ಸಚಿವರ ಸ್ಟಿಂಗ್ ಆಪರೇಷನ್ ಮಾಡಲು 2 ಖಾಸಗಿ ಟೀಂ ಕಾರ್ಯಾಚರಣೆ : ಡಿ.ಕೆ.ಶಿವಕುಮಾರ್

Published : Oct 08, 2026, 06:20 AM IST
dk Shivakumar meeting

ಸಾರಾಂಶ

ಸರ್ಕಾರದ ಪ್ರಭಾವಿ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮುಖಾಂತರ ರಹಸ್ಯ ಕಾರ್ಯಾಚರಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಸರ್ಕಾರದ ಪ್ರಭಾವಿ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮುಖಾಂತರ ರಹಸ್ಯ ಕಾರ್ಯಾಚರಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಚಿವರಿಗೆ ಕಿವಿಮಾತು ಹೇಳಿದ್ದು, ತುಂಬಾ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಚಿವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಸಚಿವರು ಯಾರನ್ನು ಭೇಟಿ ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಏನು ಚರ್ಚೆ ಮಾಡುತ್ತಾರೆ ಎಂಬ ದೈನಂದಿನ ಚಟುವಟಿಕೆ ಬಗ್ಗೆ ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್‌ ನಡೆಯುತ್ತಿದೆ. ಹೀಗಾಗಿ ಸಚಿವರು ಹುಷಾರಾಗಿರಬೇಕು ಎಂದಿರುವುದಾಗಿ ಮೂಲಗಳು ತಿಳಿಸಿವೆ.

ಯಾರೆಲ್ಲಾ ಹುಷಾರಾಗಿರಬೇಕು ಎಂದು ಪ್ರತ್ಯೇಕವಾಗಿ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಐದು ಮಂದಿಗೆ ವಿಶೇಷ ಸೂಚನೆ ನೀಡಿದ್ದು, ಇಬ್ಬರು ಸಚಿವರು ಹೆಚ್ಚುವರಿ ನಿಗಾ ವಹಿಸಬೇಕು ಎಂದಿರುವುದಾಗಿ ತಿಳಿದುಬಂದಿದೆ. ಆದರೆ ಆ ಸಚಿವರ ಮಾಹಿತಿ ಬಹಿರಂಗವಾಗಿಲ್ಲ.

ಸಚಿವರಿಗೆ ಡಿಕೆ ಸ್ಟಿಂಗ್‌ ಬಾಂಬ್‌!

- ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಮಂತ್ರಿಗಳಿಗೆ ಕಿವಿ ಮಾತು

- ಖಾಸಗಿ ಏಜೆನ್ಸಿ ಮುಖಾಂತರ ಸಚಿವರ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಲು ಪ್ರತಿಪಕ್ಷಗಳಿಂದ ಪ್ರಯತ್ನದ ಸಂದೇಶ

- ಸಚಿವರ ಚಲನವಲನ ಮೇಲೆ, ಅವರ ಭೇಟಿ, ಚರ್ಚಿಸುವ ವಿಷಯ ಬಗ್ಗೆ 2 ತಂಡಗಳಿಂದ ಸ್ಟಿಂಗ್‌ ಆಪರೇಷನ್‌ ಅಲರ್ಟ್‌

- ಸಚಿವರು ಈ ಬಗ್ಗೆ ಹುಷಾರಾಗಿರಬೇಕು. ಅದರಲ್ಲೂ ಐವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ ಡಿಕೆಶಿ

- ಐವರ ಪೈಕಿ ಇಬ್ಬರು ಸಚಿವರಿಗೆ ಹೆಚ್ಚುವರಿ ನಿಗಾ ವಹಿಸಲು ನಿರ್ದೇಶನ. ಆ ಸಚಿವರು ಯಾರೆಂದು ಬಹಿರಂಗವಾಗಿಲ್ಲ

ಎಚ್ಚರದಿಂದ ಇರಿ ಅಂತ ಸಚಿವರಿಗೆ ಸೂಚನೆ ಇದೆ

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅನಾವಶ್ಯಕ ವಿಚಾರ ಇಟ್ಟುಕೊಂಡು ವಿರೋಧ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದು, ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.

- ಎಚ್‌.ಸಿ. ಬಾಲಕೃಷ್ಣ ಸಚಿವ

ಶಿಸ್ತಿನಿಂದ ಇರಿ ಅಂತ ಸಚಿವರಿಗೆ ಹೇಳಿದ್ದಾರೆ

ಹುಷಾರಾಗಿ ಕೆಲಸ ಮಾಡಿಕೊಂಡು ಹೋಗಿ ಅಂತ ಸಿಎಂ ಹೇಳಿದ್ದಾರೆ. ವಿರೋಧ ಪಕ್ಷದವರು ಎಲ್ಲವನ್ನೂ ಕೆಣುಕುತ್ತಿದ್ದಾರೆ, ನಿಮ್ಮ ಕಾರ್ಯವೈಖರಿ ಸರಿಯಾಗಿರಲಿ. ಶಿಸ್ತಿನಿಂದ ಇರಿ ಅಂತ ಸಿಎಂ ಹೇಳಿದ್ದಾರೆ.

- ಪುಟ್ಟರಂಗ ಶೆಟ್ಟಿ ಪಶು ಸಂಗೋಪನಾ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

14 ಅಕಾಡೆಮಿ, 3 ಪ್ರಾಧಿಕಾರಗಳ ಅಧ್ಯಕ್ಷರಿಗೆ ಹುದ್ದೆ ಬಿಡಲು ಸೂಚನೆ
ಜಿಪಂ, ತಾಪಂನ ಸದಸ್ಯ ಸ್ಥಾನಕ್ಕೆ ಮೀಸಲು ನಿಗದಿ- 4785ರಲ್ಲಿ 2476 ಸ್ಥಾನ ಸ್ತ್ರೀಯರಿಗೆ