ಬಿಡದಿ ಟೌನ್‌ಶಿಪ್‌ನ ವಿರುದ್ಧ ಪಾದಯಾತ್ರೆಗೆ ದೋಸ್ತಿ ಒಗ್ಗಟ್ಟು

Published : Aug 09, 2026, 06:35 AM IST
Bidadi twonshi row

ಸಾರಾಂಶ

ಬಿಡದಿ ಟೌನ್‌ ಶಿಪ್ ಯೋಜನೆ ವಿರುದ್ಧ ಜೆಡಿಎಸ್‌-ಬಿಜೆಪಿ ಒಟ್ಟಾಗಿ ಸದನ ಒಳಗೆ ಮತ್ತು ಹೊರಗೆ ಹೋರಾಡಲು ತೀರ್ಮಾನಿಸಿವೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರದಿಂದ 3 ದಿನ ಯಾತ್ರೆ ಆರಂಭವಾವಾಗಲಿದೆ.

ಬೆಂಗಳೂರು : ಬಿಡದಿ ಟೌನ್‌ ಶಿಪ್ ಯೋಜನೆ ವಿರುದ್ಧ ಜೆಡಿಎಸ್‌-ಬಿಜೆಪಿ ಒಟ್ಟಾಗಿ ಸದನ ಒಳಗೆ ಮತ್ತು ಹೊರಗೆ ಹೋರಾಡಲು ತೀರ್ಮಾನಿಸಿವೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರದಿಂದ 3 ದಿನ ಯಾತ್ರೆ ಆರಂಭವಾವಾಗಲಿದೆ. ಭೂಸ್ವಾಧೀನ ಸ್ಥಳವಾದ ಬೈರಮಂಗಲದಿಂದ ಯಾತ್ರೆ ಶುರುವಾಗಲಿದ್ದು, ಮಿತ್ರಪಕ್ಷ ಬಿಜೆಪಿ ಬೆಂಬಲ ಘೋಷಿಸಿದೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ನಾಯಕರ ಸಭೆಯಲ್ಲಿ ಬಿಡದಿ ಟೌನ್‌ಶಿಪ್‌ ವಿರುದ್ಧದ ಹೋರಾಟ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಸದನದ ಒಳಗೆ ಮತ್ತು ಹೊರಗೆ ಸಂಘಟಿತ ಹೋರಾಟ ನಡೆಸಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.

ಈ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಬಿಡದಿ ಬೃಹತ್ ಪಾದಯಾತ್ರೆಗೆ ಮಿತ್ರಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ನಾವು ಅತ್ಯಂತ ವಿವರವಾಗಿ ಚರ್ಚೆ ನಡೆಸಿದ್ದೇವೆ’ ಎಂದು ಹೇಳಿದರು.

ಉದ್ಘಾಟನೆಯಲ್ಲಿ ಬಿಜೆಪಿ ನಾಯಕರು ಭಾಗಿ:

‘ಬಿಡದಿ ಪಾದಯಾತ್ರೆಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೂ ನಡೆಯಲಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಪಾದಯಾತ್ರೆಯ ಬಗ್ಗೆ ಅತ್ಯಂತ ಸಕಾರಾತ್ಮಕ ಮನಸ್ಸು ಹೊಂದಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಎಚ್‌ಡಿಕೆ ಹೇಳಿದರು.

‘ಎರಡೂ ಪಕ್ಷಗಳ ನಡುವೆ ಸಮನ್ವಯ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿ ಪಾದಯಾತ್ರೆ ನಡೆಯುತ್ತಿದೆ. ನಾನೇ ಪಾದಯಾತ್ರೆಗೆ ಚಾಲನೆ ನೀಡುತ್ತೇನೆ’ ಎಂದೂ ಅವರು ತಿಳಿಸಿದರು.

ಒಗ್ಗಟ್ಟಿನ ಹೊರಾಟ- ಅಶೋಕ್‌:

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ‘ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಬಿಜೆಪಿ-ಜೆಡಿಎಸ್‌ ಒಂದಾಗಿ ಹೋರಾಟ ಮಾಡಲಿವೆ. ಜೆಡಿಎಸ್‌ನಿಂದ ನಡೆಯಲಿರುವ ಪಾದಯಾತ್ರೆಯಲ್ಲಿ ನಾನು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದೇವೆ. ಬಿಜೆಪಿ ಕಾರ್ಯಕರ್ತರು ಕೂಡ ಇದರಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ’ ಎಂದು ಹೇಳಿದರು.

‘ಬಿಡದಿಯಲ್ಲಿ ಟೌನ್‌ಶಿಪ್‌ ಹೆಸರಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒಂದಾಗಿ ಹೋರಾಟ ನಡೆಸಲು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಲಾಗಿದೆ’ ಎಂದರು.

‘ಬಿಜೆಪಿ ವತಿಯಿಂದ ಈಗಾಗಲೇ ಹೋರಾಟ ನಡೆಸಲಾಗಿದೆ. ಮುಂದೆ ಅಧಿವೇಶನ ನಡೆಯುವ ಸಮಯದಲ್ಲಿ ಜೆಡಿಎಸ್‌-ಬಿಜೆಪಿ ಒಂದಾಗಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ಹೋರಾಟಗಳು ಕೂಡ ಒಂದಾಗಿ ನಡೆಯಲಿದೆ’ ಎಂದು ಅಶೋಕ್‌ ತಿಳಿಸಿದರು.

ಈ ಸಭೆಯಲ್ಲಿ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ, ಎನ್‌.ರವಿಕುಮಾರ್‌, ಲೋಕಸಭೆ ಸದಸ್ಯ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವ ಸಿ.ಸಿ. ಪಾಟೀಲ್ ಸೇರಿದಂತೆ ಉಭಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಏನಿದು ವಿವಾದ?

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಕಳೆದ ವರ್ಷವೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಕಳೆದ ಜೂನ್‌-ಜುಲೈನಲ್ಲಿ ಎರಡನ್ನು ಬಿಟ್ಟು, ಮಿಕ್ಕ7 ಗ್ರಾಮಗಳ ಒಟ್ಟು 5,460 ಎಕರೆ 4 ಗುಂಟೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದಿತ್ತು. ಇವು ಫಲವತ್ತಾದ ಜಮೀನುಗಳು. ಭೂಸ್ವಾಧೀನಕ್ಕೆ ಅವಕಾಶ ನೀಡಲ್ಲ ಎಂದು ಜೆಡಿಎಸ್‌ ಹಾಗೂ ಬಿಜೆಪಿ ಸಿಡಿದೆದ್ದು ಹೋರಾಟ ಆರಂಭಿಸಿದ್ದವು. ಆದರೆ ಸರ್ಕಾರ ಟೌನ್‌ಶಿಪ್‌ ನಿರ್ಮಾಣ ಸಮರ್ಥಿಸಿತ್ತು.

ಬಿಡದಿ ಯೋಜನೆ ಬಗ್ಗೆ

ಜನಾಭಿಪ್ರಾಯ ಆಲಿಕೆಗೆ

ಸರ್ಕಾರದಿಂದ ಸಮಿತಿ

ಬೆಂಗಳೂರು: ಸರ್ಕಾರದ ವಿರುದ್ಧ ಜೆಡಿಎಸ್‌ ಪಾದಯಾತ್ರೆ ಆರಂಭಿಸುವ ಮುನ್ನ, ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತ ಸಾಧಕ-ಬಾಧಕ ಪರಿಶೀಲನೆ ಹಾಗೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಲು ಸರ್ಕಾರ ಸಮಿತಿ ಘೋಷಿಸಿದೆ. ನಿವೃತ್ತ ನ್ಯಾಯಮೂರ್ತಿ ಗುಹನಾಥನ್‌ ನರೇಂದರ್‌ ನೇತೃತ್ವದ ಸಮಿತಿ ರಚಿಸಲಾಗಿದೆ. 30 ದಿನದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಇಂದಿನಿಂದ 3 ದಿನ

‘ಬಿಡದಿ ಪಾದಯಾತ್ರೆ’

ರಾಮನಗರ: ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್, ತನ್ನ ಮಿತ್ರ ಪಕ್ಷ ಬಿಜೆಪಿ ಬೆಂಬಲದೊಂದಿಗೆ ಭಾನುವಾರ 3 ದಿನದ ಪಾದಯಾತ್ರೆ ಆರಂಭಿಸಲಿದೆ. ಭಾನುವಾರ ಬೆಳಗ್ಗೆ ಬೈರಮಂಗಲದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಆರ್‌. ಅಶೋಕ್‌ ಪಾದಯಾತ್ರೆಗೆ ಚಾಲನೆ ನೀಡಲಿದ್ದು ಬಿಡದಿಯಲ್ಲಿ ಮೊದಲ ದಿನದ ಯಾತ್ರೆ ಮುಗಿಯಲಿದೆ. ಸೋಮವಾರ ಬೆಳಗ್ಗೆ ಬಿಡದಿಯಲ್ಲಿ ದೇವೇಗೌಡ ಪಾದಯಾತ್ರೆಗೆ ಚಾಲನೆ ನೀಡುವರು. ಮಂಗಳವಾರ ಯಾತ್ರೆ ನೈಸ್‌ ರಸ್ತೆ ಜಂಕ್ಷನ್‌ನಿಂದ ಆರಂಭವಾಗಿ ನಂತರ, ಮಧ್ಯಾಹ್ನ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪುವುದು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಖಾತೆ ಹಂಚಿಕೆ ಚರ್ಚೆಗೆ ಇಂದು ಸಿಎಂ ದಿಲ್ಲಿಗೆ
ಕೃಷಿ ವಿವಿ ತರಲು ಕಣ್ಣೀರಲ್ಲ ರಕ್ತ ಸುರಿಸಿದ್ದೇನೆ : ಚಲುವರಾಯಸ್ವಾಮಿ