ಬೆಂಗಳೂರು : ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸದನದ ಆವರಣದಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಗ್ಗೆ ಸಭಾಪತಿಗಳು ಇಬ್ಬರನ್ನೂ ವಿಚಾರಣೆ ನಡೆಸಿ ರೂಲಿಂಗ್ ಕೂಡ ನೀಡಿದ್ದಾರೆ. ಹೀಗಾಗಿ ಇದು ಸಭಾಪತಿಗಳ ವ್ಯಾಪ್ತಿಗೇ ಬರುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಘಟನೆ ನಡೆದಿರುವುದರಿಂದ ಸಭಾಪತಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಪೊಲೀಸರು ಸುವರ್ಣಸೌಧಕ್ಕೆ ಬಂದು ಬಂಧಿಸಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ, ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರೂ ಸಭಾಪತಿಗಳಿಗೆ ದೂರು-ಪ್ರತಿ ದೂರು ದಾಖಲಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ದೂರಿಗೆ ನಾಗರಾಜ್ ಯಾದವ್, ಉಮಾಶ್ರೀ, ಡಾ। ಯತೀಂದ್ರ ಸಿದ್ದರಾಮಯ್ಯ, ಬಲ್ಕಿಸ್ ಬಾನು ಸಾಕ್ಷಿಯಾಗಿದ್ದಾರೆ. ದೂರು ಪಡೆದ ತಕ್ಷಣ ಸಭಾಪತಿಗಳು ಕಲಾಪದ ಆಡಿಯೋ, ವಿಡಿಯೋ ಪರಿಶೀಲನೆ ನಡೆಸಿದರು. ಸುವರ್ಣಸೌಧದ ಸಭಾಪತಿ ಕಚೇರಿಯಲ್ಲಿ ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ಇಬ್ಬರನ್ನೂ ಮುಖಾಮುಖಿಯಾಗಿ ವಿಚಾರಣೆ ನಡೆಸಿದ್ದಾರೆ.
ಬಳಿಕ ರೂಲಿಂಗ್ ನೀಡಿದ್ದ ಅವರು, ‘ಸಿ.ಟಿ.ರವಿ ಪ್ರಾಸ್ಟಿ** ಎಂದಿದ್ದಾರೆ ಎಂದು ಹೆಬ್ಬಾಳ್ಕರ್ ದೂರು ನೀಡಿದ್ದಾರೆ. ಸಿ.ಟಿ.ರವಿ ಅವರು ಫ್ರಸ್ಟ್ರೇಟ್ (ಹತಾಶೆ) ಎಂಬ ಪದ ಬಳಸಿದ್ದಾಗಿ ವಿವರಣೆ ನೀಡಿದ್ದಾರೆ. ಇಬ್ಬರೂ ಈ ವಿಷಯದ ಸತ್ಯಾಸತ್ಯತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸದನದ ಸಾರಾಂಶಗಳನ್ನು ಕಡತಗಳಲ್ಲಿ ದಾಖಲಿಸಿಕೊಳ್ಳದಿರಲು ನಿರ್ದೇಶನ ನೀಡುತ್ತೇನೆ’ ಎಂದು ಹೇಳಿದ್ದರು. ಸಭಾಪತಿಗಳು ರೂಲಿಂಗ್ ನೀಡಿದ್ದರಿಂದ ಪ್ರಕರಣ ಅವರ ವ್ಯಾಪ್ತಿಗೆ ಬರುತ್ತದೆ’ ಎಂಬ ಹೇಳಲಾಗಿದೆ.