ಬೆಂಗಳೂರು : ರಾಜಧಾನಿಯ ಹೆಸರಘಟ್ಟದಲ್ಲಿ ದೇಶದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣವಾಗುತ್ತಿದ್ದು, ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಕೇಂದ್ರವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಶುಕ್ರವಾರ ನಗರದ ಸೈನ್ಸ್ ಗ್ಯಾಲರಿಯಲ್ಲಿ ‘ಕ್ವಾಂಟಮ್’ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ನಮ್ಮ ಬದ್ಧತೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ‘ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ’ ಅಡಿ, ಧಾರವಾಡದ ಐಐಐಟಿಯಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತದೆ. ಈ ಕ್ಷೇತ್ರದಲ್ಲಿ ನಮ್ಮ ಯುವಕರು ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿ ಎಂದ ಅವರು, ಈ ‘ಕ್ವಾಂಟಮ್’ ಪ್ರದರ್ಶನವನ್ನು ಎಲ್ಲರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.


ಕಾನ್ಸುಲೇಟ್‌ ಬೇಕು:

ಭಾರತ-ಅಮರಿಕ ನಡುವೆ ಐಟಿ ಮತ್ತಿತರ ವಲಯಗಳಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು

ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ ಎಂದರು.

ನಾವು ಕೇವಲ ವ್ಯಾಪಾರ ಕಚೇರಿಯನ್ನು ಕೇಳುತ್ತಿಲ್ಲ. ಶಾಶ್ವತ ರಾಜತಾಂತ್ರಿಕ ಕಚೇರಿ ಇಲ್ಲಿ ಸ್ಥಾಪನೆಯಾಗಬೇಕು. ಇದರಿಂದ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಣೆ ಸಾಧ್ಯವಾಗಲಿದೆ. ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅಮೆರಿಕದ ರಾಯಭಾರ ಕಚೇರಿ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಹೇಳಿದರು.

ಅಮೆರಿಕದ ಪ್ರಮುಖ ಶೈಕ್ಷಣಿಕ ಹಾಗೂ ನಾವೀನ್ಯತಾ ಕೇಂದ್ರಗಳೊಂದಿಗೆ ತರಬೇತಿ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ನೆರವನ್ನು ಮುಖ್ಯಮಂತ್ರಿ ಕೋರಿದರು.

ಅಮೆರಿಕದ ಭಾರತ ರಾಯಭಾರಿ ಸರ್ಜಿಯೋ ಗೋರ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಉದ್ಯಮಿ ಕಿರಣ್ ಮಜುಂದಾರ್ ಶಾ ಉಪಸ್ಥಿತರಿದ್ದರು.