ಮನೆ ಮುಂದೆ ವಾಹನ ಪಾರ್ಕಿಂಗ್‌ ಶುಲ್ಕ ವಿಧಿಸಿರುವುದಕ್ಕೆ ಜೆಡಿಎಸ್‌ ಆಕ್ರೋಶ

KannadaprabhaNewsNetwork |  
Published : Aug 23, 2026, 02:00 AM IST
JDS

ಸಾರಾಂಶ

ನಗರದಲ್ಲಿ ಮನೆ ಮುಂದೆ ನಿಲ್ಲಿಸಲಾಗುವ ಮನೆ ಮಾಲೀಕರ ವಾಹನಗಳಿಗೂ ಪಾರ್ಕಿಂಗ್‌ ಶುಲ್ಕ ವಿಧಿಸಿರುವುದಕ್ಕೆ ಜೆಡಿಎಸ್‌ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಈ ಜನವಿರೋಧಿಸಿ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿದೆ.

 ಬೆಂಗಳೂರು : ನಗರದಲ್ಲಿ ಮನೆ ಮುಂದೆ ನಿಲ್ಲಿಸಲಾಗುವ ಮನೆ ಮಾಲೀಕರ ವಾಹನಗಳಿಗೂ ಪಾರ್ಕಿಂಗ್‌ ಶುಲ್ಕ ವಿಧಿಸಿರುವುದಕ್ಕೆ ಜೆಡಿಎಸ್‌ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಈ ಜನವಿರೋಧಿಸಿ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿದೆ.

ಶನಿವಾರ ಜೆಡಿಎಸ್‌ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಗ್ರೇಟರ್‌ ಬೆಂಗಳೂರು ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ ಗೌಡ ಮತ್ತು ವಿಧಾನ ಪರಿಷತ್ತಿನ ಸದಸ್ಯ ಶರವಣ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರೇ "ಇದ್ಯಾವ ಸೀಮೆ ಆಡಳಿತ ನಿಮ್ಮದು? ವಿಧಾನಸೌಧ, ಜಿಬಿಎ, ರಾಜ್ಯ ಉಚ್ಚ ನ್ಯಾಯಾಲಯ, ಸಿಟಿ ನ್ಯಾಯಾಲಯಗಳ ಸಂಕೀರ್ಣ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆಯೇ ಇಲ್ಲ ಎನ್ನುವುದು ಈ ಸರ್ಕಾರಕ್ಕೆ ಗೊತ್ತಿಲ್ಲವೇ? ತಪ್ಪು ಸರ್ಕಾರದ್ದಾಗಿದ್ದರೆ ಅದರ ಪ್ರತಿಫಲವನ್ನು ಸಾರ್ವಜನಿಕರು ಅನುಭವಿಸಬೇಕಾ " ಎಂದು ವಾಗ್ದಾಳಿ ನಡೆಸಿದರು.

ಸಚಿವ ಕೃಷ್ಣ ಬೈರೇಗೌಡರ ಮನೆ ಸಮೀಪವಿರುವ ಅಪಾರ್ಟ್ಮೆಂಟ್ ಮುಂದೆಯೇ ಪಾರ್ಕಿಂಗ್ ಮಾಡಲು ಜಾಗವಿಲ್ಲ. ಆ ಅಪಾರ್ಟ್ಮೆಂಟಿಗೆ ಬರುವ ಅತಿಥಿಗಳು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬುದನ್ನು ಅವರೇ ಹೇಳಬೇಕು. ಕೇವಲ ಕಾನೂನು ಮಾಡುವುದು ಅಥವಾ ನಿಯಮ ರೂಪಿಸುವುದು ದೊಡ್ಡ ವಿಷಯವಲ್ಲ. ಜನರ ನಿಜವಾದ ಪರಿಸ್ಥಿತಿ ಏನಿದೆ ಎಂಬುದನ್ನು ಅಧ್ಯಯನ ಮಾಡಿ ರೂಪಿಸಬೇಕು ಎಂದು ಹೇಳಿದರು.

ಜೆ.ಸಿ.ರಸ್ತೆ ಪಾರ್ಕಿಂಗ್ ಕಟ್ಟಡ ಬಾಡಿಗೆಗೆ:

ಜೆ.ಸಿ.ರಸ್ತೆಯಲ್ಲಿ ಬೃಹತ್ ಪಾರ್ಕಿಂಗ್ ಕಟ್ಟಡವನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗಿದೆ. ದುರಂತವೆಂದರೆ ಈ ಕಟ್ಟಡವನ್ನು ಖಾಸಗಿ ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆಗೆ ನೀಡಲಾಗಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಿಬಿಎಂಪಿಯನ್ನು ಐದು ಭಾಗ ಮಾಡಿದ್ದಾಯಿತು. ಕೇವಲ ಹೆಸರು ಬದಲಾವಣೆ ಮಾಡಿದರೆ ಉಪಯೋಗ ಇಲ್ಲ. ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿಗೆ ಒಂದು ಬಾಂಡ್ಲಿ ಮಣ್ಣು ಹಾಕುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದು ಕಟುವಾಗಿ ಟೀಕಿಸಿದರು.

ನಿರ್ಧಾರ ಕೈಬಿಡದಿದ್ದರೆ ಜೆಡಿಎಸ್‌ ಹೋರಾಟ:

ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡದೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಅಂತದ್ದರಲ್ಲಿ ತಮ್ಮ ಮನೆಗಳ ಮುಂದೆ ಮನೆ ಮಾಲೀಕರು ವಾಹನಗಳನ್ನು ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸಲು ಹೊರಟಿರುವುದು ಸರಿಯಲ್ಲ. ಭಾರತದ ಯಾವುದೇ ನಗರದಲ್ಲಿಯೂ ಇಲ್ಲದ ಪಾರ್ಕಿಂಗ್ ಶುಲ್ಕವನ್ನು ಸಾರ್ವಜನಿಕರ ಮೇಲೆ ಹೇರಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ, ಜೆಡಿಎಸ್‌ ಪಕ್ಷದಿಂದ ದೊಡ್ಡ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೋದಿ ಗೆದ್ದಿದ್ದು ವಾಮ ಮಾರ್ಗದಿಂದ: ಖರ್ಗೆ
ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ