ಜಿಬಿಎ ಚುನಾವಣೆ ಮುಂದೂಡಲು ಸುಪ್ರೀಂಗೆ ರಾಜ್ಯ ಸರ್ಕಾರ ಮನವಿ

Published : Jul 11, 2026, 09:14 AM IST
DK Shivakumar

ಸಾರಾಂಶ

ರಾಜ್ಯದಲ್ಲಿ ಎಸ್ಐಆರ್ ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅದೇ ಸಿಬ್ಬಂದಿ ಜಿಬಿಎ ಚುನಾವಣೆಗೂ ಪಾಲ್ಗೊಳ್ಳಬೇಕಾಗಿರುವುದರಿಂದ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆ ಡಿಸೆಂಬರ್ ಒಳಗೆ ನಡೆಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಕಳೆದ ಮೇನಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ ಜಿಬಿಎ ಚುನಾವಣೆ ಮುಂದೂಡಲು ಅವಕಾಶ ಕೋರಿತ್ತು.  

ಆ ವೇಳೆ ಅರ್ಜಿ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಆ.31ರ ಒಳಗೆ ಚುನಾವಣೆ ನಡೆಸಬೇಕು. ಮತ್ತೆ ಮುಂದೂಡಿಕೆ ಕೇಳದಂತೆ ತಿಳಿಸಿತ್ತು. ಆದರೆ, ರಾಜ್ಯದಲ್ಲಿ ಎಸ್ಐಆರ್ ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅದೇ ಸಿಬ್ಬಂದಿ ಚುನಾವಣೆಗೂ ಪಾಲ್ಗೊಳ್ಳಬೇಕಾಗಿರುವುದರಿಂದ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಸುಪ್ರೀಂಕೋರ್ಟ್ ಇನ್ನೂ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿಲ್ಲ. ಅರ್ಜಿ ವಿಚಾರಣೆಗೆ ಅಂಗೀಕರಿಸಿದರೆ ಮಾತ್ರ ವಾದ ಆಲಿಸುವ ಕುರಿತು ನ್ಯಾಯಾಲಯ ದಿನಾಂಕ ನಿಗದಿ ಮಾಡಲಿದೆ. ಸರ್ಕಾರ ಜಿಬಿಎ ವ್ಯಾಪ್ತಿಯ ಒಟ್ಟು 269 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 196 ವಾರ್ಡ್ ಗಳಿಂದ ಹೆಚ್ಚುವರಿಯಾಗಿ 73 ವಾರ್ಡ್‌ಗಳು ಸೇರ್ಪಡೆಯಾಗಿವೆ. ಬಿಬಿಎಂಪಿಗೆ 2015ರ ಆಗಸ್ಟ್‌ನಲ್ಲಿ 196 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಈ ನಗರಪಾಲಿಕೆ ಸದಸ್ಯರ ಅವಧಿ 2020ರಲ್ಲಿ ಮುಕ್ತಾಯಗೊಂಡಿದೆ.

 ಜಿಬಿಎ ಚುನಾವಣೆಗೆ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ತೆರಳಿ ಆಗಸ್ಟ್‌ವರೆಗೆ ಕಾಲಾವಕಾಶ ಕೋರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ.

ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

 ಜಿಬಿಎ ಎಲೆಕ್ಷನ್‌ ವಿಚಾರದಲ್ಲಿ ಕಾಂಗ್ರೆಸ್‌ ಸುಪ್ರೀಂ ಆದೇಶ ಗೌರವಿಸಲಿ: ಛಲವಾದಿ

 ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್‌ ಆದೇಶವನ್ನು ಗೌರವಿಸಬೇಕು ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಕಾಲದಿಂದ ಬೆಂಗಳೂರಿನ ಪ್ರಜೆಗಳು ಚುನಾವಣೆಗೆ ಕಾತುರರಾಗಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರಕ್ಕೆ ಹಲವು ಕಂಟಕಗಳಿವೆ. ಅಭಿವೃದ್ಧಿ ಶೂನ್ಯತೆ, ಮಳೆ ಬಂದರೆ ದೋಣಿಗಳಲ್ಲಿ ಓಡಾಡುವ ಸ್ಥಿತಿ, ಗುಂಡಿ ರಸ್ತೆಗಳು, ಭ್ರಷ್ಟಾಚಾರ, ಕಸ ಹೀಗೆ ಅನೇಕ ವಿಚಾರಗಳು ಅವರನ್ನು ಕಾಡುತ್ತಿವೆ ಎಂದು ಟೀಕಿಸಿದರು.

ಸೋಲಿನ ಭೀತಿಯಿಂದ ಬಿಬಿಎಂಪಿಯನ್ನು 5 ಭಾಗ ಮಾಡಿದೆ. ಈಗ ಚುನಾವಣೆಗೆ ಹೋದರೆ ಒಂದನ್ನೂ ಗೆಲ್ಲುವುದು ಕಷ್ಟ ಅನಿಸಿದೆ. ಹೀಗಾಗಿ ಎಸ್ಐಆರ್‌ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

3 ವರ್ಷ ನಿದ್ದೆ ಮಾಡಿದ್ರಾ?

ಬೆಂಗಳೂರಿನ ಅಭಿವೃದ್ಧಿ ಚರ್ಚೆ ವಿಷಯ ಅಲ್ಲ, ಅದು ಕೆಲಸ ಮಾಡಿ ತೋರಿಸಬೇಕಾದ ವಿಷಯ. 3 ವರ್ಷ ಇವರು ನಿದ್ರೆ ಮಾಡುತ್ತಿದ್ದರೇ? ಬೆಂಗಳೂರಿನ ಸಚಿವರಾಗಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಇದ್ದರೇ? ಈಗಿನ ಮುಖ್ಯಮಂತ್ರಿಗಳೇ ಇದ್ದರಲ್ಲವೇ? ಆಗ ನಿಮಗೆ ಬೆಂಗಳೂರು ಕಾಣಲಿಲ್ಲವೇ? ಈ ರೀತಿ ನಾಟಕ ಮಾಡುವುದನ್ನು ಬದಿಗಿಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗುಂಡಿ ಮುಚ್ಚಲು ಲಕ್ಷಾಂತರ ರು. ಖರ್ಚು:

ನಗರದಲ್ಲಿ ಮಳೆ ದುಬಾರಿ ಆಗುವ ಪರಿಸ್ಥಿತಿ ಇದೆ. ಒಂದು ವೇಳೆ ಮಳೆ ಬಂದರೆ ದೋಣಿ ಕೊಡಿಸಬೇಕಾದೀತು. ಅದು ದುಬಾರಿ ಆಗಲಿದೆ. ಎಲ್ಲೆಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲವೋ, ಕಸದ ತ್ಯಾಜ್ಯ ಇದೆಯೋ ಅದನ್ನು ತೆರವುಗೊಳಿಸಬೇಕು. ಈ ಹಿಂದೆ ಮೂರ್ನಾಲ್ಕು ಸಾವಿರಕ್ಕೆ ಗುಂಡಿ ಮುಚ್ಚುತ್ತಿದ್ದರು. ಕಳೆದ ಬಾರಿ ಒಂದೊಂದು ಗುಂಡಿ ಮುಚ್ಚಲು ಲಕ್ಷಾಂತರ ರು. ಖರ್ಚು ಮಾಡಿದ್ದಾರೆ. ಇದು ಅತಿ ಹೆಚ್ಚು ಪ್ರಮಾಣದ ಭ್ರಷ್ಟಾಚಾರ ಎಂದು ಜನರೇ ಮಾತನಾಡುತ್ತಿದ್ದರು. ಒಂದು ಗುಂಡಿ ಮುಚ್ಚಲು ಇಷ್ಟೊಂದು ಖರ್ಚು ಏಕಾಗಿದೆ ಎಂದು ತನಿಖೆ ಮಾಡಿಸಬೇಕು ಎಂದು ಛಲವಾದಿ ಒತ್ತಾಯಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಾಜಿ ಸಚಿವ ಜಮೀರ್‌ಗೆ ಪ್ರಾಸಿಕ್ಯೂಷನ್‌ ಸಂಕಷ್ಟ
ಶಾಶ್ವತ ನಿವಾಸಿ ಪತ್ರಕ್ಕೆ ಬಿಜೆಪಿಯಿಂದ ವಿರೋಧ