ವಿದ್ಯಾರ್ಥಿಗಳ ಪರ ಕಾನೂನಿಗೆ ವಿಪಕ್ಷಗಳ ವಿರೋಧ ಏಕೆ?

Published : Aug 07, 2026, 11:04 AM IST
Kota Shrinivas Poojary

ಸಾರಾಂಶ

ದೇಶದ ಯುವಜನತೆಯ ಭಾವನೆಗಳನ್ನು ಹತ್ತಿಕ್ಕಲಾರೆ, ಬದಲಾಗಿ ಗೌರವಿಸುತ್ತೇನೆ ಎಂದ ಪ್ರಧಾನಿ ಮೋದಿ ಯಾರೂ ಊಹಿಸದ ರೀತಿಯಲ್ಲಿ ಮಾತುಕತೆಗೆ ಕರೆದು ಚಳುವಳಿನಿರತ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆ ಈಡೇರಿಸಿ ಇದೀಗ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟಿನಲ್ಲಿ ‘ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣ ಕಾನೂನು 2026’ಅನ್ನು ಮಂಡಿಸಿದ್ದಾರೆ.

ಹೊರ ಜಗತ್ತಿಗೆ ಮೋದಿ ಸರ್ಕಾರ ಚಳುವಳಿಗಾರರ ಬಗ್ಗೆ ಮೃದುತನ ತೋರಿತು ಎಂಬ ಭಾವನೆ ಪ್ರಸರಿಸುತ್ತಿರುವಾಗಲೇ ಒಂದೇ ಒಂದು ಬುಲೆಟ್ ಹಾರಿಸದೆ, ಚಳುವಳಿಯನ್ನು ಹತ್ತಿಕ್ಕಿದ ಕೇಂದ್ರ ಸರ್ಕಾರ ಚಳುವಳಿಗಾರರಿಗೆ ತಲೆಬಾಗಿದಂತೆ ನಡೆದುಕೊಂಡು, ದೇಶದ ಯುವಜನತೆಯ ಭಾವನೆಗಳನ್ನು ಹತ್ತಿಕ್ಕಲಾರೆ, ಬದಲಾಗಿ ಗೌರವಿಸುತ್ತೇನೆ ಎಂದ ಪ್ರಧಾನಿ ಮೋದಿ ಯಾರೂ ಊಹಿಸದ ರೀತಿಯಲ್ಲಿ ಮಾತುಕತೆಗೆ ಕರೆದು ಚಳುವಳಿನಿರತ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆ ಈಡೇರಿಸಿ ಇದೀಗ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟಿನಲ್ಲಿ ‘ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣ ಕಾನೂನು 2026’ಅನ್ನು ಮಂಡಿಸಿದ್ದಾರೆ.

-ಕೋಟ ಶ್ರೀನಿವಾಸ ಪೂಜಾರಿ

ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ದ ದೇಶದಾದ್ಯಂತ ವಿದ್ಯಾರ್ಥಿಗಳಿಂದ ನಡೆದ ಪ್ರತಿಭಟನೆ, ಅದಕ್ಕೆ ಪೂರಕವಾಗಿ ಮೂಡಿ ಬಂದ ಜನಾಭಿಪ್ರಾಯ, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮೋದಿ ಸರಕಾರ ಪ್ರಶ್ನೆ ಪತ್ರಿಕೆಯ ಸೋರಿಕೆಯ ನಿಯಂತ್ರಣಕ್ಕೆ ಹೊಸ ಕಾಯ್ದೆ ತರುವುದಾಗಿ ಘೋಷಿಸಿತ್ತು. ಅದರಂತೆ, ಭಾರತ ಶಿಕ್ಷಣ ಕ್ಷೇತ್ರದಲ್ಲೇ ಅಪರೂಪದ ಕಾಯ್ದೆವೊಂದನ್ನು ಜಾರಿ ಮಾಡಲು ಜುಲೈ 29ರಂದು ಸಚಿವ ಜಿತೇಂದ್ರ ಸಿಂಗ್‌ರ ಮೂಲಕ ಲೋಕಸಭೆಯಲ್ಲಿ ತಿದ್ದುಪಡಿಯನ್ನು ಮಂಡಿಸಿತ್ತು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹಿತ ಹಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ವಾದ-ಪ್ರತಿವಾದ, ಆರೋಪ-ಪ್ರತ್ಯಾರೋಪಗಳ ನಡುವೆಯೂ ಸಮಾಜವಾದಿ ಪಕ್ಷದ ಅಖಿಲೇಶ್ ಸಹಿತ ಹಲವರು ನೂತನ ಪರೀಕ್ಷೆ ಅಕ್ರಮ ಪ್ರತಿಬಂಧಕ ಕಾಯ್ದೆಯ ಬಗ್ಗೆ ಸರಕಾರದ ಮೇಲೆ ಮುಗಿಬಿದ್ದು ವಿರೋಧಿಸಿದ್ದರು.

ಅಚ್ಚರಿಯೆಂದರೆ, ಮೋದಿ ಸರಕಾರ ಶಿಕ್ಷಣದ ಮತ್ತು ವಿದ್ಯಾರ್ಥಿಗಳ ಪರ ತಂದಿರುವ ಕಾಯ್ದೆಯನ್ನು ಪ್ರತಿಪಕ್ಷಗಳು ವಿರೋಧಿಸಿದ್ದೇಕೆ ಎಂಬುದು ಅರ್ಥವಾಗಿಲ್ಲ.ನ್ಯಾಯದ ನೆಪದಲ್ಲಿ ದೇಶದ್ರೋಹ:

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನಸಾಮಾನ್ಯರಿಗೆ ಸರಕಾರದ ಇಲಾಖೆಗಳ ಮೂಲಕ ಅಕ್ರಮ, ಅನ್ಯಾಯವಾದಾಗ ಪ್ರತಿಭಟಿಸುವುದು ಸಂವಿಧಾನ ನೀಡುವ ಹಕ್ಕು. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ವಿಚಾರದಲ್ಲೂ ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ನ್ಯಾಯ ಕೇಳಿದ್ದರೆ ಅದು ತಪ್ಪೆಂದು ಯಾರು ಹೇಳಿಲ್ಲ, ಹೇಳುವುದೂ ಇಲ್ಲ. ಆದರೆ, ನ್ಯಾಯ ಕೇಳುವ ಹೆಸರಲ್ಲಿ ತುಳಿದ ಮಾರ್ಗ, ಹೋರಾಟದ ಹೆಸರಲ್ಲಿ ದೇಶ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿದ ರೀತಿ, ರಾಜಕೀಯ ಇಲ್ಲವೇ ಇಲ್ಲ ಎನ್ನುತ್ತಲೇ ಮೋದಿ ಸರಕಾರದ ವಿರುದ್ಧ ಹೂಡಿದ ತಂತ್ರ, ವಿಕೃತ ಮನಸ್ಸುಗಳೊಂದಿಗೆ ಸೇರಿ ಬಾಂಗ್ಲಾ ಮಾದರಿಯಲ್ಲಿ ಪಾರ್ಲಿಮೆಂಟ್ ಮತ್ತು ಪ್ರಧಾನಿ ಮನೆಗೆ ದಾಳಿ ಮಾಡಲು ರೂಪಿಸಿದ ಸಂಚು ಯಾರಿಗೆ ತಾನೇ ಅರ್ಥವಾಗುವುದಿಲ್ಲ?

ಹೊರ ಜಗತ್ತಿಗೆ ಮೋದಿ ಸರ್ಕಾರ ಚಳುವಳಿಗಾರರ ಬಗ್ಗೆ ಮೃದುತನ ತೋರಿತು ಎಂಬ ಭಾವನೆ ಪ್ರಸರಿಸುತ್ತಿರುವಾಗಲೇ ಒಂದೇ ಒಂದು ಬುಲೆಟ್ ಹಾರಿಸದೆ, ಚಳುವಳಿಯನ್ನು ಹತ್ತಿಕ್ಕಿದ ಕೇಂದ್ರ ಸರ್ಕಾರ ಚಳುವಳಿಗಾರರಿಗೆ ತಲೆಬಾಗಿದಂತೆ ನಡೆದುಕೊಂಡು, ದೇಶದ ಯುವಜನತೆಯ ಭಾವನೆಗಳನ್ನು ಹತ್ತಿಕ್ಕಲಾರೆ, ಬದಲಾಗಿ ಗೌರವಿಸುತ್ತೇನೆ ಎಂದ ಪ್ರಧಾನಿ ಮೋದಿ ಯಾರೂ ಊಹಿಸದ ರೀತಿಯಲ್ಲಿ ಮಾತುಕತೆಗೆ ಕರೆದು ಚಳುವಳಿನಿರತ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆ ಈಡೇರಿಸಿ ಇದೀಗ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟಿನಲ್ಲಿ ‘ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣ ಕಾನೂನು 2026’ಅನ್ನು ಮಂಡಿಸಿದ್ದಾರೆ. ಅಚ್ಚರಿಯೆಂದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರೋಧಿಸಲಿ ಪ್ರತಿಭಟಿಸಲಿ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಿಸಲು ತಂದ ಕಾನೂನು ವಿರೋಧಿಸುವುದೇಕೆ? ವಿರೋಧಕ್ಕೆ ಅರ್ಥವೇನು? ಹಾಗೊಂದು ವೇಳೆ ಕಾನೂನಿಗೆ ಮತ್ತಷ್ಟು ಬಲಬೇಕು ಎನ್ನುವುದಾಗಲಿ ಅಥವಾ ಕಾನೂನಿನಿಂದ ಯಾರಿಗಾದರೂ ತೊಂದರೆ ಆಗುತ್ತದೆ ಎಂಬ ವಾದವೇನಾದರೂ ಇದ್ದರೆ ಅದನ್ನು ಹೇಳಬೇಕಾದ ಸದನದಲ್ಲಿ ಹೇಳದೆ ಕಾನೂನನ್ನೇ ವಿರೋಧಿಸುವುದರಿಂದ ಸಮಾಜಕ್ಕಾಗಲಿ ವಿದ್ಯಾರ್ಥಿಗಳಿಗಾಗಲಿ ಆಗಬಹುದಾದ ಲಾಭವಾದರೂ ಏನು?

ಹೊಸ ಕಾನೂನಲ್ಲಿ ಇರುವುದಾದರೂ ಏನು?:

2024ರಲ್ಲಿ ನೀಟ್ ಪರೀಕ್ಷೆಯ ಕುರಿತು ಮೋದಿ ಸರಕಾರ ತಂದ ತಿದ್ದುಪಡಿಯನ್ನು ಮತ್ತಷ್ಟು ಬಲಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷಣ ನೀಡಬಹುದಾದ ಕಾಯ್ದೆ ಇದಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾ ಅಂತಹ ವಂಚನೆಯಲ್ಲಿ ತೊಡಗಬಹುದಾದ ಕೋಚಿಂಗ್ ಸೆಂಟರ್‌ಗಳು, ಅದಕ್ಕೆಂದೇ ಅಸ್ತಿತ್ವಕ್ಕೆ ಬಂದು ವಂಚನೆಯಲ್ಲಿ ಭಾಗಿಯಾಗಬಹುದಾದ ಕಂಪನಿಗಳಿಗೆ ಕಾನೂನಿನ ಕುಣಿಕೆ ಹಾಕುವ ಕಟ್ಟೆಚ್ಚರದ ಕ್ರಮ ಈ ಹೊಸ ತಿದ್ದುಪಡಿಯಲ್ಲಿ ಅಳವಡಿಸಲಾಗಿದೆ.

ಪರೀಕ್ಷೆಯ ಹೆಸರಲ್ಲಿ ಒಂದಿಲ್ಲೊಂದು ಭಾಗದಲ್ಲಿ ವಂಚಿಸುವ ಹಂತಗಳನ್ನು ಗುರುತಿಸಿ ಸುಮಾರು 15ಕ್ಕೂ ಹೆಚ್ಚು ಅಪರಾಧಗಳನ್ನು ಗುರುತಿಸಿ ಕಾಯಿದೆಯ ಕಣ್ಗಾವಲಿಗೆ ತರಲಾಗಿದೆ. ಪ್ರಮುಖವಾಗಿ, ಪ್ರಶ್ನೆ ಪತ್ರಿಕೆಯನ್ನು ಸೋರಿಕೆಗೊಳಿಸಿ ಮಾರಾಟ ಮಾಡುವುದು, ಪರೀಕ್ಷೆಗಳಿಗೆ ಮುಂಚೆ ಉತ್ತರ ಕೊಡುವುದು, ನಕಲಿ ವೆಬ್‌ಸೈಟ್, ನಕಲಿ ಅಪ್ಡೇಟ್ ಕಾರ್ಡ್‌ಗಳು, ಪರೀಕ್ಷೆ ಕೇಂದ್ರಗಳಲ್ಲಿ ಮೊಬೈಲ್ ಅಥವಾ ಅಂಥವುದೇ ಮಾದರಿಗಳನ್ನು ಅಕ್ರಮವಾಗಿ ಪಡೆಯುವುದು ಮತ್ತು ನೀಡುವುದು ಮತ್ತು ಅಭ್ಯರ್ಥಿಗಳ ಬದಲಿಗೆ ಬೇರೆಯವರು ಪರೀಕ್ಷೆ ಬರೆಯುವುದು ಇವೆಲ್ಲವೂ ಸೇರಿದಂತೆ ಹಲವು ವಿಷಯಗಳ ಪರೀಕ್ಷೆ ಅಕ್ರಮ ತಡೆಗಟ್ಟಲು ತಂದ ಹೊಸ ಕಾಯ್ದೆಯಲ್ಲಿ ₹50 ಲಕ್ಷದಿಂದ ಪ್ರಾರಂಭವಾಗುವ ದಂಡವನ್ನು ₹10 ಕೋಟಿಗೆ ಏರಿಸಲಾಗಿದೆ. ಅಕ್ರಮದಲ್ಲಿ ತೊಡಗಿದ ಕಂಪನಿಗಳಿಗೆ ನಾಲ್ಕು ವರ್ಷಗಳ ಕಾಲ ಇರುವ ಪರೀಕ್ಷಾ ನಿಷೇಧವನ್ನು ಎಂಟು ವರ್ಷಗಳಿಗೆ ಏರಿಸಲಾಗಿ. ವಿದ್ಯಾರ್ಥಿಗಳ ನೀಟ್ ಹೋರಾಟದ ನಂತರ ತಂದಿರುವ ಪರಿಷ್ಕೃತ ಕಾಯ್ದೆಯಲ್ಲಿ ಮತ್ತಷ್ಟು ಪ್ರಮುಖ ಅಂಶಗಳನ್ನು ಸೇರಿಸಿ ತ್ವರಿತ ತನಿಖೆ, ಎಂದರೆ ಪ್ರಕರಣ ದಾಖಲಾದ ಎರಡು ತಿಂಗಳೊಳಗೆ ತನಿಖೆ ಮುಗಿಸುವುದಂತೆ ಹಾಗೂ ಉನ್ನತ ಶ್ರೇಣಿಯ ಅಧಿಕಾರಿಗಳು ಮಾತ್ರ ತನಿಖೆ ಮಾಡುವಂತೆ ಕಾನೂನು ಕುಣಿಕೆಗೆ ಶಕ್ತಿ ನೀಡಲಾಗಿದೆ.

ರಾಜ್ಯಗಳಿಗೆ ಸ್ಪೆಷಲ್ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ನೇಮಿಸಲು ಅಧಿಕಾರ ಕೊಟ್ಟು ಚಾರ್ಜ್ ಶೀಟ್‌ನ ನಂತರ ಮೂರು ತಿಂಗಳಲ್ಲಿ ತೀರ್ಪು ನೀಡುವಂತೆ ಹೊಸ ತಿದ್ದುಪಡಿಯಲ್ಲಿ ನಿಯಮ ಅಳವಡಿಕೆಯಾಗಿದೆ. ಕೇಂದ್ರ ಸರ್ಕಾರ ಮಂಡಿಸಿದ ಪರೀಕ್ಷಾ ಅಕ್ರಮ ಪ್ರತಿಬಂಧಕ ಕಾನೂನಿನಲ್ಲಿ ಅಪರಾಧಿಯ ಆಸ್ತಿ ಮುಟ್ಟುಗೋಲು ಹಾಕಲು ಜಪ್ತಿ ಮಾಡುವ ಅಧಿಕಾರ ತನಿಖಾ ವ್ಯವಸ್ಥೆಗಿದೆ. ಜೈಲು ಶಿಕ್ಷೆಯನ್ನು 7 ರಿಂದ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ರಾಜ್ಯಗಳು ವಿಶೇಷ ಅಭಿಯೋಜಕರನ್ನು ಅಂದರೆ ಪಿ.ಪಿಗಳನ್ನು ನೇಮಿಸಿಕೊಳ್ಳಬಹುದಾಗಿದೆ. ಶಿಕ್ಷಾರ್ಹ ಘಟನೆಗಳಲ್ಲಿ ಉಚ್ಚ ನ್ಯಾಯಾಲಯದ ಡಿವಿಜನ್ ಬೆಂಚ್‌ಗೆ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದಾದರೂ ನ್ಯಾಯಾಲಯ ಮೂರು ತಿಂಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕು. ಇದು ಹೊಸ ಕಾನೂನಿನ ಇಚ್ಛೆಯಾಗಿದೆ.

ಇನ್ನು ಮುಂದೆ ಕೇಂದ್ರ ಸರ್ಕಾರ ಪರೀಕ್ಷಾ ಪದ್ಧತಿಯ ಪಾರದರ್ಶತೆಗಾಗಿ ಬಯೋಮೆಟ್ರಿಕ್, ಕೇಂದ್ರದ ವಿಶೇಷ ಅಡಿಟ್ ಪ್ರಶ್ನೆ ಪತ್ರಿಕೆ ಭದ್ರತೆಯ ಬಗ್ಗೆ ಕಣ್ಗಾವಲು, ಮೌಲ್ಯಮಾಪನದ ಬಗ್ಗೆ ಮತ್ತಷ್ಟು ಹೊಸ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದೆ. ನೀಟ್ ಸೇರಿದಂತೆ ಉನ್ನತ ಪರೀಕ್ಷೆ ವ್ಯವಸ್ಥೆಗಳನ್ನು ಸುಧಾರಣೆ ಮಾಡಲು ರಾಷ್ಟ್ರಮಟ್ಟದ ಸಮಿತಿ ರಚನೆ ಮಾಡಬಹುದು.

ಜಿರಳೆಗಳ ರಗಳೆಗೆ ಕಾರಣವೇನು?:

ಇವೆಲ್ಲದರ ನಡುವೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಕೆಲವೊಮ್ಮೆ ಗೊತ್ತಿಲ್ಲದೆ ನಡೆಯುವ ತಪ್ಪುಗಳು ಸೇರಿದಂತೆ, ವಿದ್ಯಾರ್ಥಿಗಳಿಗೆ ಮೇಲಿನ ಎಲ್ಲಾ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಭವಿಷ್ಯದ ಭಾರತ ದೇಶದ ಮುಂದಿನ ತಲೆಮಾರು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಇಷ್ಟೊಂದು ಕ್ರಾಂತಿಕಾರಿ ಕಾಯ್ದೆ ತಂದಾಗ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಲೋಕಸಭೆಯಲ್ಲಿ ಚರ್ಚೆಗೂ ತೆರೆದುಕೊಳ್ಳದೆ ಜಿರಳೆಗಳಿಗಿಂತಲೂ ಹೆಚ್ಚು ರಗಳೆ ಮಾಡಿಕೊಂಡ ಕಾರಣವೇ ಅರ್ಥವಾಗುತ್ತಿಲ್ಲ.

ವಿಚಿತ್ರವೆಂದರೆ, ರಾಜಕಾರಣದ ವೈಚಾರಿಕ ವಿಷಯಗಳೇನಿದ್ದರೂ ನಂದನ್ ನಿಲೇಕಣಿ ಸಾರ್ವಜನಿಕ ಜೀವನದಲ್ಲಿ ಅಪಾರಜ್ಞಾನ ಹೊಂದಿದ ಅನುಭವಿ. ‘ಮುಂದೆ ಭಾರತ ದೇಶದಲ್ಲಿ ಪರೀಕ್ಷಾ ಪದ್ಧತಿ ಗೊಂದಲದಿಂದ ಮುಕ್ತಗೊಳಿಸಲು ನಿಮ್ಮ ಸಲಹೆ ಕೊಡಿ’ ಎಂದಿದ್ದನ್ನು ವಿಪಕ್ಷಗಳು ಟೀಕಿಸುವುದಾದರೆ ದೇಶಕ್ಕೆ ಜವಾಬ್ದಾರಿಯುತ ವಿಪಕ್ಷಗಳ ನಿಲುವು ಅರ್ಥವಾಗದ ವಿಷಯವಾಗಿದೆ. ದೇಶದ 150 ಕೋಟಿ ಜನರಿಗೆ ಆಧಾರ್ ಗುರುತು ಚೀಟಿ ನೀಡಿದ ನಿಲೇಕಣಿ ಭಾರತದ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆಗಾಗಿ ಅರ್ಥಪೂರ್ಣವಾದ ಶಿಫಾರಸು ಮಾಡಬಲ್ಲರೆಂದು ಪ್ರಧಾನಿ ಮೋದಿ ನಂಬುತ್ತಾರೆ. ಅದೇ ನಂಬಿಕೆ ನೀಲೇಕಣಿ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿಗಿಲ್ಲದಿರುವುದು ವಿಪರ್ಯಾಸ.

ಒಂದು ಕಾಲದ ಕಾಂಗ್ರೆಸ್ ಮಿತ್ರ ನಿಲೇಕಣಿಯನ್ನು ಮೋದಿ ಗೌರವಿಸಿದರೆಂಬ ಕಾರಣಕ್ಕೆ ವಿರೋಧಿಸುವುದಾದರೆ ವಿಪಕ್ಷಗಳ ವಿರೋಧವೂ ಬಲಹೀನ ಎಂಬುದು ಸಾಬೀತಾಗುತ್ತದೆ.

ಇಷ್ಟಕ್ಕೂ ಜಿರಳೆ ಪಕ್ಷದ ಯುವ ಗೆಳೆಯರ ಹೋರಾಟದ ಉದ್ದೇಶ ಗೌರವಿಸಬೇಕಾದರೂ ಜಂತರ್ ಮಂತರ್ ತುಂಬೆಲ್ಲಾ ತ್ರಿವರ್ಣ ಧ್ವಜದ ಅಡಿಯಲ್ಲಿ ರಾಷ್ಟ್ರದ ಆಡಳಿತಕ್ಕೆ ಮಾಡಿದ ಅಪಮಾನ ಚಳುವಳಿ ಹೆಸರಲ್ಲಿ ದೇಶ ವಿರೋಧಿಗಳಿಗೆ ಕೊಟ್ಟ ಪ್ರಾಶಸ್ತ್ಯ, ಪ್ರಧಾನಿಯನ್ನು, ಪೊಲೀಸರನ್ನು ನಿಂದಿಸಿದ ರೀತಿ, ಹೋರಾಟಗಾರರನ್ನು ಕಾಯುತ್ತಿದ್ದ ಪೊಲೀಸರನ್ನು ಹೊಡೆದು ಅಟ್ಟಾಡಿಸಿದ ಕೆಟ್ಟ ನಡತೆ, ವಿದ್ಯಾರ್ಥಿಗಳ ಜೀವ ರಕ್ಷಣೆಗೆ ನಿಯುಕ್ತಳಾದ ಪೋಲಿಸ್ ಅಧಿಕಾರಿಣಿಯನ್ನು ಪರೋಕ್ಷವಾಗಿ ಕೊಂದು ಹಾಕಿದ ಕ್ರಮ, ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪ್ರೇರಿತ ಹೋರಾಟದಲ್ಲಿ ಭಾರತರ ವಿರೋಧಿ ಭಯೋತ್ಪಾದಕ ಕೆನಡಾದ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತ ದೇಶವನ್ನೇ ದ್ವೇಷಿಸುವ ‘1 ಮಿಲಿಯನ್ ಖರ್ಚಾದರೂ ತಾನಿದ್ದೇನೆ’ ಎಂದು ಬಹಿರಂಗವಾಗಿ ನೀಡಿರುವ ಹೇಳಿಕೆ, ದೆಹಲಿ ಮತ್ತು ಬೆಂಗಳೂರಿನಲ್ಲಿ ಹೋರಾಟದ ಸಭೆಗಳ ಮಧ್ಯೆ ಭಯೋತ್ಪಾದಕ ಉಮರ್‌ಖಾನ್ ಬಗ್ಗೆ ಘೋಷಣೆ ಮತ್ತು ಭಿತ್ತಿಪತ್ರ ಪ್ರದರ್ಶನ ಇವೆಲ್ಲವೂ ಜಿರಳೆ ಗೆಳೆಯರ ಹೋರಾಟದ ಹಿಂದೆ ಮೋದಿ ವಿರೋಧಿ ಮಾತ್ರವಲ್ಲ ದೇಶ ವಿರೋಧಿ ಶಕ್ತಿಗಳ ಕಾರ್ಯತಂತ್ರ ಬಿಂಬಿಸುತ್ತವೆ.

ಕೆಪಿಎಸ್ಸಿ ಅಕ್ರಮಕ್ಕೆ ಮೌನವೇಕೆ?:

ವಿದ್ಯಾರ್ಥಿ ಹೋರಾಟದಲ್ಲಿ ನಮ್ಮದೇನು ರಾಜಕಾರಣವಿಲ್ಲ ಎಂದ ಕ್ರೇಜಿವಾಲ್ ಮತ್ತು ರಾಹುಲ್ ಗಾಂಧಿಯವರು ಚಳುವಳಿಯ ನೆಲದಲ್ಲಿ 2830ಕ್ಕೂ ಮಿಕ್ಕಿ ಹಳೆ ಅಪರಾಧಿಗಳ ಮಾಹಿತಿ ಸಿಕ್ಕಿದಾಗ ಮೌನವಹಿಸಿದ್ದೇಕೆ?

ನಮ್ಮ ಹೋರಾಟ ಭಾರತದ ಯುವಕರಿಗಾಗುವ ವಂಚನೆ ತಡೆಗಟ್ಟುವುದು ಮಾತ್ರ ಎಂದು ಸ್ಪಷ್ಟ ನಿಲುವು ವ್ಯಕ್ತಪಡಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜಿತ್ ದೀಪ್ಕೆ ಕರ್ನಾಟಕ ರಾಜ್ಯದ ಕೆ.ಪಿ.ಎಸ್.ಸಿ ಮೂಲಕ ಪರೀಕ್ಷೆ ಬರೆದ ಲಕ್ಷಾಂತರ ಯುವಕ ಯುವತಿಯರ ಕನಸು ಭಗ್ನವಾದ ಹುದ್ದೆಗಳು ₹80 ಲಕ್ಷಕ್ಕೆ ಮಾರಾಟವಾಗುವಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೌನವಹಿಸಿದ್ದೇಕೆ? ಅಂದರೆ ಮೋದಿ ಸರಕಾರದಲ್ಲಿದ್ದರೆ ಮಾತ್ರ ಹೋರಾಟ, ಕರ್ನಾಟಕ ಮತ್ತು ಪಂಜಾಬ್ ಸರಕಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅದಕ್ಕೂ ಮೋದಿ ಸರಕಾರ ಕಾರಣವೆಂಬಂತೆ ಬಿಂಬಿಸುವ ಯತ್ನ ನಡೆಸುತ್ತೀರಾ?

ಹೋರಾಟದ ಅಂಗಳಕ್ಕೆ ಸ್ವಿಗ್ಗಿ, ಜೊಮೆಟೋ ಮೂಲಕ ಟನ್‌ಗಟ್ಟಲೆ ಆಹಾರ ವಿದೇಶಿ ಫಂಡ್ ಬಂದಿದ್ದು, ಕೋಚಿಂಗ್ ಸೆಂಟರ್ ಮಾಫಿಯಗಳ ಬಗ್ಗೆ ಜಿರಳೆಗಳ ಕುರಿತು ಸೊಲ್ಲೆತ್ತಿರುವುದು ಚಳುವಳಿಯಲ್ಲಿ ಅಚ್ಚರಿಯ ಭಾಗವಾಗಿದೆ.

ಕೊನೆಗೊಂದು ಮಾತು:

ಜಿರಳೆ ಗೆಳೆಯರ ಇಡೀ ಹೋರಾಟ ಗಮನಿಸಿದಾಗ ಜಂತರ್ ಮಂತರ್ ಹೋರಾಟದಲ್ಲಿ ಹೋರಾಟಗಾರರಿಗೆ ಬಿರಿಯಾನಿಯೊಂದಿಗೆ ಒಂದು ಲಾರಿ ಕೈಯಿಂದ ಎಸೆಯಬಹುದಾದ ಹರಿತವಾದ ಕಲ್ಲಿನ ತುಂಡುಗಳನ್ನು ಕಳಿಸಿಕೊಟ್ಟ ಪುಣ್ಯಾತ್ಮರ ಕೃಪೆಯಿಂದ ಚಳುವಳಿಗಾರರು ಎಸೆದ ಕಲ್ಲಿಗೆ ಪ್ರತಿಯಾಗಿ ಪೊಲೀಸರು ಲಾಠಿ ಬೀಸಿ ಒಂದೇ ಒಂದು ಜೀವ ಹಾನಿ ಆಗಿದ್ದರೆ...

ಆಶಾವಾದಿಗಳಾಗಿ ಕಾಯುತ್ತಿದ್ದ ಅದೆಷ್ಟೋ ಅತೃಪ್ತ ಆತ್ಮಗಳು ನಿರಾಸೆಗೊಳಗಾದವು. ಭಾರತ ದೇಶದಲ್ಲಿ ಅಪಘಾತ, ಕಾಯಿಲೆ, ಅನಾಹುತಗಳಿಂದ ದಿನವೊಂದಕ್ಕೆ ಸರಾಸರಿ 26 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ದಾಖಲೆಗಳಲ್ಲಿದೆ. ಆದರೆ, ಜಂತರ್ ಮಂತರ್‌ನಲ್ಲಿ ಏನಾದರೂ ಒಂದು ಪ್ರಾಣ ಅನಾಹುತವಾಗಿದ್ದರೆ ಆ ಮೂಲಕ ಮೋದಿ ಸರ್ಕಾರ ನ್ಯಾಯ ಕೇಳಿದ ಯುವಕರನ್ನು ಕೊಂದಿತು ಎಂಬ ಆಪಾದನೆ ಮಾಡಿ ದೇಶವ್ಯಾಪಿ ಅಪಪ್ರಚಾರ ಮಾಡಲು ಸಿದ್ಧವಾಗಿದ್ದ ಪಡೆಯೊಂದನ್ನು ಸದ್ದಿಲ್ಲದೆ ಹುಟ್ಟಡಗಿಸಿದ್ದು ಮೋದಿ/ ಶಾ ಅಲ್ಲದೆ ಮತ್ತಾರು?...

ಜುಲೈ 20ರಿಂದ ಆರಂಭವಾದ ಪಾರ್ಲಿಮೆಂಟ್ ಅದರಲ್ಲೂ ಲೋಕಸಭೆಯಲ್ಲಿ 2 ವಾರಗಳ ಕಾಲ ಕನಿಷ್ಠ ಪ್ರಶ್ನೋತ್ತರಕ್ಕೂ ಅವಕಾಶ ನೀಡದೆ ಸದನದಲ್ಲಿ ವಿಷಯ ಪ್ರಸ್ತಾಪನೆಗಿಂತ ಭಿತ್ತಿ ಪತ್ರದೊಂದಿಗೆ ಬಾವಿಗಿಳಿದು ಸದನದ ಸಮಯ ನುಂಗಿ ಕಾಲಹರಣ ಮಾಡಿದ ವಿಪಕ್ಷಗಳ ಉದ್ದೇಶವೇನು?

ಭಾರತ ಸರ್ಕಾರ ಸಂಸತ್ತಿನ ಕಾರ್ಯ ಕಲಾಪಕ್ಕಾಗಿ ಪ್ರತಿ ನಿಮಿಷ ₹2.50 ಲಕ್ಷ ವ್ಯಯ ಮಾಡಬೇಕಾಗುತ್ತದೆ. ಒಂದು ಗಂಟೆಯ ಅವಧಿಗೆ ಪಾರ್ಲಿಮೆಂಟ್ ನಡೆಸಲು ₹1.5 ಕೋಟಿ ವೆಚ್ಚವಾಗುವುದೆಂದು ಉಭಯ ಸದನಗಳ ಕಾರ್ಯದರ್ಶಿಗಳು ಮಾಹಿತಿ ಒದಗಿಸುತ್ತಾರೆ. ಒಂದು ದಿನಕ್ಕೆ ₹9 ಕೋಟಿ ಖರ್ಚು ಮಾಡಿ ಒಂದು ನಿಮಿಷದ ಕಲಾಪ ನಡೆಯದಿದ್ದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವವರು ಮೌನವಾಗಿದ್ದಾರೆ ಎಂಬ ಕಾರಣಕ್ಕೆ ವಿಪಕ್ಷಗಳ ಸ್ವೆಚ್ಛಾಚಾರ ಎಷ್ಟು ಸರಿ?

ದಿನವೊಂದಕ್ಕೆ ಸರಾಸರಿ ಒಂದು ಸಾವಿರಕ್ಕೂ ಮೀರಿ ಭದ್ರತಾ ಸಿಬ್ಬಂದಿಯನ್ನು ಪಾರ್ಲಿಮೆಂಟ್ ಉಭಯ ಸದನಗಳ ಮತ್ತು ಗೌರವಾನ್ವಿತ ಸದಸ್ಯರ ರಕ್ಷಣೆಗಾಗಿ ನಿಯೋಜಿಸಲಾಗಿದೆ. ಅದಲ್ಲದೆ ದೆಹಲಿ ಪೊಲೀಸರು ಕಟ್ಟೆಚ್ಚರದಿಂದ ಕಾಯುತ್ತಿರುತ್ತಾರೆ. ಇಷ್ಟೆಲ್ಲ ವ್ಯವಸ್ಥೆಗಳಿರುವ ಪ್ರಜಾಪ್ರಭುತ್ವದ ಬಹುದೊಡ್ಡ ವ್ಯವಸ್ಥೆಯಾದ ಸದನಗಳಲ್ಲಿ ಚರ್ಚೆಗಳು ನಡೆಯಬೇಕು. ಪ್ರತಿಪಕ್ಷಗಳ ನಿಲುವಳಿ ಸೂಚನೆ ಮೂಲಕ ಶೂನ್ಯ ವೇಳೆ ಪ್ರಶ್ನೋತ್ತರದ ಕಾಲಗಳನ್ನು ಪಡೆದು ಸರಕಾರವನ್ನು ಕಟ್ಟಿ ಹಾಕಬೇಕು ಎಂಬುದು ವಿಚಾರಶೀಲರ ಆಶೆ. ಆದರೆ 15 ದಿನಗಳು ಬಾವಿಯಲ್ಲೇ ಕುಳಿತು ಗಲಭೆ ಸೃಷ್ಟಿಸಿ ಸದನ ನಡೆಯಲು ಬಿಡುವುದಿಲ್ಲ ಎಂದು ಆರ್ಭಟಿಸಿದರೆ ನಷ್ಟ ಯಾರಿಗೆ?

ಕರ್ನಾಟಕದ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದಾಗ ಹೇಳಿದ ಮಾತೊಂದು ನೆನಪು ‘ರಾಜ್ಯ ಮತ್ತು ದೇಶದ ಮೂಲೆ ಮೂಲೆಯಲ್ಲಿರುವ ತುತ್ತು ಅನ್ನಕ್ಕಾಗಿ ಬಡಿದಾಡುವ ಬಡವನೊಬ್ಬನಿಗೆ ವಿಧಾನಸೌಧ ಮತ್ತು ಪಾರ್ಲಿಮೆಂಟಿನವರೆಗೆ ಬಂದು ದೂರು ಕೊಡಲು ಸಾಧ್ಯವಿಲ್ಲ. ಆದ್ದರಿಂದ ಶಾಸಕರು ಮತ್ತು ಸಂಸದರು ಅವರ ಕ್ಷೇತ್ರದ ಸಮಸ್ಯೆಗಳನ್ನು ಹೊತ್ತು ತಂದು ಸದನದೊಳಗೆ ಚರ್ಚಿಸಿ ಜನರಿಗೆ ನ್ಯಾಯ ಕೊಡಿಸಬೇಕು’ ಎಂದಿದ್ದರು. ದುರಾದೃಷ್ಟಕ್ಕೆ ಇಂದು ಕ್ಷೇತ್ರದ ಸಮಸ್ಯೆಗಳನ್ನು ಉಲ್ಲೇಖಿಸುವ ಬದಲು ಸದನ ನಡೆಯದಂತೆ ತಡೆಯುವುದು ವಿಪಕ್ಷಗಳ ಸಾಧನೆಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಗಳನ್ನು ಕೇಳಿ, ನಿಮ್ಮೆಲ್ಲಾ ಬೇಡಿಕೆ ಈಡೇರಿಸಿದ್ದೇವೆ, ಕೊಕ್ರೋಚ್ ಹೆಸರಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಕೇಸ್ ತೆಗೆಯಲಾಗುವುದು, ನೀಟ್ ಹೆಸರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ವಾರಿಸುದಾರರಿಗೆ ಪರಿಹಾರ ಕೊಡಲಾಗುವುದು, ಎಲ್ಲಕ್ಕಿಂತ ಹೆಚ್ಚಾಗಿ ಧರ್ಮೇಂದ್ರ ಪ್ರಧಾನಂತಹ ಕೇಂದ್ರ ಸಚಿವರನ್ನು ಕೈ ಬಿಡಲಾಗುವುದು, ದೇಶದ ಪ್ರಧಾನಿಯಾದ ನನ್ನ ಕೆಟ್ಟ ಶಬ್ದಗಳಿಂದ ಬೈದದ್ದು ಮಾತ್ರವಲ್ಲ, ನನ್ನ ಸ್ವರ್ಗೀಯ ಅಮ್ಮನನ್ನು ಅಸಹ್ಯಕರವಾಗಿ ನಿಂದಿಸಿ ಅಪಮಾನ ಮಾಡಿದಾಗಲೂ ನಿಮ್ಮ ವಯಸ್ಸು ಗಮನದಲ್ಲಿಟ್ಟುಕೊಂಡು ಎಲ್ಲವನ್ನು ಮರೆತು ಕ್ಷಮಿಸಿದ್ದೇನೆ. ದುರಂತವೆಂದರೆ, ಪ್ರಧಾನಿಯನ್ನು ಪ್ರೇರೆಪಿಸಿದ ವಿಪಕ್ಷಗಳಿಗೆ ಯಾವ ಪಶ್ಚತ್ತಾಪವೂ ಇಲ್ಲ. ಮುಂದೆ ಬರಲೂ ಸಾಧ್ಯವಿಲ್ಲ...

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ: ಪ್ರಿಯಾಂಕ್‌
ಎಲ್ಲ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರೇ : ಡಿಕೆಶಿ