ಕಾಂಗ್ರೆಸ್ಸಲ್ಲಿ ದಾವಣಗೆರೆ ಮುಸ್ಲಿಂ ಕಿಚ್ಚು ಧಗಧಗ

Published : Apr 21, 2026, 06:16 AM IST
Davanagere Bypoll Controversy

ಸಾರಾಂಶ

‘ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ್‌ ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸು ಸಹಾಯ ಮಾಡಿದ್ದಕ್ಕೆ ದಾಖಲೆಗಳಿವೆ. ಈ ದಾಖಲೆಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿ ನಂತರ ಬಹಿರಂಗಪಡಿಸುತ್ತೇವೆ’ ಎಂದು ಕಾಂಗ್ರೆಸ್ ಮುಸ್ಲಿಂ ಪದಾಧಿಕಾರಿಗಳು ಘೋಷಿಸಿದ್ದಾರೆ.

  ಬೆಂಗಳೂರು :  ‘ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ್‌ ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸು ಸಹಾಯ ಮಾಡಿದ್ದಕ್ಕೆ ದಾಖಲೆಗಳಿವೆ. ಈ ದಾಖಲೆಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿ ನಂತರ ಬಹಿರಂಗಪಡಿಸುತ್ತೇವೆ’ ಎಂದು ಕಾಂಗ್ರೆಸ್ ಮುಸ್ಲಿಂ ಪದಾಧಿಕಾರಿಗಳು ಘೋಷಿಸಿದ್ದಾರೆ.

ಜತೆಗೆ, ‘ಜಬ್ಬಾರ್ ಅವರು ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಉಪಾಧ್ಯಕ್ಷರಾದ ಎ.ಆರ್.ಎಂ.ಹುಸೇನ್, ಉಬೇದುಲ್ಲಾ ಷರೀಫ್‌, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯೀದ್‌ ಅಹ್ಮದ್‌, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೋಜ್‌ ಖಾನ್‌ ಸೇರಿ ಹಲವು ಅಲ್ಪಸಂಖ್ಯಾತ ನಾಯಕರು ಸುದ್ದಿಗೋಷ್ಠಿಯಲ್ಲಿ ನಡೆಸಿ ಈ ಆಗ್ರಹ ಮಾಡಿದ್ದಾರೆ.

ಇದಕ್ಕೂ ಮುನ್ನ ಸಭೆ ನಡೆಸಿದ ಅವರು, ದಾವಣಗೆರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅಬ್ದುಲ್‌ ಜಬ್ಬಾರ್‌ ಹಾಗೂ ನಸೀರ್‌ ಅಹ್ಮದ್‌ ವಿರುದ್ಧ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸಿ ನಿರ್ಣಯ ತೆಗೆದುಕೊಂಡರು.

ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಯಕರು, ಅಬ್ದುಲ್‌ ಜಬ್ಬಾರ್‌ ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸು ಸಹಾಯ ಮಾಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಅಧ್ಯಕ್ಷರಿಗೆ ತಲುಪಿಸಿ ಬಹಿರಂಗ ಮಾಡುತ್ತೇವೆ. ಹೀಗಾಗಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಆರ್‌.ಎಂ.ಹುಸೇನ್, ನಾನೂ ಸೇರಿ ಒಟ್ಟು 6 ಮಂದಿ ಅಲ್ಪಸಂಖ್ಯಾತ ನಾಯಕರು ದಾವಣಗೆರೆ ದಕ್ಷಿಣ ಟಿಕೆಟ್ ಆಕಾಂಕ್ಷಿಯಾಗಿದ್ದೆವು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಬ್ದುಲ್‌ ಜಬ್ಬಾರ್‌ ಹೆಸರು ಬಿಟ್ಟು ಬೇರೆಯವರ ಹೆಸರು ಚರ್ಚೆಯೇ ಆಗಲಿಲ್ಲ. ಹೀಗಾಗಿ ಮುಸ್ಲಿಮರಿಗೆ ಅವಕಾಶ ತಪ್ಪಿತು. ಸಮರ್ಥ್‌ ಅವರಿಗೆ ಟಿಕೆಟ್‌ ದೊರೆತ ಬಳಿಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸ್ಥಳೀಯ ಮಟ್ಟದಲ್ಲಿ ನಿಂತು ಕೆಲಸ ಮಾಡಿದ್ದಾರೆ. ಆದರೆ, ಜಬ್ಬಾರ್ ತಮ್ಮ ಮನೆಯಿಂದ ಹೊರಗೆ ಬಂದಿಲ್ಲ ಎಂದು ಕಿಡಿಕಾರಿದರು.

ಜಬ್ಬಾರ್‌ ಸಿಎಂ, ಡಿಸಿಎಂಗಿಂತ ದೊಡ್ಡವರೇ?:

ಜಬ್ಬಾರ್‌ ಅವರು ಸುರ್ಜೇವಾಲಾ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗಿಂತ ದೊಡ್ಡವರೇ? ಅವರು ಪಕ್ಷದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸು ಸಹಾಯ ಮಾಡಿದ್ದಾರೆ. ಇಂತಹವರ ಮನೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೋಗಬೇಕಿತ್ತು ಎನ್ನುತ್ತಾರೆ. ಇವರ ವಿರುದ್ಧದ ಕ್ರಮವನ್ನು ನಾವೆಲ್ಲಾ ಸ್ವಾಗತಿಸುತ್ತೇವೆ. ಜತೆಗೆ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ ರೀತಿ ಪರಿಷತ್‌ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಶಿಸ್ತು ಕ್ರಮ ಸಮಾಜಕ್ಕೆ ಆದ ಅನ್ಯಾಯವಲ್ಲ:

ಕೆಪಿಸಿಸಿ ಉಪಾಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ಅಬ್ದುಲ್‌ ಜಬ್ಬಾರ್‌ ಹಾಗೂ ನಸೀರ್‌ ಅಹ್ಮದ್‌ ಮೇಲೆ ಆದ ಶಿಸ್ತು ಕ್ರಮ ಸಮಾಜಕ್ಕೆ ಆದ ಅನ್ಯಾಯವಲ್ಲ. ನಸೀರ್ ಅಹ್ಮದ್‌ ಅವರಿಗೆ ಪಕ್ಷ ಐದು ಬಾರಿ ಟಿಕೆಟ್‌ ಕೊಟ್ಟಿದೆ. ಆದರೂ ಅವರು ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸಿಲ್ಲ. ಹೀಗಾಗಿಯೇ ಅವರನ್ನು ತೆಗೆದಿದ್ದಾರೆ. ಇದರಲ್ಲಿ ಧರ್ಮಗುರುಗಳನ್ನು ಸೇರಿಸಿ ಅನ್ಯಾಯವಾಗಿದೆ ಎಂದರೆ ಹೇಗೆ? ಗೋವಿಂದರಾಜು ಅವರನ್ನು ಹುದ್ದೆಯಿಂದ ತೆಗೆದಾಗ ಯಾಕೆ ಯಾವ ಗುರುಗಳೂ ಬಂದು ಕೇಳಲಿಲ್ಲ? ಎಂದು ಪ್ರಶ್ನಿಸಿದರು.

ಇವರು ಮಾತ್ರವಲ್ಲ ಕೆಲ ನಾಯಕರ ಬೆಂಬಲಿಗರು, ಪದಾಧಿಕಾರಿಗಳು ಸಹ ದಾವಣಗೆರೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ. ಅವರ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಅವಮಾನ ಹೇಗೆ ಆಗುತ್ತದೆ?:

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯೀದ್ ಅಹ್ಮದ್‌ ಮಾತನಾಡಿ, ಒಂದು ಕ್ಷೇತ್ರದ‌ ಟಿಕೆಟ್ ಒಬ್ಬರಿಗೆ ಸಿಕ್ಕಿಲ್ಲ ಎಂದರೆ ಇಡೀ ಸಮುದಾಯಕ್ಕೆ ಅವಮಾನ ಹೇಗೆ ಆಗುತ್ತದೆ? ಲಿಂಗಾಯತರು ಎಷ್ಟೋ ಕಡೆ ಟಿಕೆಟ್ ಕೇಳಿದ್ದರೂ ನೀಡಿಲ್ಲ. ಹಾಗಾದರೆ ಇಡೀ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಅವಮಾನ ಮಾಡಿದಂತೆಯೇ ಎಂದು ಪ್ರಶ್ನಿಸಿದರು.

ಹೈಕಮಾಂಡ್ ಬಳಿ ಎಲ್ಲಾ ರೀತಿಯ ವ್ಯವಸ್ಥೆ ಇರುತ್ತದೆ. ಪಕ್ಷದ ಆಂತರಿಕ ಸಮೀಕ್ಷೆ, ಪೊಲೀಸ್ ರಿಪೋರ್ಟ್‌, ಇಂಟೆಲಿಜೆನ್ಸ್‌ ವರದಿ ಎಲ್ಲವನ್ನೂ ಪರಿಗಣಿಸಿ ನಿರ್ಧಾರ ಮಾಡಿರುತ್ತಾರೆ. ಒಬ್ಬ ವ್ಯಕ್ತಿಗೆ ಟಿಕೆಟ್‌ ಸಿಕ್ಕಿಲ್ಲ ಎಂದು ಒಂದು ಸಮಾಜವನ್ನು ಬೇರೆ ಸಮಾಜದ ವಿರುದ್ಧ ನಿಲ್ಲಿಸಿದರೆ ಹೇಗೆ? ಮುಂದೆ ಏನು ಮಾಡಲು ಹೊರಟಿದ್ದೆವು? ಇವರಿಗೆ ತಲೆ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೋಜ್‌ ಖಾನ್‌ ಮಾತನಾಡಿ, ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯಕ್ಕೆ ಸ್ಥಾನ ಮಾನ ಅಧಿಕಾರ ಕೊಟ್ಟಿದೆ. ಅಲ್ಪಸಂಖ್ಯಾತ ಇಲಾಖೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ 5000 ಕೋಟಿ ರು. ನೀಡಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂಬ ಆರೋಪವನ್ನು ಖಂಡಿಸುತ್ತೇವೆ ಎಂದರು.

ಜಬ್ಬಾರ್‌ ಸೋತರೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು: ಸಯೀದ್‌

ಪರೋಕ್ಷವಾಗಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ದೂರಿದ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷ ಸಯೀದ್ ಅಹ್ಮದ್, ‘ಅಬ್ದುಲ್‌ ಜಬ್ಬಾರ್‌ ಅವರಿಗೆ ಟಿಕೆಟ್‌ ಕೇಳುವಾಗ ಸುರ್ಜೇವಾಲಾ ಅವರ ಬಳಿ ನಮ್ಮವರೇ, ‘ಅವರಿಗೆ ಟಿಕೆಟ್‌ ಕೊಡಿ. ಅವರು ಸೋತರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದರು.

ಅದಕ್ಕೆ ಸುರ್ಜೇವಾಲಾ ಅವರು, ‘ನಾನು ರಾಜೀನಾಮೆ ಪಡೆಯಲು ಬಂದಿಲ್ಲ. ನಿಮ್ಮ ಸಂದೇಶ ಹೈಕಮಾಂಡ್‌ಗೆ ತಲುಪಿಸುತ್ತೇನೆ ಎಂದಷ್ಟೇ ಹೇಳಿದ್ದರು’ ಎಂದು ಸಯೀದ್‌ ಅಹ್ಮದ್‌ ಹೇಳಿದರು.

ಯಾರು ಪಕ್ಷ ಬಿಟ್ಟರೂ ಏನೂ ಆಗಲ್ಲ: ಜಮೀರ್‌ ವಿರುದ್ಧ ನಾಯಕರ ಕಿಡಿ 

ಸಚಿವ ಜಮೀರ್‌ ಅಹ್ಮದ್‌ಖಾನ್‌ ಅವರು ಜೆಡಿಎಸ್‌ಗೆ ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಬೇದುಲ್ಲಾ ಷರೀಫ್‌, ‘ಯಾರು ಪಕ್ಷದಿಂದ ಹೊರ ಹೋದರೂ ಏನೂ ಆಗಲ್ಲ. ಸಿ.ಎಂ. ಇಬ್ರಾಹಿಂ, ಜಾಫರ್ ಷರೀಫ್‌ ಅವರು ಇದೇ ರೀತಿ ಪಕ್ಷ ಬಿಟ್ಟು ಹೋದರು. ಏನಾಯ್ತು? ಏನೂ ಆಗಲಿಲ್ಲ, ಪಕ್ಷದ ಮೇಲೆ ಎಲ್ಲರೂ ನಿಂತಿದ್ದಾರೆ. ಯಾರಾದರೂ ಪಕ್ಷ ಬಿಟ್ಟು ಹೋದರೆ ಹೊಸ ನಾಯಕತ್ವ ಬರುತ್ತದೆ’ ಎಂದರು.

ಎ.ಆರ್.ಎಂ.ಹುಸೇನ್ ಮಾತನಾಡಿ, ‘ನಾನು ನಾಯಕ, ನಾನು ನಾಯಕ ಎಂಬುದು ಸಚಿವರಿಗೆ ಕಾಂಗ್ರೆಸ್‌ನಿಂದ ಸಿಕ್ಕಿರುವ ಬಳುವಳಿ. ಕಾಂಗ್ರೆಸ್ ಕಾರಣದಿಂದಲೇ ಸಂಪನ್ಮೂಲ ಕ್ರೋಢೀಕರಣ ಮಾಡಿ ಮೆರೆಯುತ್ತಿದ್ದಾರೆ. ಯಾರೇ ಆಗಲಿ ಪಕ್ಷ ಶಿಸ್ತು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್‌ ಖಾನ್‌ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ತಮಿಳುನಾಡಿನ ಥಳಿ, ಉತ್ತಂಗರೈ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‌ ಬಿರುಸಿನ ಪ್ರಚಾರ
ಬಂಗಾಳದಲ್ಲಿ ದೀದಿ-ಬಿಜೆಪಿ ಜಿದ್ದಾಜಿದ್ದಿ!