ಬೆಂಗಳೂರು : ಭಿನ್ನಮತ ಚಟುವಟಿಕೆ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ವಿವರಣೆ ನೀಡುವ ಮೂರು ದಿನಗಳ ಗಡುವು ಮುಗಿದಿದ್ದು, ಹೈಕಮಾಂಡ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಕುತೂಹಲ ಮೂಡಿಸಿದೆ.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸೋಮವಾರ ಯತ್ನಾಳ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು. ಮೂರು ದಿನಗಳೊಳಗಾಗಿ ಲಿಖಿತ ವಿವರಣೆ ನೀಡುವಂತೆ ಗಡುವನ್ನೂ ವಿಧಿಸಿತ್ತು. ಒಂದು ವೇಳೆ ಈ ಮೂರು ದಿನಗಳಲ್ಲಿ ವಿವರಣೆ ನೀಡದಿದ್ದರೆ, ಏನೂ ಹೇಳುವುದು ಇಲ್ಲ ಎಂದು ಭಾವಿಸಿ ಅಂತಿಮ ಹಂತದ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿತ್ತು.
ಇದೀಗ ಆ ಮೂರು ದಿನಗಳ ಗಡುವು ಮುಗಿದಿದೆ. ಈ ನಡುವೆ ಯತ್ನಾಳ ಅವರು ತಮಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದರೂ ಅದಕ್ಕೆ ಉತ್ತರ ನೀಡುವುದಿಲ್ಲ ಎಂದು ಸವಾಲಿನ ಧಾಟಿಯಲ್ಲಿ ಹೇಳಿದ್ದಾರೆ. ಹೀಗಾಗಿ, ಅವರ ವಿರುದ್ಧ ಪಕ್ಷದ ಹೈಕಮಾಂಡ್ ಯಾವ ಹೆಜ್ಜೆ ಅನುಸರಿಸಲಿದೆ ಎಂಬುದು ಕುತೂಹಲಕರವಾಗಿದೆ.ಯತ್ನಾಳ ಸೇರಿದಂತೆ ಅವರ ಬಣದ ಮುಖಂಡರು ವಾರದಲ್ಲಿ ಎರಡೆರಡು ಬಾರಿ ದೆಹಲಿಗೆ ತೆರಳಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿದ್ದರು. ಇದರ ಮಧ್ಯೆಯೇ ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿದ್ದರು. ಇದು ಯತ್ನಾಳ ಅವರಿಗೆ ನೀಡಿರುವ ಎರಡನೆಯ ಶೋಕಾಸ್ ನೋಟಿಸ್. ಕಳೆದ ಡಿಸೆಂಬರ್ ತಿಂಗಳಲ್ಲಿ ಮೊದಲ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಆರು ಪುಟಗಳ ವಿವರಣೆಯನ್ನು ಯತ್ನಾಳ ನೀಡಿದ್ದರು.
- ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಸೋಮವಾರ ಶೋಕಾಸ್ ನೋಟಿಸ್ ನೀಡಿದ್ದ ಬಿಜೆಪಿ- ಮೂರು ದಿನದಲ್ಲಿ ಉತ್ತರ ನೀಡುವಂತೆ ಗಡುವು ವಿಧಿಸಿದ್ದ ಬಿಜೆಪಿ. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ- ಆ ಮೂರು ದಿನಗಳ ಗಡುವು ನಿನ್ನೆಗೆ ಅಂತ್ಯ. ನೋಟಿಸ್‌ಗೆ ಉತ್ತರ ನೀಡುವುದಿಲ್ಲ ಎಂದು ಹೇಳಿರುವ ಯತ್ನಾಳ- ಹೈಕಮಾಂಡ್ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ. ಕ್ರಮ ಆಗುತ್ತಾ? ಇಲ್ಲವಾ ಎಂಬ ಬಗ್ಗೆ ಚರ್ಚೆ- ಯತ್ನಾಳಗೆ ಡಿಸೆಂಬರ್‌ನಲ್ಲೂ ನೋಟಿಸ್ ನೀಡಲಾಗಿತ್ತು. ಆಗ ಅವರು ಉತ್ತರ ನೀಡಿದ್ದರು. ಇದು 2ನೇ ನೋಟಿಸ್