ಆಂತರಿಕ ಭಿನ್ನಮತದ ಕರಿನೆರಳಿನ ನಡುವೆ ಇಂದು ಬಿಜೆಪಿ ಕೋರ್‌ ಕಮಿಟಿ ಸಭೆ : ಬಂಡಾಯಕ್ಕೆ ಕಡಿವಾಣದ ಬಗ್ಗೆ ಚರ್ಚೆ

KannadaprabhaNewsNetwork |  
Published : Dec 07, 2024, 01:31 AM ISTUpdated : Dec 07, 2024, 04:25 AM IST
ಬಿಜೆಪಿ | Kannada Prabha

ಸಾರಾಂಶ

ಆಂತರಿಕ ಭಿನ್ನಮತದ ಕರಿನೆರಳಿನ ನಡುವೆಯೇ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್‌ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಸಂಬಂಧ ಶನಿವಾರ ಕೋರ್ ಕಮಿಟಿ ಸಭೆ ನಡೆಯಲಿದೆ.

 ಬೆಂಗಳೂರು : ಆಂತರಿಕ ಭಿನ್ನಮತದ ಕರಿನೆರಳಿನ ನಡುವೆಯೇ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್‌ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಸಂಬಂಧ ಶನಿವಾರ ಕೋರ್ ಕಮಿಟಿ ಸಭೆ ನಡೆಯಲಿದೆ.

ಪಕ್ಷದ ಸದಸ್ಯತ್ವ ಅಭಿಯಾನ, ಸಂಘಟನಾ ಪರ್ವ ಅಭಿಯಾನ ಸೇರಿ ವಿವಿಧ ಪ್ರಸಕ್ತ ಕಾರ್ಯಕ್ರಮಗಳ ಪರಿಶೀಲನೆ ನಡೆಸುವ ಉದ್ದೇಶದ ಜತೆಗೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತಂತೆ ಚರ್ಚೆ ನಡೆಯಲಿದೆ

ಬಹುದಿನಗಳ ನಂತರ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶನಿವಾರ ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಅಭಿಯಾನಗಳ ಸಂಚಾಲಕರು ಹಾಗೂ ವಿಭಾಗವಾರು ವೀಕ್ಷಕರ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 3ಗಂಟೆಗೆ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯ ನೇತೃತ್ವ ವಹಿಸಲಿದ್ದಾರೆ.

ಭಿನ್ನಮತಕ್ಕೆ ಕಡಿವಾಣ ಹಾಕುವ ಬಗ್ಗೆ ಚರ್ಚೆ: ವಕ್ಫ್ ಹೋರಾಟ ಮುಂದಿಟ್ಟುಕೊಂಡು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿಯಿಂದ ಶೋಕಾಸ್‌ ನೋಟಿಸ್ ನೀಡಿದ್ದು, ಇದಕ್ಕೆ ಸಂಬಂಧಿಸಿ ಯತ್ನಾಳ ಅವರ ದೆಹಲಿಗೆ ತೆರಳಿ ವಿವರಣೆಯನ್ನೂ ನೀಡಿ ಬಂದಿದ್ದಾರೆ. 

ಸದ್ಯ ಅವರ ವಿರುದ್ಧದ ಪ್ರಕರಣ ಹೈಕಮಾಂಡ್ ಅಂಗಳದಲ್ಲಿದೆ. ಹೀಗಾಗಿ, ಆ ಬಗ್ಗೆ ಶನಿವಾರದ ಸಭೆಯಲ್ಲಿ ಹೆಚ್ಚು ಚರ್ಚೆ ನಡೆಸುವ ಸಾಧ್ಯತೆ ಕಡಮೆ ಎಂದು ಮೂಲಗಳು ತಿಳಿಸಿವೆ.

ಆದರೆ, ಭಿನ್ನಮತಕ್ಕೆ ಕಾರಣವಾದ ಅಂಶಗಳು ಏನು, ಯಾವ ಕ್ರಮ ಅನುಸರಿಸಿದರೆ ಭಿನ್ನಮತಕ್ಕೆ ಕಡಿವಾಣ ಹಾಕಬಹುದು ಎಂಬುದರ ಬಗ್ಗೆ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ಜತೆಗೆ ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗುವುದರಿಂದ ಅಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಹಾಗೂ ಪಕ್ಷದಲ್ಲಿನ ಆಂತರಿಕ ಭಿನ್ನಮತ ಪ್ರತಿಧ್ವನಿಸದಂತೆ ಎಚ್ಚರಿಕೆ ಹೆಜ್ಜೆ ಅನುಸರಿಸುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುವ ಸಂಭ‍ವವಿದೆ ಎಂದು ತಿಳಿದು ಬಂದಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ