ಸಾರಾಂಶ
ಬೆಂಗಳೂರು : ಪ್ರವರ್ಧಮಾನಕ್ಕೆ ಬರುತ್ತಿರುವ ‘ಕ್ವಾಂಟಮ್ ತಂತ್ರಜ್ಞಾನ’ ಕ್ಷೇತ್ರದಲ್ಲಿ ಕರ್ನಾಟಕವನ್ನು 2035ರ ವೇಳೆಗೆ 20 ಬಿಲಿಯನ್ ಡಾಲರ್ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ನಗರದ ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಐಐಎಸ್ಸಿಯ ಕ್ವಾಂಟಮ್ ಟೆಕ್ನಾಲಜಿ ಇನಿಶಿಯೇಟಿವ್ ಆಯೋಜಿಸಿರುವ 2 ದಿನಗಳ ‘ಕ್ವಾಂಟಮ್ ಇಂಡಿಯಾ’ ಶೃಂಗಸಭೆ ಉದ್ಘಾಟಿಸಿ ಮಾತನಾಡಿ ಸಂಶೋಧನೆ ಮತ್ತು ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸ್ಟಾರ್ಟಪ್‌ಗಳಿಗಾಗಿ 1,000 ಕೋಟಿ ರು. ನಿಧಿ ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷನ್ ಪ್ರಾರಂಭಿಸುತ್ತಿದ್ದೇವೆ. 2035ರ ವೇಳೆಗೆ 10,000 ಉನ್ನತ ಕೌಶಲ್ಯವಿರುವ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯನ್ನಾಗಿ ಸ್ಥಾಪಿಸುವುದು ನಮ್ಮ ಗುರಿ ಎಂದರು.
20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಪರಿಚಯಿಸಿ, ಪ್ರತಿ ವರ್ಷ 150 ಸಂಶೋಧನಾ ಫೆಲೋಶಿಪ್‌ಗೆ ನೆರವು ನೀಡಲಾಗುತ್ತದೆ. ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆಗೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತದೆ. ಕ್ವಾಂಟಮ್ ಹಾರ್ಡ್‌ವೇರ್ ಪಾರ್ಕ್, 4 ನಾವೀನ್ಯತಾ ವಲಯಗಳು ಹಾಗೂ ಕ್ವಾಂಟಮ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ನೂರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು, ಪೇಟೆಂಟ್ ದಾಖಲಿಸಲು ನೆರವು, ಸ್ಟಾರ್ಟಪ್‌ಗಳನ್ನು ಸ್ಥಾಪಿಸಲು ವೆಂಚರ್ ಕ್ಯಾಪಿಟಲ್ ಫಂಡ್ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಬೆಂಗಳೂರಿನಲ್ಲಿ ಅಗತ್ಯ ಮೂಲಸೌಕರ್ಯಗಳಿರುವ ಕ್ವಾಂಟಮ್ ಸಿಟಿ ಸ್ಥಾಪಿಸಲಾಗುತ್ತದೆ. ಈಗಾಗಲೇ ಐಐಎಸ್‌ಸಿ ಕ್ವಾಂಟಮ್ ಸಂಶೋಧನಾ ಪಾರ್ಕ್ ಇದೆ. ವರ್ಷಾಂತ್ಯಕ್ಕೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಘಟನೆಗಳ ಸ್ಥಾಪನೆ ನಿರೀಕ್ಷಿಸಲಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಅರಿಂದಮ್ ಘೋಷ್ ಮಾತನಾಡಿ, ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿ 6000 ಕೋಟಿ ರು. ಹೂಡಿಕೆ ಘೋಷಿಸಿದೆ. ನಮ್ಮ ದೇಶದಲ್ಲೂ ಕ್ವಾಂಟಮ್ ವಿಜ್ಞಾನಿಗಳಿದ್ದಾರೆ. ಕೃತಕ ಬುದ್ಧಿಮತ್ತೆ, ಫೈನಾನ್ಸ್, ಆರೋಗ್ಯ ಕ್ಷೇತ್ರ, ಭದ್ರತೆ, ಹಾರ್ಡ್‌ವೇರ್ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಕ್ವಾಂಟಮ್ ತಂತ್ರಜ್ಞಾನ ಬಳಕೆಗೆ ಸಂಶೋಧನೆ ನಡೆಯುತ್ತಿವೆ. ಇಂಥ ಮಹತ್ವದ ತಂತ್ರಜ್ಞಾನ ಕ್ರಾಂತಿಯಲ್ಲಿ ಕರ್ನಾಟಕವು ಸಕ್ರಿಯವಾಗಿ ಭಾಗಿಯಾಗುತ್ತಿರುವುದು ಮಹತ್ವದ ಸಂಗತಿ ಎಂದರು.
ಕ್ವಾಂಟಮ್ ಇಂಡಿಯಾ ಶೃಂಗಸಭೆಯಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕದ ಪ್ರೊ.ಡಂಕನ್ ಹಾಲ್ಡೇನ್, ಪ್ರೊ.ಡೇವಿಡ್ ಗ್ರಾಸ್ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಸಂಶೋಧಕ ರಾಜಮಣಿ ರಾಘವನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಏನಿದು ಕ್ವಾಂಟಮ್ ತಂತಜ್ಞಾನ?
ಹಾಲಿ ಕಂಪ್ಯೂಟರ್‌ಗಳು ಕೆಲ ಸಂಕೀರ್ಣ ಕೆಲಸಗಳನ್ನು ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಕ್ವಾಂಟಮ್ ಕಂಪ್ಯೂಟರ್ ಈ ಕೆಲಸವನ್ನು ವೇಗವಾಗಿ ನಿರ್ವಹಿಸುತ್ತದೆ. ಅಲ್ಲದೆ, ಸಂಕೀರ್ಣ ಸಮಸ್ಯೆಗಳಿಗೆ ತ್ವರಿತವಾಗಿ ಮತ್ತು ಬಳಕೆದಾರರಿಗೆ ಹೆಚ್ಚು ಅನುಕೂಲ ಎನಿಸುವ ನಿಖರ ಪರಿಹಾರ ಒದಗಿಸಬಲ್ಲದು. ಇದರಿಂದ ಸಂವಹನ, ಸಂಪರ್ಕ, ವೈದ್ಯಕೀಯ, ಸೈಬರ್ ಕ್ಷೇತ್ರಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿ ಮಾಹಿತಿಯು ‘ಕ್ಯೂಬಿಟ್’ ಆಧಾರದ ಪ್ರೊಸೆಸಿಂಗ್‌ಗೆ ಒಳಪಡುತ್ತದೆ.
ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಸಮರ್ಥವಾಗಿರುವ ಕರ್ನಾಟಕ, ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿ. ಈಗ ಕ್ವಾಂಟಮ್ ಕ್ಷೇತ್ರದಲ್ಲಿ ಮುಂದುವರೆಯಲು ಕರ್ನಾಟಕ ಸಿದ್ಧವಾಗಿದೆ. ಸಹಯೋಗ, ನಾವೀನ್ಯತೆ ಮತ್ತು ರಿಯಲ್ ವರ್ಲ್ಡ್ ಕ್ವಾಂಟಮ್ ಅಪ್ಲಿಕೇಶನ್ಸ್‌ನ ಜಾಗತಿಕ ಕೇಂದ್ರವಾಗಿಸುವುದು ನಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಸುವ ಮೂಲಕ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ.20ರಷ್ಟು ಪಾಲು ಹೊಂದುವ ಗುರಿಯೊಂದಿಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು, ಪ್ರೊಸೆಸರ್‌ಗಳು ಮತ್ತು ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಾಗುತ್ತದೆ ಎಂದರು.