ಮಂಡ್ಯದಿಂದ ಶ್ರೀರಂಗನಾಥನ ಕ್ಷೇತ್ರಕ್ಕೆ ಕಾಲಿಟ್ಟ ಪಾದಯಾತ್ರೆ : 100 ಕಿ.ಮೀ ಸಾಗಿದ ಮುಖಂಡರು

KannadaprabhaNewsNetwork |  
Published : Aug 09, 2024, 12:30 AM ISTUpdated : Aug 09, 2024, 04:33 AM IST
8ಕೆಎಂಎನ್‌ಡಿ-4ಶ್ರೀರಂಗಪಟ್ಟಣದ ಕಿರಂಗೂರು ಬಳಿ ವೇದವಿದ್ವಾನ್‌ ಡಾ.ಭಾನುಪ್ರಕಾಶ್‌ ಶರ್ಮಾ ಅವರು ಬಿಜೆಪಿ ನಾಯಕರಿಗೆ ಲಕ್ಷ್ಮೀದೇವಿಯ ಫೋಟೋಗಳನ್ನು ನೀಡಿ ಸ್ವಾಗತಿಸಿದರು. | Kannada Prabha

ಸಾರಾಂಶ

ವಾಲ್ಮೀಕಿ ನಿಗಮದ ಅವ್ಯವಹಾರ, ಮೈಸೂರು ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಗುರುವಾರ 17 ಕಿ.ಮೀ. ಮುಂದೆ ಸಾಗಿತು. ತೂಬಿನಕೆರೆಯಿಂದ ಆರಂಭಗೊಂಡ ಆರನೇ ದಿನದ ಪಾದಯಾತ್ರೆ ಶ್ರೀರಂಗಪಟ್ಟಣ ತಲುಪಿ ವಾಸ್ತವ್ಯ ಹೂಡಿದೆ.

 ಮಂಡ್ಯ/ಶ್ರೀರಂಗಪಟ್ಟಣ :  ವಾಲ್ಮೀಕಿ ನಿಗಮದ ಅವ್ಯವಹಾರ, ಮೈಸೂರು ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಗುರುವಾರ 17 ಕಿ.ಮೀ. ಮುಂದೆ ಸಾಗಿತು. ತೂಬಿನಕೆರೆಯಿಂದ ಆರಂಭಗೊಂಡ ಆರನೇ ದಿನದ ಪಾದಯಾತ್ರೆ ಶ್ರೀರಂಗಪಟ್ಟಣ ತಲುಪಿ ವಾಸ್ತವ್ಯ ಹೂಡಿದೆ.

ಬುಧವಾರ ಸಂಜೆಗೆ ತೂಬಿನಕೆರೆಯ ರೈಟ್‌ ಓ ಹೋಟೆಲ್‌ನಲ್ಲಿ ತಂಗಿದ್ದ ಪಾದಯಾತ್ರೆ ತಂಡ ಗುರುವಾರ ಬೆಳಗ್ಗೆ 9 ಗಂಟೆ ಸಮಯಕ್ಕೆ ಪಾದಯಾತ್ರೆಗೆ ಚಾಲನೆ ನೀಡಿತು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್‌ನಾರಾಯಣಗೌಡ, ಮಾಜಿ ಸಚಿವರಾದ ನಾರಾಯಣಗೌಡ, ರಾಮಚಂದ್ರಪ್ಪ, ಎನ್.ಮಹೇಶ್, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮುಖಂಡ ಎಸ್.ಸಚ್ಚಿದಾನಂದ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮುಂದೆ ಸಾಗಿದರು.

ಗುರುವಾರ ಮಧ್ಯಾಹ್ನದ ವೇಳೆ ಶ್ರೀರಂಗಪಟ್ಟಣ ಗಡಿ ಗ್ರಾಮ ಕೋಡಿಶೆಟ್ಟಿಪುರ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಿತು. ಪಕ್ಷದ ನಾಯಕರನ್ನು ಸ್ವಾಗತಿಸಲು ಎರಡೂ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಭಾರೀ ಗಾತ್ರದ ಹೂವು-ಹಣ್ಣಿನ ಹಾರಗಳನ್ನು ಹಾಕಿ ಸ್ವಾಗತಿಸಿದರು.

ನಂತರ ಪಾದಯಾತ್ರೆಯು ಗಣಂಗೂರು, ಗೌಡಹಳ್ಳಿ ಗೇಟ್, ಗೌರಿಪುರ, ಕೆ.ಶೆಟ್ಟಹಳ್ಳಿ ಮಾರ್ಗವಾಗಿ ಸಂಜೆ ವೇಳಗೆ ಪಟ್ಟಣ ತಲುಪಿತು. ಹೆದ್ದಾರಿಯ ಎರಡೂ ಕಡೆಗಳಲ್ಲಿ ಬೃಹದಾಕಾರದ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳ ನಾಯಕರು ಹಾಗೂ ಪಕ್ಷದ ಚಿಹ್ನೆಯುಳ್ಳ ಕಟೌಟ್‌ಗಳು ರಾರಾಜಿಸುತ್ತಿದ್ದವು.

ಕೇಕ್ ಕತ್ತರಿಸಿ ಸಂಭ್ರಮಿಸಿದ ನಿಖಿಲ್:

ಮೈಸೂರು ಚಲೋ ಪಾದಯಾತ್ರೆ 100 ಕಿ.ಮೀ ದೂರ ಕ್ರಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜೊತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಕ್ ಕತ್ತರಿಸಿ, ಸಂಭ್ರಮಿಸಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈಸೂರು ಚಲೋ ಪಾದಯಾತ್ರೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಬೃಹತ್ ಗಾತ್ರದ ಮೋಸುಂಬಿ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು.

ಮಹಿಳಾ ಕಾರ್ಯಕರ್ತೆಯರ ನೃತ್ಯ :

ಮಂಡ್ಯದಿಂದ ಶ್ರೀರಂಗಪಟ್ಟಣದ ವರೆವಿಗೂ ಕ್ರಮಿಸಿದ ಪಾದಯಾತ್ರೆಯಲ್ಲಿ ಎರಡು ಪಕ್ಷಗಳ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತೆಯರು ಹೆದ್ದಾರಿಯಲ್ಲಿ ಕುಣಿದು, ಕುಪ್ಪಳಿಸಿ ನೃತ್ಯಮಾಡುವ ಬಹಳ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.

ಬ್ಯಾಂಡ್‌ಸೆಟ್ ಬಾರಿಸಿದ ಆರ್.ಅಶೋಕ್:

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಬ್ಯಾಂಡ್‌ ಸೆಟ್‌ನಿಂದ ಮುಖಂಡರನ್ನ ಸ್ವಾಗತಕೋರಿದರು. ಈ ವೇಳೆ ಆರ್. ಅಶೋಕ್ ಸ್ವತಃ ಬ್ಯಾಂಡ್ ಭಾರಿಸುವ ಮೂಲಕ ಗಮನ ಸೆಳೆದರು.

ಮಂತ್ರ ಪಠಣ:

ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ತಾಲೂಕಿನ ಕಿರಂಗೂರು ಗ್ರಾಮದ ಬನ್ನಿಮಂಟದ ಬಳಿ ಮಂತ್ರ ಪಠಿಸುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರನ್ನ ಸ್ವಾಗತಿಸಿ, ಶ್ರೀಮಹಾಲಕ್ಷ್ಮಿ ದೇವಿಯ ಫೋಟೊಗಳನ್ನು ಉಡುಗೊರೆಯಾಗಿ ನೀಡಿದರು.

ವೃದ್ಧೆಯನ್ನು ಆತ್ಮೀಯವಾಗಿ ಮಾತನಾಡಿಸಿದ ನಿಖಿಲ್:

ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನ ದಾರಿಯುದ್ದಕ್ಕೂ ಮಹಿಳೆಯರು, ವೃದ್ಧೆಯರು ಸೇರಿದಂತೆ ಯುವಕ, ಯುವತಿಯರು ಆತ್ಮೀಯವಾಗಿ ಮಾತನಾಡಿಸಿ, ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೂಬಿನಕೆರೆಯಿಂದ ಶ್ರೀರಂಗಪಟ್ಟಣ ತಲುಪಿರುವ ಮೈಸೂರು ಚಲೋ ಪಾದಯಾತ್ರೆ ತಂಡ ಸಂಜೆ ಪಟ್ಟಣದಲ್ಲಿ ಬಹಿರಂಗಸಭೆಯನ್ನು ನಡೆಸಿತು. ನಂತರ ಅಂಬ್ಲಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿತು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ