;Resize=(412,232))
(ಪುಟ1)
- ಅವಕಾಶ ಸಿಕ್ರೆ ಸಂಪುಟ ಪುನಾರಚನೆ ಚರ್ಚೆ
--
ಬೆಂಗಳೂರು : ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರವಾರ ಸಂಜೆ ತೆರಳಲಿದ್ದಾರೆ. ಆದರೆ ಈ ವೇಳೆ ಅವಕಾಶ ಸಿಕ್ಕರೆ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಅವರು ಹೈಕಮಾಂಡ್ ಜತೆ ಚರ್ಚಿಸುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಖರ್ಗೆ ಅವರು ಡಿ.27 ರಂದು ಶನಿವಾರ ದೆಹಲಿಯ ಇಂದಿರಾಭವನದಲ್ಲಿ ನಡೆಯಲಿರುವ ಸಿಡಬ್ಲ್ಯುಸಿ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ಖರ್ಗೆ ಸೇರಿ ಐದು ಮಂದಿ ರಾಜ್ಯದಿಂದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಮೊದಲು, ‘ಸಿಡಬ್ಲ್ಯುಸಿ ಸಭೆಗೆ ನನಗೆ ಆಹ್ವಾನವಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಸಿಡಬ್ಲುಸಿ ಸದಸ್ಯರಲ್ಲದಿದ್ದರೂ ಸಿದ್ದರಾಮಯ್ಯ, ತೆಲಂಗಾಣದ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಸೇರಿ ಮೂವರು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ 7 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ.
ಶನಿವಾರ ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಭಾಗವಹಿಸಲಿದ್ದು, ಅವಕಾಶ ದೊರೆತರೆ ರಾಹುಲ್‌ಗಾಂಧಿ ಅವರೊಂದಿಗೆ ಸಚಿವ ಸಂಪುಟ ಪುನರ್ ರಚನೆ ಕುರಿತು ಸಿದ್ದರಾಮಯ್ಯ ಚರ್ಚಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸಿಡಬ್ಲುಸಿ ಸಭೆ ಬಳಿಕ ವಿವಿಧ ಕೇಂದ್ರ ಸಚಿವರ ಜತೆ ಭೇಟಿ ನಿಗದಿಯಾಗಿದ್ದು, ಸಂಜೆ 4.30 ಗಂಟೆಗೆ ಬೆಂಗಳೂರು ಕಡೆಗೆ ವಾಪಸಾಗಲಿದ್ದಾರೆ.
ಉಳಿದಂತೆ ರಾಜ್ಯದಿಂದ ಸಿಡಬ್ಲುಸಿ ಸದಸ್ಯರಾದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಶ್ವತ ಆಹ್ವಾನಿತರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾನು ಬರೀ ಭಾಷಣ ಮಾಡಿಲ್ಲ, ಪಕ್ಷದ ಎಲ್ಲ ಕೆಲಸ ಮಾಡಿದ್ದೇನೆ
‘ನಾನು ಜೀವನಪೂರ್ತಿ ಕಾಂಗ್ರೆಸ್ ಕಾರ್ಯಕರ್ತ. ನಾನು ಪಕ್ಷದ ಕೆಲಸಗಾರ. ನಾನು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಕೆಲಸವನ್ನೂ ಮಾಡಿದ್ದೇನೆ. ಕಾರ್ಯಕರ್ತನಾಗಿ, ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿಕೊಂಡು ಹೋಗಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅವರ ಗೂಢಾರ್ಥದ ನುಡಿ, ಪಕ್ಷದಲ್ಲಿನ ಅವರ ರಾಜಕೀಯ ಎದುರಾಳಿಗಳನ್ನು ಉದ್ದೇಶಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ.