ಕೋರಿ ನ್ಯಾಯಾಲಯಕ್ಕೆ ನಾಗೇಂದ್ರ ಅವರು ಜುಲೈ 23ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯವು ಅನುಮತಿ ನೀಡುವುದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತು.

ತನಿಖೆ ವಿಳಂಬ ಮಾಡಲೆಂದೇ ಪದೇ ಪದೇ ಪ್ರವಾಸಕ್ಕೆ ಆರೋಪಿ ನಾಗೇಂದ್ರ ಅನುಮತಿ ಕೇಳುತ್ತಿದ್ದಾರೆ. ಕೋರ್ಟ್ ನೀಡುವ ಸ್ವಾತಂತ್ರ್ಯ ದುರ್ಬಳಕೆ ಮಾಡುತ್ತಿದ್ದಾರೆ. ಇ.ಡಿ. ನೀಡಿದ ಸಮನ್ಸ್‌ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೊತೆಗೆ, ಈಗ ದೆಹಲಿ ಪ್ರವಾಸಕ್ಕೆ ನಿರ್ದಿಷ್ಟ ಕಾರಣ, ಪ್ರಮುಖರ ಆಹ್ವಾನದ ಯಾವ ದಾಖಲಾತಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಪ್ರವಾಸಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ಮುಂದೆ ಇ.ಡಿ. ವಾದಿಸಿತ್ತು. ಈ ವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಸಚಿವ ನಾಗೇಂದ್ರ ಅವರು ದೆಹಲಿ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಆಗಸ್ಟ್ 4ರಂದು ಅರ್ಜಿಯನ್ನು ತಿರಸ್ಕರಿಸಿದೆ.

ನ್ಯಾಯಾಲಯದ ಷರತ್ತು ಉಲ್ಲಂಘಿಸುವ ಮೂಲಕ ನಾಗೇಂದ್ರ ಅವರು ದೆಹಲಿ ಪ್ರವಾಸ ಮುಗಿಸಿ, ಸಚಿವರು ಆಗಿಬಿಟ್ಟಿದ್ದಾರೆ ಎಂಬ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ ಕೆಲಸವನ್ನು ಬಿರುಸುಗೊಳಿಸಿದೆ ಜಾರಿ ನಿರ್ದೇಶನಾಲಯ. ಇದಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿದಲ್ಲಿ ನಾಗೇಂದ್ರ ಅವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲು ಇ.ಡಿ. ಸಿದ್ಧತೆ ಕೈಗೊಂಡಿದೆ. ಈ ನಡುವೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಸದ್ಯದಲ್ಲೇ ಶುರುವಾಗಲಿರುವ ವಿಧಾನಮಂಡಲ ಅಧಿವೇಶನದ ಹೊರಗೆ ಮತ್ತು ಒಳಗೆ ತೀವ್ರ ಸ್ವರೂಪದ ಹೋರಾಟ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಏನಿದು ಆರೋಪ?

- ವಾಲ್ಮೀಕಿ ನಿಗಮದ ಹಗರಣ ಸಂಬಂಧ 2024ರ ಅ.14ರಂದು ನಾಗೇಂದ್ರಗೆ ಕೋರ್ಟ್‌ ಜಾಮೀನು ನೀಡಿತ್ತು

- ರಾಜ್ಯದಿಂದ ಹೊರಗೆ ಹೋಗುವುದಾದರೆ ಸಮ್ಮತಿ ಪಡೆಯಬೇಕೆಂಬುದು ಸೇರಿ ಹಲವು ಷರತ್ತು ವಿಧಿಸಿತ್ತು

- 2026ರ ಏ.26ರಿಂದ ಜೂ.2 ಜೂ.11ರಿಂದ ಜು.7, ಜು.16ರಿಂದ ಜು.25ರವರೆಗೆ ಅನುಮತಿ ಪಡೆದಿದ್ದ ನಾಗೇಂದ್ರ

- ಆದರೆ ಅನುಮತಿಯನ್ನೇ ಪಡೆಯದೆ ಜು.15 ಹಾಗೂ ಜು.26ರಂದು ದೆಹಲಿಗೆ ಭೇಟಿ ನೀಡಿದ್ದ ಹಾಲಿ ಸಚಿವ

- ಈ ಭೇಟಿಯ ಬಗ್ಗೆ ಇ.ಡಿ.ಗೆ ಮಾಹಿತಿ. ಏರ್‌ಪೋರ್ಟ್‌ ಸಿಸಿಟೀವಿ ದೃಶ್ಯ, ರಿಜಿಸ್ಟರ್‌ ಪರಿಶೀಲನೆಗೆ ಇಳಿದಿದೆ ಇ.ಡಿ.

ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?

- ಈಗ ಸಿಕ್ಕಿರುವ ಮಾಹಿತಿಗಳನ್ನು ಖಚಿತಪಡಿಸುವ ಸಾಕ್ಷ್ಯಗಳು ಸಿಕ್ಕರೆ ಇ.ಡಿ. ಕೋರ್ಟ್ ಮೆಟ್ಟಿಲೇರಲಿದೆ

- ಷರತ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ನಾಗೇಂದ್ರ ಜಾಮೀನು ರದ್ದುಪಡಿಸುವಂತೆ ಕೋರ್ಟ್‌ನಲ್ಲಿ ವಾದಿಸಲಿದೆ

- ಒಂದು ವೇಳೆ ಕೋರ್ಟ್‌ ಏನಾದರೂ ಜಾಮೀನು ರದ್ದುಪಡಿಸಿದರೆ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ ಸಚಿವ

- ಹಾಗಾದಾಗ ಸಂಪುಟದಲ್ಲಿ ಮುಂದುವರಿಸಲು ಸರ್ಕಾರಕ್ಕೆ ಕಷ್ಟವಾಗಲಿದೆ. ವಿಪಕ್ಷಗಳು ಕೂಡ ಗದ್ದಲವೆಬ್ಬಿಸಲಿವೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹುದ್ದೆಗಾಗಿ ಹಣ: ಕೆಪಿಎಸ್‌ಸಿ ಮಾಜಿ ಸದಸ್ಯೆ ವಿರುದ್ಧ ಕೇಸ್‌
ಬಿಡದಿ ಟೌನ್‌ಶಿಪ್‌ನ ವಿರುದ್ಧ ಪಾದಯಾತ್ರೆಗೆ ದೋಸ್ತಿ ಒಗ್ಗಟ್ಟು