ಚಿಕ್ಕಬಳ್ಳಾಪುರ : ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟಕ್ಕೆ(ಕೋಚಿಮುಲ್) ಈ ಕೂಡಲೇ ಚುನಾವಣೆ ನಡೆಸಬೇಕು. ಆಗದಿದ್ದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಖಾದಿ ಮಂಡಳಿ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಈಗಿರುವ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ತೊಡಗಿದ್ದು ಹಾಲು ಉತ್ಪಾದಕರ ಹಿತ ಕಾಯುವುದನ್ನೇ ಮರೆತಿದೆ ಎಂದರು.
ಆಡಳಿತ ಮಂಡಳಿ ವಜಾ ಮಾಡಿ
ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಲ್ಲಿ ಕೋಚಿಮುಲ್ ನೇಮಕಾತಿ ಮಂಡಳಿ, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಿ ವರದಿಯನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಆದ್ದರಿಂದ ಭ್ರಷ್ಟಾಚಾರದಿಂದ ಕೂಡಿರುವ ಈಗಿನ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಎಂದರು.
ನೇಮಕಾತಿ ಅವ್ಯವಹಾರದಲ್ಲಿ ಅಧ್ಯಕ್ಷ ಕೆ.ವೈ ನಂಜೇಗೌಡ ಸೇರಿದಂತೆ ಇಡೀ ಆಡಳಿತ ಮಂಡಳಿ, ನಿರ್ದೇಶಕರು ಭಾಗಿಯಾಗಿರುವ ಬಗ್ಗೆ ರಾಜ್ಯಪಾಲರಿಗೆ ನೀಡಿರುವ ಇಡಿ ವರದಿ ಬಹಿರಂಗಗೊಳಿಸಿರುವ ಕಾರಣ ಕೋಚಿಮುಲ್ ಘನತೆ ಹಾಳಾಗಿದೆ. ಕೋಚಿಮುಲ್ ಆಡಳಿತಾವಧಿ 12 ಮೇ 2024ಕ್ಕೆ ಕೊನೆಗೊಂಡಿದ್ದರೂ ಈವರೆಗೆ ಚುನಾವಣೆ ನಡೆಸಿಲ್ಲ. ಆದ್ದರಿಂದ ಕೂಡಲೇ ಚುನಾವಣೆ ನಡೆಸುವಂತೆ ಸಹಕಾರಿ ಸಚಿವ ರಾಜಣ್ಣ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಡೆಲಿಗೇಟರ್ ಪರಿಗಣಿಸಿ
ಈಗಾಗಲೇ ಕೋಚಿಮುಲ್ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಸಂಘಗಳಲ್ಲಿ ಆಡಳಿತ ಮಂಡಳಿ ಸಭೆಗಳನ್ನು ನಡೆಸಿ ತಮ್ಮ ಸಂಘಗಳಿಂದ ಡೆಲಿಗೇಟರ್‌ಗಳನ್ನು ಈಗಾಗಲೇ ನೇಮಿಸಿಯಾಗಿದೆ. ಅದರಂತೆ ಕೋಲಾರ ಜಿಲ್ಲೆಯಿಂದ 782 ಚಿಕ್ಕಬಳ್ಳಾಪುರ ಜಿಲ್ಲಾ ವತಿಯಿಂದ 799 ಡೆಲಿಗೇಟರ್‌ಗಳನ್ನು ನೀಡಲಾಗಿದೆ. ಇವುಗಳನ್ನೇ ಪರಿಗಣಿಸಿ ಚುನಾವಣೆಯನ್ನು ಜರೂರಾಗಿ ಮಾಡಬೇಕು. ಇಲ್ಲದಿದ್ದರೆ ಇನ್ನಷ್ಟು ಭ್ರಷ್ಟಾಚಾರಕ್ಕೆ ಸರ್ಕಾರವೇ ಅವಕಾಶ ನೀಡಿದಂತಾಗುತ್ತದೆ ಎಂದು ನಾಗರಾಜ್ ಬೇಳಿದರು.ಸರ್ಕಾರದ ವಿರುದ್ಧ ಹೋರಾಟ
ಜೆಡಿಎಸ್ ಜಿಲ್ಲಾಧ್ಯಕ್ಷ ಮುನಿಯಪ್ಪ ಮಾತನಾಡಿ, ಈಗಿರುವ ಆಡಳಿತ ಮಂಡಳಿ ಅವಧಿ ಮುಗಿದಿದ್ದರೂ ನಿಯಮಬಾಹಿರವಾಗಿ ಬೇಕಾದ ತೀರ್ಮಾನಗಳನ್ನು ತೆಗೆದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ವಜಾಗೊಳಿಸಿ ಕೋಚಿಮುಲ್ ನೂತನ ಆಡಳಿತ ಮಂಡಳಿಗೆ ಈ ಕೂಡಲೇ ಚುನಾವಣೆ ನಡೆಸದಿದ್ದರೆ ಸಹಕಾರಿ ಸಚಿವ ರಾಜಣ್ಣ ಮತ್ತು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷರಾದ ಅಶ್ವತ್ಥಪ್ಪ, ರಮೇಶ್,ಪ್ರಭಾಕರ್‌ರೆಡ್ಡಿ,ಮಾಜಿ ನಿರ್ದೇಶಕರಾದ ಬಂಕ್ ಮುನಿಯಪ್ಪ, ಗೋಪಾಲಕೃಷ್ಣ, ಗಿಡ್ನಹಳ್ಳಿ ನಾರಾಯಣಸ್ವಾಮಿ,ಕೊಳವನಹಳ್ಳಿ ದ್ಯಾವಪ್ಪ,ಸುನಂದಮ್ಮ ಮತ್ತಿತರರು ಇದ್ದರು.