ಬೆಂಗಳೂರು : ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣದ ಕುರಿತು ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಮಟ್ಟದ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು (ಎಸ್‌ಐಟಿ) ರಾಜ್ಯ ಸರ್ಕಾರ ಮುಂದಾಗಿದೆ.
ಎಸ್‌ಐಟಿ ರಚನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಂಬಂಧ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಿದೆ. ಈ ತನಿಖಾ ತಂಡದ ಸಾರಥ್ಯವನ್ನು ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ (ಬಿ.ಕೆ.ಸಿಂಗ್) ಅವರಿಗೆ ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈಗಾಗಲೇ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ, ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣಗಳ ತನಿಖೆಗೆ ಬಿ.ಕೆ.ಸಿಂಗ್ ಅವರ ನೇತೃತ್ವದಲ್ಲೇ ಎಸ್‌ಐಟಿಗಳು ರಚನೆಯಾಗಿದ್ದವು. ಈಗ ಪ್ರಮುಖ ಮತ್ತೊಂದು ಪತ್ತೆದಾರಿಕೆ ಕೇಸ್ ಹೊಣೆಗಾರಿಕೆ ಸಹ ಸಿಂಗ್ ಅವರ ಹೆಗಲಿಗೆ ಬೀಳಲಿದೆ.
ಕಳೆದ 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಮತ ಕ್ಷೇತ್ರದಲ್ಲಿ 6 ಸಾವಿರ ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದ ಕೃತ್ಯ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಅಂದು ಈ ಬಗ್ಗೆ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ ಆಳಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಬಳಿಕ ಮತಗಳ್ಳತನ ಕೃತ್ಯದ ಬಗ್ಗೆ ಸಿಐಡಿ ತನಿಖೆಗೆ ಆದೇಶವಾಗಿತ್ತು. ಈಗ ಸೈಬರ್ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಮತಗಳ್ಳತನ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಬಲ ದನಿ ಎತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮತಗಳ್ಳತನ ಜಾಲ ಭೇದಿಸಲು ತಮ್ಮ ವಿಶ್ವಾಸಾರ್ಹ ಅಧಿಕಾರಿ ಬಿ.ಕೆ.ಸಿಂಗ್ ಅವರಿಗೆ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.