ಖಾತೆ ಹಂಚಿಕೆ ಚರ್ಚೆಗೆ ಇಂದು ಸಿಎಂ ದಿಲ್ಲಿಗೆ

Published : Aug 09, 2026, 04:53 AM IST
cm dk shivakumar

ಸಾರಾಂಶ

ಸಚಿವ ಸಂಪುಟದಲ್ಲಿ ಕೆಲ ಬದಲಾವಣೆ, ಖಾತೆ ಹಂಚಿಕೆ ಜತೆಗೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ವರಿಷ್ಠರೊಂದಿಗೆ ಮಹತ್ವದ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾನುವಾರ ದೆಹಲಿಗೆ ತೆರಳಲಿದ್ದಾರೆ.

 ಬೆಂಗಳೂರು : ಸಚಿವ ಸಂಪುಟದಲ್ಲಿ ಕೆಲ ಬದಲಾವಣೆ, ಖಾತೆ ಹಂಚಿಕೆ ಜತೆಗೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ವರಿಷ್ಠರೊಂದಿಗೆ ಮಹತ್ವದ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾನುವಾರ ದೆಹಲಿಗೆ ತೆರಳಲಿದ್ದಾರೆ.

ಪ್ರಸ್ತುತ ಸಂಪುಟ ವಿಸ್ತರಣೆ ಕುರಿತು ಉಂಟಾಗಿರುವ ಬಂಡಾಯ ಶಮನಗೊಳಿಸಲು ಡಿ.ಕೆ.ಶಿವಕುಮಾರ್‌ ಅವರು ಮೊದಲನೆಯದಾಗಿ ಸಂಪುಟದಲ್ಲಿ ಕೆಲ ಬದಲಾವಣೆ ಮಾಡುವ ಬಗ್ಗೆ ಸೋಮವಾರ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ.

ಎರಡನೇಯದಾಗಿ, ನೂತನ ಸಚಿವರ ಖಾತೆ ಹಂಚಿಕೆ ಬಗ್ಗೆ ಒಪ್ಪಿಗೆ ಪಡೆಯಲಿದ್ದಾರೆ. ಇದರ ಜತೆಗೆ 3ನೇ ವಿಷಯವಾಗಿ, ‘ಜೂ.3 ರಂದು ಪ್ರಮಾಣವಚನ ಸ್ವೀಕರಿಸಿ ವಿವಿಧ ಇಲಾಖೆಗಳ ಹೊಣೆಗಾರಿಕೆ ವಹಿಸಿಕೊಂಡ 5-6 ಮಂದಿ ಸಚಿವರ ಇಲಾಖೆಗಳನ್ನೂ ಅದಲು ಬದಲು ಮಾಡಲು ಚರ್ಚೆ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕೆಲ ಹಿರಿಯ ಸಚಿವರಿಗೆ ತಮಗೆ ವಹಿಸಿರುವ ಖಾತೆಗಳ ಬಗ್ಗೆ ಅಸಮಾಧಾನ ಮುಂದುವರೆದಿದೆ. ಹೀಗಾಗಿ ಜಲಸಂಪನ್ಮೂಲ, ಲೋಕೋಪಯೋಗಿ, ಮುಜರಾಯಿ, ಆರೋಗ್ಯ, ಕ್ರೀಡೆ ಮತ್ತು ಯುವಜನ ಸೇವೆ ಸೇರಿದಂತೆ 5-6 ಖಾತೆಗಳು ಬದಲಾಗಲಿವೆ ಎಂದು ಹೇಳಲಾಗಿದೆ.

ದೆಹಲಿಗೆ ಹೋಗುತ್ತಿದ್ದೇನೆ-ಸಿಎಂ:

ದೆಹಲಿಗೆ ತೆರಳುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್‌ ಅವರು, ‘ದೆಹಲಿಗೆ ಹೋಗಲೇ ಬೇಕಲ್ಲವೆ?, ನಿಮಗೆ ಮಾಹಿತಿ ನೀಡಿಯೇ ಹೋಗುತ್ತೇವೆ. ಭೇಟಿಯ ಸಮಯ ನಿಗದಿಪಡಿಸಿಕೊಂಡು ದೆಹಲಿಗೆ ಹೋಗಲಿದ್ದೇನೆ’ ಎಂದು ದೆಹಲಿಗೆ ಹೋಗುವ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

ನಾಳೆ ಸ್ಪಷ್ಟತೆ ಸಾಧ್ಯತೆ:

ಮೂಲಗಳ ಪ್ರಕಾರ ಭಾನುವಾರ ಸಂಜೆ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲಿದ್ದು, ಸೋಮವಾರದ ವೇಳೆಗೆ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ಸದಸ್ಯರಲ್ಲಿನ ಕೆಲ ಬದಲಾವಣೆ ಹಾಗೂ ಖಾತೆ ಹಂಚಿಕೆ ಬಗ್ಗೆ ಸ್ಪಷ್ಟತೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದಿದ್ದ ಅಸಮಾಧಾನ ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ. ಅವಕಾಶ ವಂಚಿತ ಎಂ.ಕೃಷ್ಣಪ್ಪ, ಕುರುಬ ಕೋಟಾದಡಿ ಬಸವರಾಜ ಶಿವಣ್ಣನವರ್‌ ಅವರಿಗೆ ಅವಕಾಶ ಕಲ್ಪಿಸುವ ಜತೆಗೆ ಒಬ್ಬ ಮಹಿಳೆಯನ್ನು ಕಡ್ಡಾಯವಾಗಿ ಪರಿಗಣಿಸಬೇಕಾಗಿದೆ.

ಈ ಸಮಸ್ಯೆ ಬಗೆಹರಿಸಲು ಕೆಲ ಆಯ್ಕೆಗಳನ್ನು ಸಿದ್ಧಪಡಿಸಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವರಿಷ್ಠರೊಂದಿಗೆ ಚರ್ಚಿಸಿ ಅನುಮತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ವರಿಷ್ಠರು ಸಂಪುಟದಲ್ಲಿನ ಬದಲಾವಣೆಗೆ ಒಪ್ಪಿದರೆ ಕುರುಬ ಕೋಟಾದಡಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹೆಸರು ಸಂಪುಟದಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಜತೆಗೆ ಎಂ.ಕೃಷ್ಣಪ್ಪ ಅವರಿಗೆ ಅವಕಾಶ ನೀಡಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಲು ಒಪ್ಪಿರುವ ಒಬ್ಬರು ಒಕ್ಕಲಿಗ ಸಚಿವರು ರಾಜೀನಾಮೆ ನೀಡುವ ನಿರೀಕ್ಷೆಯಿದೆ.

ಮಹಿಳಾ ಕೋಟಾ ಭರ್ತಿ ಮಾಡುವ ಬಗ್ಗೆ ವರಿಷ್ಠರ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯಲಿದೆ. ಬಳ್ಳಾರಿ ಮೂಲದ ಸಚಿವರ ರಾಜೀನಾಮೆ ಕೊಡಿಸಿ ಬಳ್ಳಾರಿ ಮೂಲದ ಸಂಸದರ ಪತ್ನಿ ಹಾಗೂ ಶಾಸಕರಾಗಿರುವ ಮಹಿಳೆಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಮಹಿಳಾ ಸಚಿವ ಸ್ಥಾನಕ್ಕೆ ಪರಿಷತ್‌ನಿಂದಲೂ ಪೈಪೋಟಿಯಿದ್ದು, ವಿಧಾನಸಭೆಯಿಂದ ಆಯ್ಕೆಯಾದವರು ಮಹಿಳಾ ಸಚಿವರಾಗುತ್ತಾರೋ ಅಥವಾ ವಿಧಾನ ಪರಿಷತ್‌ನಿಂದ ಆಗುತ್ತಾರೋ ಎಂಬುದು ಸಹ ಮುಖ್ಯಮಂತ್ರಿಗಳ ದೆಹಲಿ ಭೇಟಿ ವೇಳೆ ತೀರ್ಮಾನವಾಗಲಿದೆ.

 5-6 ಸಚಿವರ ಖಾತೆ ಬದಲಾವಣೆಗೂ ಚರ್ಚೆ?

ಬೆಂಗಳೂರು: ಪ್ರಸ್ತುತ ಸಂಪುಟ ವಿಸ್ತರಣೆ ಕುರಿತು ಉಂಟಾಗಿರುವ ಬಂಡಾಯ ಶಮನಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾನುವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಜತೆ ಚರ್ಚಿಸಲಿದ್ದಾರೆ. ಜತೆಗೆ ‘ಜೂ.3 ರಂದು ಪ್ರಮಾಣವಚನ ಸ್ವೀಕರಿಸಿದ್ದ 5-6 ಮಂದಿ ಸಚಿವರ ಇಲಾಖೆಗಳನ್ನೂ ಅದಲು ಬದಲು ಮಾಡಲು ಚರ್ಚೆ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೃಷಿ ವಿವಿ ತರಲು ಕಣ್ಣೀರಲ್ಲ ರಕ್ತ ಸುರಿಸಿದ್ದೇನೆ : ಚಲುವರಾಯಸ್ವಾಮಿ
2029ಕ್ಕೆ ರಾಹುಲ್ ಪ್ರಧಾನಿ ಮಾಡಲು ಪಣ: ಪಿ.ಎಂ.ನರೇಂದ್ರಸ್ವಾಮಿ