;Resize=(412,232))
ಬೆಂಗಳೂರು : ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಹಿಂದ ವರ್ಗದ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂಬ ಗಂಭೀರ ಆರೋಪ ಮಾಡಿರುವ ಮುಖ್ಯಮಂತ್ರಿ ಅವರು ದಾಖಲೆ ಸಹಿತ ಈ ಆರೋಪ ಸಾಬೀತು ಮಾಡಬೇಕು. ಇಲ್ಲವೇ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಮತ್ತು ಫಾರ್ಮ್ 7 ಅರ್ಜಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಗಳು ಅತ್ಯಂತ ಗಂಭೀರವಾಗಿವೆ. 50 ಲಕ್ಷ ಮತದಾರರ ಹೆಸರು ತೆಗೆದು ಹಾಕಲು ಬಿಜೆಪಿ ಸಂಚು ನಡೆಸಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾದ ಯಾವುದೇ ನಿಖರ ದಾಖಲೆ ಅಥವಾ ಸಾಕ್ಷ್ಯವನ್ನು ಸಾರ್ವಜನಿಕವಾಗಿ ಮುಂದಿಟ್ಟಿಲ್ಲ ಎಂದು ಕಿಡಿಕಾಡಿದರು.
ಫಾರ್ಮ್ 7 ಎಂಬುದು ಬಿಜೆಪಿ ಮಾತ್ರ ಬಳಸಬಹುದಾದ ವಿಶೇಷ ಸಾಧನವಲ್ಲ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿರುವ ಅನರ್ಹ, ಮೃತ, ಸ್ಥಳಾಂತರಗೊಂಡ ಅಥವಾ ದ್ವಂದ್ವ ನೋಂದಣಿಯಂಥ ಪ್ರಕರಣಗಳ ಕುರಿತು ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಕಾಶ. ಹೀಗಾಗಿ ಬಿಜೆಪಿ ಸೇರಿ ಯಾವುದೇ ರಾಜಕೀಯ ಪಕ್ಷ ಅಥವಾ ಅರ್ಹ ವ್ಯಕ್ತಿ ಫಾರ್ಮ್ 7 ಸಲ್ಲಿಸಿದರೆ, ಚುನಾವಣಾಧಿಕಾರಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಫಾರ್ಮ್ 7 ಸಲ್ಲಿಸಿದ ತಕ್ಷಣ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕುವುದಿಲ್ಲ. ಹೀಗಾಗಿ ಫಾರ್ಮ್ 7 ಸಲ್ಲಿಸುವ ಹಕ್ಕನ್ನೇ ಅಕ್ರಮ ಎಂದು ಬಿಂಬಿಸುವುದು ಸರಿಯಲ್ಲ ಎಂದರು.
ಹೆಸರು ಅಳಿಸುವ ಅಧಿಕಾರ ಬಿಜೆಪಿ ಕೈಯಲ್ಲಿಲ್ಲ:
ಬಿಜೆಪಿಯ ಕೈಯಲ್ಲಿ ಮತದಾರರ ಹೆಸರನ್ನು ನೇರವಾಗಿ ಅಳಿಸುವ ಯಾವುದೇ ಅಧಿಕಾರವಿಲ್ಲ. ಫಾರ್ಮ್ 7 ಸಲ್ಲಿಸಿದ ಮಾತ್ರಕ್ಕೆ ಹೆಸರು ಅಳಿದುಹೋಗುವುದಿಲ್ಲ. ಪರಿಶೀಲನೆ, ಆಕ್ಷೇಪಣೆ, ವಿಚಾರಣೆ ಸೇರಿ ಚುನಾವಣಾ ಆಯೋಗದ ನಿಗದಿತ ಪ್ರಕ್ರಿಯೆ ನಂತರವೇ ನಿರ್ಧಾರವಾಗುತ್ತದೆ. ಹೀಗಾಗಿ ಬಿಜೆಪಿ ಮತದಾರರ ಹೆಸರುಗಳನ್ನು ಅಳಿಸುತ್ತಿದೆ ಎಂದು ಮುಖ್ಯಮಂತ್ರಿಗಳ ನೇರ ಆರೋಪ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಫಾರ್ಮ್ 7 ಸಲ್ಲಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದು, ಅವರ ಮೇಲೆ ರಾಜಕೀಯ ಒತ್ತಡ ಹೇರುವುದು ಸರಿಯಲ್ಲ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕುವುದನ್ನು ಬಿಜೆಪಿ ಸಹಿಸುವುದಿಲ್ಲ. ಯಾವುದೇ ಪ್ರಕರಣವನ್ನು ಕಾನೂನು ಹೋರಾಟದ ಮೂಲಕ ಎದುರಿಸಲಿದೆ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಅವರು ಎಸ್‌ಐಆರ್ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ್ದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಥವಾ ಯಾವುದೇ ಸಂಘಟನೆಗೆ ಸೇರಿದವರಾದರೂ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಲಿ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
- ಎಸ್‌ಐಆರ್ ಪ್ರಕ್ರಿಯೆ ವೇಳೆ ಅಹಿಂದ ವರ್ಗ ಸೇರಿ 50 ಲಕ್ಷ ಮತದಾರರು ಹೆಸರು ತೆಗೆಯಲು ಬಿಜೆಪಿ ಸಂಚು ಎಂದಿದ್ದ ಡಿಕೆಶಿ
- ಈ ಆರೋಪಗಳು ಗಂಭೀರ. ಆರೋಪಕ್ಕೆ ಸಿಎಂ ಯಾವುದೇ ದಾಖಲೆ/ಸಾಕ್ಷ್ಯವನ್ನು ಕೊಟ್ಟಿಲ್ಲ ಎಂದು ಹೇಳಿದ ವಿಜಯೇಂದ್ರ
- ದಾಖಲೆ ಸಹಿತ ಆರೋಪವನ್ನು ಮುಖ್ಯಮಂತ್ರಿಗಳು ಸಾಬೀತುಪಡಿಸಬೇಕು. ಇಲ್ಲವಾದರೆ ರಾಜೀನಾಮೆ ಕೊಡಬೇಕು: ಬಿವೈವಿ