ರಾಹುಲ್ ಗೆ ಅವಹೇಳನ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork | Published : Oct 8, 2023 12:03 AM

ಸಾರಾಂಶ

ರಾಹುಲ್ ಗೆ ಅವಹೇಳನ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ತುಮಕೂರು ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಹಿರಿಯ ಮುಖಂಡ ರಾಹುಲ್‌ಗಾಂಧಿ ಅವರನ್ನು ಪುರಾಣದ ರಾವಣನಿಗೆ ಹೋಲಿಸಿ, ಪೋಸ್ಟರ್ ಸಿದ್ದಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಬಿಜೆಪಿ ಕ್ರಮವನ್ನು ಖಂಡಿಸಿ, ಶನಿವಾರ ಜಿಲ್ಲಾ ಕಾಂಗ್ರೆಸ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ನಗರದ ಭದ್ರಮ್ಮ ಸರ್ಕಲ್‌ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿಯ ಈ ಹೀನ ಕೃತ್ಯಕ್ಕೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ರಾಹುಲ್ ಗಾಂಧಿ ಅವರ ಕುಟುಂಬದ ಇತಿಹಾಸ ಸರಿಯಾಗಿ ಅರ್ಥ ಮಾಡಿಕೊಳ್ಳದ ಬಿಜೆಪಿಗರು, ಇಂಡಿಯಾ ಒಕ್ಕೂಟದಿಂದ ದಿಕ್ಕೆಟ್ಟು ಈ ರೀತಿಯ ಅವಹೇಳನಕಾರಿ ಪೋಸ್ಟರ್‌ ಬಿಡುಗಡೆ ಮಾಡಿರುವುದು ಖಂಡನೀಯ. ಟೀಕೆಗೂ ಒಂದು ರೀತಿ, ನೀತಿ ಇದೆ. ಅದು ಯಾವಾಗಲು ಪ್ರಜಾ ಸತ್ತಾತ್ಮಕವಾಗಿರಬೇಕು. ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಇವರೆಲ್ಲರೂ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ವ್ಯಕ್ತಿಯನ್ನು ಪದೇ ಪದೇ ತಜೋವಧೆ ಆಡುವುದು ಸರಿಯಲ್ಲ. ಬಿಜೆಪಿ ತನ್ನ ನಡವಳಿಕೆ ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು. ಗ್ರಾಮಾಂತರ ಮುಖಂಡ ಷಣ್ಮುಖಪ್ಪ ಮಾತನಾಡಿ, ರಾಹುಗಾಂಧಿಯವರನ್ನು ರಾವಣನಿಗೆ ಹೋಲಿಸಿದ್ದಾರೆ. ಆದರೆ, ರಾವಣ ಸಕಲ ವಿದ್ಯಾಪಾರಂಗತ, ಬ್ರಹ್ಮನಿಗೆ ಮಂತ್ರೋಪದೇಶ ಮಾಡಿದಂತಹ ಮಹಾನ್ ವ್ಯಕ್ತಿ. ತನ್ನ ತಪ್ಪಸ್ಸಿನ ಮೂಲಕ ಶಿವನನ್ನು ಮೆಚ್ಚಿಸಿ ಆತನ ಆತ್ಮಲಿಂಗವನ್ನು ಬಳುವಳಿಯಾಗಿ ಪಡೆದಂತಹ ಧೀರ. ಇದನ್ನು ಅರ್ಥೈಸಿಕೊಳ್ಳದ ಬಿಜೆಪಿಗರು, ರಾಹುಲ್‌ಗಾಂಧಿ ಅವರನ್ನು ಹಿಯಾಳಿಸಲು ಹೋಗಿ ತಾವೇ ಪೇಚಿಗೆ ಸಿಲುಕಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ಆತೀಕ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಬೂಬ್ ಪಾಷ, ಮಹೇಶ್, ನರಸಿಂಹಮೂರ್ತಿ, ಶೆಟ್ಟಾಳಯ್ಯ, ಆದಿಲ್, ಕೈದಾಳ ರಮೇಶ್, ಹೆಬ್ಬೂರು ಶ್ರೀನಿವಾಸಮೂರ್ತಿ, ಉಬೇದುಲ್ಲಾ ಪಾಲ್ಗೊಂಡಿದ್ದರು.

Share this article