ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು

Published : Jan 10, 2026, 11:47 AM IST
CM Siddaramaiah

ಸಾರಾಂಶ

ರಾಜ್ಯದ ಜನ ಮತ್ತು ಹೈಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲದಿಂದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

  ವಿಜಯಪುರ :  ರಾಜ್ಯದ ಜನ ಮತ್ತು ಹೈಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲದಿಂದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅನಾವರಣ ಒಳಗೊಂಡಂತೆ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದೇವರಾಜ ಅರಸು ಅವರು 7 ವರ್ಷ 239 ದಿನಗಳ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆಯನ್ನು ಮುರಿದು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡಲು ಸಾಧ್ಯವಾಗಿದ್ದು ಜನರ ಆಶೀರ್ವಾದದಿಂದ. ಅದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಅರ್ಪಿಸುವೆ ಎಂದರು.

ಇಂದು ಜಿಲ್ಲೆಯಲ್ಲಿ ₹800 ಕೋಟಿಗೂ ಅಧಿಕ ವೆಚ್ಚದ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ. ಇಂದು ಸೈಕ್ಲಿಂಗ್ ವೆಲೊಡ್ರೋಮ್ ಉದ್ಘಾಟನೆ ಮಾಡಿದ್ದೇನೆ. ಇದು ದಕ್ಷಿಣ ಭಾರತದಲ್ಲೇ ಮೊದಲ ಸೈಕ್ಲಿಂಗ್ ವೆಲೊಡ್ರೋಮ್ ಆಗಿದೆ ಎಂದರು.

ಸರ್ಕಾರದಿಂದಲೇ ಮೆಡಿಕಲ್‌ ಕಾಲೇಜು:

ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕೆಂದು ಹೋರಾಟ ಮಾಡುತ್ತಿದ್ದೀರಿ. ಜೊತೆಗೆ, ಸಚಿವರಾದ ಎಂ.ಬಿ.ಪಾಟೀಲ ಹಾಗೂ ಶಿವಾನಂದ‌ ಪಾಟೀಲ ಸಹ ಈ ಕುರಿತು ನನಗೆ ಮನವಿ ಮಾಡಿದ್ದಾರೆ. ನೀವಿನ್ನು ಹೋರಾಟ ಮಾಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸರ್ಕಾರದಿಂದಲೇ ಮೆಡಿಕಲ್ ಕಾಲೇಜು ಸ್ಥಾಪಿಸಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರ ಪಿಪಿಪಿ ಮಾದರಿಯಲ್ಲಿ ಕಾಲೇಜು ಸ್ಥಾಪನೆಗೆ ಮುಂದಾಗಿತ್ತು. ಇದರಿಂದಾಗಿ ಸಮಸ್ಯೆಯಾಗಿತ್ತು ಎಂದರು.

ರಾಜ್ಯದಲ್ಲಿ ಈಗಾಗಲೇ 71 ಮೆಡಿಕಲ್‌ ಕಾಲೇಜುಗಳಿವೆ. ಅದರಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಯಾವ ಜಿಲ್ಲೆಯಲ್ಲಿ ಇಲ್ಲವೋ ಆ ಎಲ್ಲ ಕಡೆಗಳಲ್ಲಿ ಸರ್ಕಾರದಿಂದಲೇ ಮೆಡಿಕಲ್‌ ಕಾಲೇಜು ಮಾಡುತ್ತೇವೆ. ಜೊತೆಗೆ ಟ್ರಾಮಾ‌ ಸೆಂಟರ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು.

ಯತ್ನಾಳರ ಬೇಡಿಕೆ ಓಕೆ ಎಂದ ಸಿದ್ದು:

ಇದು ಯತ್ನಾಳರ ಕ್ಷೇತ್ರ ಎಂಬುದು ನನಗೆ ಗೊತ್ತು. ಆದ್ದರಿಂದ ಅವರ ಅಭಿಮಾನಿಗಳು ಇಲ್ಲಿದ್ದಾರೆ. ನೀವು ನಮ್ಮ ಅಭಿಮಾನಿಗಳು‌ ಕೂಡ ಹೌದು. ನಿಮ್ಮೆಲ್ಲರ ಆಶೀರ್ವಾದದಿಂದಲೇ‌ 136 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಜಿಲ್ಲೆಯಲ್ಲಿನ 8 ಕ್ಷೇತ್ರಗಳಲ್ಲಿ ನಾವು 6 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇದೀಗ ಶಾಸಕ ಯತ್ನಾಳರು, ನಗರದ ಭಕ್ತ ಕನಕ‌ದಾಸ ಸರ್ಕಲ್‌ನಿಂದ ಡಾ.ಅಂಬೇಡ್ಕರ್‌ ಮಾರ್ಗವಾಗಿ ಶಿವಾಜಿ‌ ಮಹಾರಾಜರ ವೃತ್ತದವರೆಗೆ ₹160 ಕೋಟಿ ವೆಚ್ಚದ ಮೇಲ್ಸೇತುವೆ ಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ನಾನು ಮಾಡಿಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದಾಕೆ ಪ್ರಧಾನಿ ಆಗ್ತಾಳೆ : ಒವೈಸಿ