ಫಲಿಸಿದ ಸಂಧಾನ ರಾಜೀನಾಮೆ ಪಟ್ಟು ಬಿಟ್ಟ ಸಚಿವ ರಾಮಲಿಂಗಾ ರೆಡ್ಡಿ

Published : Jun 07, 2026, 07:09 AM IST
ramalinga reddy

ಸಾರಾಂಶ

ಎರಡು ದಿನಗಳ ಪ್ರಹಸನ, ಸರಣಿ ಸಭೆ ಹಾಗೂ ಹೈಕಮಾಂಡ್‌ ಮಧ್ಯಪ್ರವೇಶದ ಪರಿಣಾಮ ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಧ್ಯರಾತ್ರಿ ಸಂಧಾನ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಸಂಧಾನ  ಪರಿಣಾಮ

  ಬೆಂಗಳೂರು :  ಎರಡು ದಿನಗಳ ಪ್ರಹಸನ, ಸರಣಿ ಸಭೆ ಹಾಗೂ ಹೈಕಮಾಂಡ್‌ ಮಧ್ಯಪ್ರವೇಶದ ಪರಿಣಾಮ ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಧ್ಯರಾತ್ರಿ ಸಂಧಾನ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಬೆಳಗಿನ ಮನವರಿಕೆ ಹಾಗೂ ರಾಜ್ಯದ ಬಹುತೇಕ ನಾಯಕರ ದೂರವಾಣಿ ಸಮಾಧಾನದ ಪರಿಣಾಮವಾಗಿ ರಾಜೀನಾಮೆ ಪ್ರಕರಣ ಬಗೆಹರಿದಿದೆ. ಅಧಿಕೃತ ವಿವರಣೆ ಪ್ರಕಾರ- ರಾಮಲಿಂಗಾರೆಡ್ಡಿ ಅವರು ನೀಡಿದ್ದ ರಾಜೀನಾಮೆಯನ್ನು ಸಿಎಂ ಶಿವಕುಮಾರ್‌ ತಿರಸ್ಕರಿಸಿದ್ದಾರೆ. ಹೀಗಾಗಿ ರಾಜೀನಾಮೆ ಈ ಪ್ರಹಸನ ಅಂತ್ಯಗೊಂಡಿದ್ದು, ರೆಡ್ಡಿ ಅವರು ಜಲಸಂಪನ್ಮೂಲ ಖಾತೆ ಸಚಿವರಾಗಿ ಮುಂದುವರೆಯಲಿದ್ದಾರೆ.

ಆದರೆ, ಸಂಧಾನದ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಕೆಲ ಭರವಸೆಗಳು ದೊರಕಿದೆ. ಆ ಭರವಸೆ ಹೆಚ್ಚುವರಿ ಖಾತೆಯಾಗುವ ಸಾಧ್ಯತೆ ಹೆಚ್ಚಿದೆ.

ಭಾವನೆ ಮುಂದಿಟ್ಟಿದ್ದೇನೆ:

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಮುಖ್ಯಮಂತ್ರಿಯವರು ನನ್ನ ರಾಜೀನಾಮೆ ತಿರಸ್ಕರಿಸಿದ್ದಾರೆ. ಆದರೆ, ನಾನು ನನ್ನ ಭಾವನೆಗಳನ್ನು ರಾಜ್ಯ ನಾಯಕತ್ವ ಹಾಗೂ ಹೈಕಮಾಂಡ್‌ ಮುಂದಿಟ್ಟಿದ್ದೇನೆ. ಸೂಕ್ತ ಸಮಾಧಾನ ನೀಡುವುದಾಗಿ ಹೇಳಿದ್ದಾರೆ. ಆ ಬಗ್ಗೆ ನನಗೆ ನಂಬಿಕೆಯಿದೆ ಎಂದರು.

ಸಚಿವ ಸ್ಥಾನದಲ್ಲಿ ಮುಂದುವರೆಯುವಿರಾ ಎಂಬ ಪ್ರಶ್ನೆಗೆ ರಾಜೀನಾಮೆ ತಿರಸ್ಕಾರವಾಗಿರುವುದರಿಂದ ಬೇರೆ ದಾರಿಯಿಲ್ಲ ಎಂದರು.

ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದ ರಾಮಲಿಂಗಾರೆಡ್ಡಿ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯಕ್ಕಾಗಮಿಸಿದ ಸಂದರ್ಭದಲ್ಲೇ ರಾಜೀನಾಮೆ ಪ್ರಹಸನ ನಡೆದಿದ್ದರಿಂದ ಶುಕ್ರವಾರವಿಡೀ ಕಾಂಗ್ರೆಸ್‌ನಲ್ಲಿ ತೀವ್ರ ಬೆಳವಣಿಗೆಗಳು ಮತ್ತು ಚರ್ಚೆಗಳು ಆರಂಭವಾಗಿದ್ದವು.

ರಾಮಲಿಂಗಾರೆಡ್ಡಿ ಅವರ ಮುನಿಸು ಶಮನಕ್ಕೆ ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಂದಾಗಿ, ಶುಕ್ರವಾರ ರಾತ್ರಿ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾರೆಡ್ಡಿ ಅವರೊಂದಿಗೆ 2 ಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು. ಈ ವೇಳೆ ರಾಮಲಿಂಗಾರೆಡ್ಡಿ ಅವರು 2023ರಲ್ಲಿ ಖಾತೆ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ಸಹೋದರ ಡಿ.ಕೆ. ಸುರೇಶ್‌ ನೀಡಿದ್ದ ಭರವಸೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟಿದ್ದಾರೆ. ಜತೆಗೆ ಖಾತೆ ನೀಡುವುದಕ್ಕಿಂತ ಮಾತು ಉಳಿಸಿಕೊಳ್ಳುವುದು ಮುಖ್ಯ ಎಂದೂ ತಿಳಿಸಿದ್ದಾರೆ.

ಪರ್‍ಯಾಯದ ಭರವಸೆ:

ಅಂತಿಮವಾಗಿ ಖಾತೆ ಬದಲಾವಣೆ ವಿಚಾರವಾಗಿ ಹೈಕಮಾಂಡ್‌ ನಾಯಕರೊಂದಿಗೆ ಮಾತನಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ಸಾಧ್ಯವಾಗದಿದ್ದರೂ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಆದರೆ, ಯಾವುದೇ ಕಾರಣಕ್ಕೂ ರಾಜೀನಾಮ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಶನಿವಾರ ರಾಜೀನಾಮೆ ತಿರಸ್ಕರಿಸಿದ್ದಾರೆ.

ಎರಡು ಬಾರಿ ಸುರ್ಜೇವಾಲ ಸಭೆ:

ಶನಿವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರನ್ನು ಭೇಟಿಯಾಗಿದ್ದ ರಾಮಲಿಂಗಾರೆಡ್ಡಿ, ತಮ್ಮ ನೋವು ಮತ್ತು ಮುನಿಸಿಗೆ ಕಾರಣ ತಿಳಿಸಿದ್ದರು. ನಂತರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ರಾಮಲಿಂಗಾರೆಡ್ಡಿ ಅವರನ್ನು ಕರೆಸಿ ಮಾತನಾಡಿದ್ದರು. ಈ ಮಾತುಕತೆಯಲ್ಲೂ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ ಬಂದಿದ್ದರು.

ಅದಾದ ಬಳಿಕ ಮಧ್ಯಾಹ್ನ ಮತ್ತೊಮ್ಮೆ ರಾಮಲಿಂಗಾರೆಡ್ಡಿ ಅವರನ್ನು ಕರೆಸಿಕೊಂಡಿದ್ದ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು, ಖಾತೆ ವಿಚಾರವಾಗಿ ಚರ್ಚಿಸಿದ್ದರು. ಜಲಸಂಪನ್ಮೂಲ ಖಾತೆ ಜತೆಗೆ ಮತ್ತೊಂದು ಖಾತೆಯನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದಕ್ಕೂ ಒಪ್ಪಿಗೆಯಿಲ್ಲದಿದ್ದರೆ ಸಹಕಾರ ಇಲಾಖೆ ಮತ್ತು ಮುಜರಾಯಿ ಇಲಾಖೆಯನ್ನು ವಹಿಸಿಕೊಳ್ಳುವಂತೆಯೂ ತಿಳಿಸಿದ್ದರು.

ಅದಕ್ಕೆ ರಾಮಲಿಂಗಾರೆಡ್ಡಿ, ಆ ಕುರಿತು ಚಿಂತನೆ ನಡೆಸಿ ತಿಳಿಸುವುದಾಗಿ ಹೇಳಿದ್ದರು. ಅಂತಿಮವಾಗಿ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ಮನವಿ ಪುರಸ್ಕರಿಸಿರುವ ರಾಮಲಿಂಗಾರೆಡ್ಡಿ, ನನ್ನ ನೋವನ್ನು ನಾಯಕರುಗಳಿಗೆ ತಿಳಿಸಿದ್ದೇನೆ. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ. ಮುಂದಿನದ್ದು ಪಕ್ಷದ ನಿರ್ಧಾರ ಎಂದು ತಿಳಿಸಿದರು.

ಸಹಕಾರ-ಮುಜರಾಯಿ ಖಾತೆ?:

ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದರು. ಆದರೆ, ಹೈಕಮಾಂಡ್‌ ನಾಯಕರೇ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದಾರೆ. ಈಗ ಅವರ ಖಾತೆ ಬದಲಿಸಿದರೆ ಅದು ಮತ್ತೊಂದು ಪ್ರಹಸನಕ್ಕೆ ಕಾರಣವಾಗಬಹುದು.

ಮೂಲಗಳ ಪ್ರಕಾರ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಜತೆಗೆ ಮತ್ತೊಂದು ಖಾತೆ ಅಥವಾ ಸಹಕಾರ ಮತ್ತು ಮುಜರಾಯಿ ಇಲಾಖೆ ಪೈಕಿ ಒಂದು ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರ ಪ್ರಕಟಣೆ ಹೊರ ಬೀಳುವ ಸಾಧ್ಯತೆಯಿದೆ.

ರಾಮಲಿಂಗಾರೆಡ್ಡಿ ಹಿರಿಯ ನಾಯಕರು. ಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಮತ್ತು ನಾನು ಅವರೊಂದಿಗೆ ಮಾತನಾಡಿ ಮನವೊಲಿಸಿದ್ದೇವೆ. ರಾಜೀನಾಮೆ ಹಿಂಪಡೆದು ಪಕ್ಷ ಮತ್ತು ಸರ್ಕಾರದೊಂದಿಗೆ ಕೆಲಸ ಮಾಡುತ್ತಾರೆ. ಬಿಜೆಪಿ ನಾಯಕರು ಮಾತ್ರ ನಮ್ಮಲ್ಲಿ ಸಮಸ್ಯೆಯಿದೆ ಎಂದು ಬಿಂಬಿಸುತ್ತಿದ್ದು, ಅದರಲ್ಲಿ ಅವರು ವಿಫಲರಾಗಿದ್ದಾರೆ

- ರಣದೀಪ್‌ ಸಿಂಗ್‌ ಸುರ್ಜೇವಾಲಾ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ರಾಮಲಿಂಗಾರೆಡ್ಡಿ ಬೆಂಗಳೂರು ನಗರದ ಪಿಲ್ಲರ್‌ ಇದ್ದ ಹಾಗೆ. ಅವರು ಅಜಾತಶತ್ರು ಎಂದೆನಿಸಿಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಅಂಗೀಕರಿಸಬಾರದು. ಕೆಲವೊಂದು ಸಂದರ್ಭದಲ್ಲಿ ಹೀಗೆ ಆಗುತ್ತದೆ. ಸಮಸ್ಯೆ ಬಗೆಹರಿಯುತ್ತದೆ. ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಚರ್ಚಿಸಿ ಬಗೆಹರಿಸಲಾಗುವುದು.

ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ

ಸಮಸ್ಯೆ ಇತ್ಯರ್ಥ

ರಾಮಲಿಂಗಾರೆಡ್ಡಿ ನನ್ನ ಸ್ನೇಹಿತರು. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ. ಅವರ ರಾಜೀನಾಮೆ ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ. ಅವರು ವಾಟ್ಸಾಪ್‌ನಲ್ಲಿ ರಾಜೀನಾಮೆ ಕಳುಹಿಸಿದ್ದು ನಿಜ.

ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

ಕಾದು ನೋಡುವೆ

ನನ್ನ ಅಸಮಾಧಾನವನ್ನು ರಾಜ್ಯ, ಕೇಂದ್ರ ನಾಯಕರಿಗೆ ವಿವರಿಸಿದ್ದೇನೆ. ಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ನನ್ನೊಂದಿಗೆ ಮಾತನಾಡಿದ್ದಾರೆ. ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ.

ರಾಮಲಿಂಗಾರೆಡ್ಡಿ, ಸಚಿವ

3 ದಿನದ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಜಲಸಂಪನ್ಮೂಲ ಖಾತೆ ವಹಿಸಿಕೊಳ್ಳಲು ರಾಮಲಿಂಗಾ ರೆಡ್ಡಿ ನಕಾರ

ಇದಕ್ಕೆ ಪಕ್ಷದ ನಾಯಕರು ಒಪ್ಪದೇ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಘೋಷಣೆ

ಈ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಜೊತೆ ಸಿಎಂ ಡಿಕೆಶಿ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಸತತ ಸಂಧಾನ ಸಭೆ

ಈ ವೇಳೆ ಕೃಷ್ಣಬೈರೇಗೌಡ ಅವರಿಗೆ ಹುದ್ದೆ ನೀಡಲು ಕಾರಣವಾದ ಅಂಶಗಳ ಬಗ್ಗೆ ರೆಡ್ಡಿ ಅವರಿಗೆ ಮನವೊಲಿಕೆ ಯತ್ನ

ಜೊತೆಗೆ ಯಾವುದೇ ಕಾರಣಕ್ಕೂ ರಾಜೀನಾಮೆ ಸ್ವೀಕಾರ ಮಾಡಲ್ಲ ಎಂದು ಅದನ್ನು ತಿರಸ್ಕರಿಸಿದ ಮುಖ್ಯಮಂತ್ರಿ

ಜೊತೆಗೆ ಸಂಧಾನ ಮಾತುಕತೆ ವೇಳೆ ಜಲಸಂಪನ್ಮೂಲ ಜೊತೆಗೆ ಹೆಚ್ಚುವರಿ ಖಾತೆ ಭರವಸೆ ನೀಡಿದ ಸುರ್ಜೇವಾಲಾ

ಈ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ. ಹೈಕಮಾಂಡ್‌ನ ಮುಂದಿನ ನಿರ್ಧಾರಕ್ಕೆ ಕಾಯುವ ಘೋಷಣೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸೋದರಳಿಯ ಅಭಿಷೇಕ್‌ ಸರ್ವಾಧಿಕಾರಕ್ಕೆ ಮಮತಾ ಬ್ರೇಕ್‌
ಲಾಠಿ ಹಿಡಿದು ಲಾಲು ಮನೆಗೆ ಬೆಂಬಲಿಗರ ಕಾವಲು!