ಚೆನ್ನೈ/ಕೋಲ್ಕತಾ: ಮೋದಿ ಸರ್ಕಾರ ಜಾರಿಗೆ ತಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂಯೇತರರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ವಿರೋಧಿಸಿದ್ದಾರೆ. ಈ ಕಾನೂನನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರಲು ಬಿಡಲ್ಲ ಎಂದು ಉಭಯ ಸಿಎಂಗಳು ಹೇಳಿದ್ದಾರೆ.
ಸಿಎಎಗೆ ಅರ್ಜಿ ಸಲ್ಲಿಸುವವರು ತಾವು ಭಾರತದಲ್ಲಿ ಇರುವ ಬಗ್ಗೆ ತಾವಿರುವ ಊರಿನ ಅಧಿಕಾರಿಗಳಿಗೆ ತಮ್ಮ ವಾಸ ಪ್ರಮಾಣಪತ್ರಕ್ಕೆ ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಈ ಪ್ರಮಾಣಪತ್ರ ನೀಡಿಕೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳ ಪಾತ್ರವೂ ಇರುತ್ತದೆ. ಆದ್ದರಿಂದ ಈ 3 ರಾಜ್ಯಗಳ ಸಿಎಂಗಳ ಹೇಳಿಕೆಗೆ ಮಹತ್ವ ಬಂದಿದೆ.
ಸಿಎಎ ಸಮಾನತೆ ವಿರೋಧಿ- ಮಮತಾ:ಮಂಗಳವಾರ ಪ.ಬಂಗಾಳದ ಬರಸಾತ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಸಿಎಎ ಜಾರಿಯು ಸಮಾನತೆಯನ್ನು ಉಲ್ಲಂಘಿಸುವ ಕಾರಣದಿಂದ ಅಸಾಂವಿಧಾನಿಕ ಕ್ರಮವಾಗಿದೆ. ಬಂಗಾಳದಲ್ಲಿ ಇದರ ಜಾರಿಗೆ ನಾನು ಅವಕಾಶ ನೀಡಲ್ಲ’ ಎಂದಿದ್ದಾರೆ.