;Resize=(412,232))
ಬೆಂಗಳೂರು : ಉತ್ಸಾಹದ ಚಿಲುಮೆಯಾಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್ ಅವರು ಪುದುಚೇರಿಗೆ ಸೈಕ್ಲಿಂಗ್ ಪ್ರವಾಸ ಕೈಗೊಂಡಿದ್ದಾರೆ.
‘ರಾಜಾಜಿನಗರ ಪೆಡಲ್ ಪವರ್’ ತಂಡದ ಸದಸ್ಯರಾದ ಎಸ್.ಸುರೇಶ್ ಕುಮಾರ್, ದಿವಾಕರ್, ಬಾಲಕೃಷ್ಣ ಹಾಗೂ ಡಾ.ಸುಹಾಸ್ ಅವರು ಶುಕ್ರವಾರ ಮುಂಜಾನೆ 4 ಗಂಟೆಗೆ ಬೆಂಗಳೂರಿನ ಬಸವೇಶ್ವರನಗರದಿಂದ ಹೊರಟು 18 ಗಂಟೆ 30 ನಿಮಿಷ ಸೈಕಲ್ ತುಳಿದು 330 ಕಿ.ಮೀ. ಕ್ರಮಿಸಿ ಪುದುಚೇರಿ ತಲುಪಿದ್ದಾರೆ.
ಈ ಸೈಕ್ಲಿಂಗ್ ಪ್ರವಾಸದ ಬಗ್ಗೆ ಶಾಸಕ ಎಸ್.ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಸೈಕ್ಲಿಂಗ್ ತಂಡ ಮೊದಲ ಬಾರಿಗೆ 2014ರ ಜನವರಿಯಲ್ಲಿ ಪುದುಚೇರಿಗೆ ಸೈಕ್ಲಿಂಗ್ ಪ್ರವಾಸ ಕೈಗೊಂಡಿತ್ತು. ಈ ಬಾರಿಯ ವಿಶೇಷವೆಂದರೆ, ಬೆಂಗಳೂರಿನಿಂದ ಪುದುಚೇರಿಯವರೆಗೂ ಕನಿಷ್ಠ ಐದು ಕಡೆ ವಿವಿಧ ಭಾಗಗಳಲ್ಲಿ ಸ್ಥಳೀಯ ನಾಗರಿಕರು ಹಾಗೂ ಪ್ರಮುಖರೊಂದಿಗೆ ಸಂವಾದ ನಡೆಸಲಾಯಿತು. ಈ ಸೈಕ್ಲಿಂಗ್ ಪ್ರಯಾಣಕ್ಕೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಎಸ್.ಸುರೇಶ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.