ನವದೆಹಲಿ: ‘ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋದರೆ ಮನೆಗೆ ಹೋದ ಅನುಭವವಾಗುತ್ತದೆ. ಭಾರತವು ಪಾಕಿಸ್ತಾನದೊಂದಿಗೆ ಸಾಮರಸ್ಯದಿಂದ ಬಾಳಬೇಕು’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪಿತ್ರೋಡಾ, ‘ನಾನು ಪಾಕಿಸ್ತಾನಕ್ಕೆ ಹೋಗಿದ್ದೇನೆ. ಆಗ ನಾನು ಮನೆಯಲ್ಲಿರುವಂತೆ ಭಾಸವಾಯಿತು. ನಾನು ಬಾಂಗ್ಲಾದೇಶ, ನೇಪಾಳಕ್ಕೆ ಹೋದಾಗಲೂ ಹಾಗೆಯೇ ಭಾಸವಾಯಿತು. ವಿದೇಶದಲ್ಲಿದ್ದೇನೆ ಎಂದು ನನಗೆ ಅನಿಸಲಿಲ್ಲ. ಅವರು ನನ್ನಂತೆಯೇ ಕಾಣುತ್ತಾರೆ, ನನ್ನಂತೆಯೇ ಮಾತನಾಡುತ್ತಾರೆ, ನನ್ನ ಹಾಡುಗಳನ್ನು ಇಷ್ಟಪಡುತ್ತಾರೆ ಮತ್ತು ನನ್ನ ಆಹಾರವನ್ನೇ ತಿನ್ನುತ್ತಾರೆ. ನಾವು ಅವರೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಕಲಿಯಬೇಕು’ ಎಂದಿದ್ದಾರೆ.
‘ನಮ್ಮ ವಿದೇಶ ನೀತಿಯು ಮೊದಲು ನಮ್ಮ ನೆರೆಹೊರೆಯ ಬಗ್ಗೆ ಗಮನ ಹರಿಸಬೇಕು. ಅವರೆಲ್ಲ ಕಷ್ಟದ ಸಮಯದಲ್ಲಿದ್ದಾರೆ. ಅವರೊಂದಿಗೆ ಸಂಘರ್ಷ ಮಾಡುವ ಅಗತ್ಯವಿಲ್ಲ. ಹಿಂಸೆ ಮತ್ತು ಭಯೋತ್ಪಾದನೆಯ ಸಮಸ್ಯೆಗಳಿವೆ. ಆದರೆ ನಾವೆಲ್ಲ ಒಂದೇ ವಂಶವಾಹಿ ಹೊಂದಿರುವವರು’ ಎಂದಿದ್ದಾರೆ.
ಬಿಜೆಪಿ ಕಿಡಿ:
ಪಿತ್ರೋಡಾ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ‘ರಾಹುಲ್ ಗಾಂಧಿಯವರ ನೀಲಿ ಕಣ್ಣಿನ ಹುಡುಗ ಸ್ಯಾಮ್ ಪಿತ್ರೋಡಾ, ಪಾಕ್‌ನಲ್ಲಿದ್ದರೆ ಮನೆಯಲ್ಲಿದ್ದಂತೆ ಭಾಸವಾಗುತ್ತದೆ ಎಂದಿದ್ದರಲ್ಲಿ ಆಶ್ಚರ್ಯವಿಲ್ಲ. 26/11ರ ಮುಂಬೈ ದಾಳಿ ನಂತರ ಅಂದಿನ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.
ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ, ‘ಪೂರ್ವ ಭಾರತದವರು ಚೀನಿಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ ಕಾಣುತ್ತಾರೆ’ ಎಂದಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೂ ಮೊದಲು ಚೀನಾ ಅಪಾಯದ ಕುರಿತು ಭಾರತ ಅತಿರೇಕದ ಪ್ರತಿಕ್ರಿಯೆ ನೀಡುತ್ತಿದೆ ಎಂದಿದ್ದರು.
ದೇಶಕ್ಕೆ ರಾಮಮಂದಿರ ಪ್ರಮುಖ ವಿಷಯವಾಗಬೇಕೋ ಅಥವಾ ಹಣದುಬ್ಬರವೋ ಎಂದೂ ಪ್ರಶ್ನಿಸಿದ್ದರು. 1984ರ ಸಿಖ್ ವಿರೋಧಿ ದಂಗೆ ಉಲ್ಲೇಖಿಸಿ ಆಗಿದ್ದು ಆಗಿ ಹೋಯ್ತು ಎಂದಿದ್ದರು. ಜೊತೆಗೆ ಮಧ್ಯಮ ವರ್ಗದವರು ಹೆಚ್ಚು ಸ್ವಾರ್ಥಿಗಳಾಗಬಾರದು. ವಿಶಾಲ ಹೃದಯಗಳಾಗಿರಬೇಕು ಎಂದು ಕಾಂಗ್ರೆಸ್ ನ್ಯಾಯ ಯೋಜನೆ ಸಮರ್ಥಿಸಿಕೊಂಡಿದ್ದರು.
ವಿದೇಶ ಅನಿಸಲಿಲ್ಲ
ನಾನು ಪಾಕಿಸ್ತಾನಕ್ಕೆ ಹೋಗಿದ್ದೇನೆ. ಆಗ ನಾನು ಮನೆಯಲ್ಲಿರುವಂತೆ ಭಾಸವಾಯಿತು. ನಾನು ಬಾಂಗ್ಲಾದೇಶ, ನೇಪಾಳಕ್ಕೆ ಹೋದಾಗಲೂ ಹಾಗೆಯೇ ಭಾಸವಾಯಿತು. ವಿದೇಶದಲ್ಲಿದ್ದೇನೆ ಎಂದು ನನಗೆ ಅನಿಸಲಿಲ್ಲ. ನಾವು ಅವರೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಕಲಿಯಬೇಕು.
- ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ