''''ಕನ್ನಡ ಮಾಸಾಚರಣೆ ೨೦೨೩'''' ಕಾರ್ಯಕ್ರಮದಲ್ಲಿ ಶಿಕ್ಷಕ ಕುಮಾರಸ್ವಾಮಿ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಚಾಮರಾಜನಗರಕನ್ನಡ ಭಾಷೆಯ ಅಳಿವು ಉಳಿವು ಕನ್ನಡಿಗರಾದ ನಮ್ಮೆಲ್ಲರ ಕೈಯಲ್ಲಿದೆ ಎಂದು ಶಿಕ್ಷಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಚಾಮರಾಜನಗರ ತಾಲೂಕಿನ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''ಕನ್ನಡ ಮಾಸಾಚರಣೆ ೨೦೨೩'''' ಕಾರ್ಯಕ್ರಮದಲ್ಲಿ ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ನಮ್ಮ ಉಸಿರು, ಹೃದಯದ ಬಡಿತ, ನಮ್ಮ ನರನಾಡಿಗಳು ಕನ್ನಡ ಕನ್ನಡ ಎನ್ನಬೇಕು. ಅಂತಹದ್ದೊಂದು ಭಾವನೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿದರೆ ಎಷ್ಟೊಂದು ಚಂದ ಅಲ್ವಾ? ಅನ್ಯಭಾಷೆಯ ಪ್ರಾವೀಣ್ಯತೆ ನಮಗಿರಲಿ, ಆದರೆ ನಮ್ಮ ಭಾಷೆಯನ್ನು ಯಾರೊಂದಿಗೂ ಬಿಟ್ಟುಕೊಡುವವರು ನಾವಾಗಬಾರದು. ಬೇರೆ ರಾಜ್ಯಗಳಿಗೆ ಅಥವಾ ದೇಶಕ್ಕೆ ಹೋದರೆ ನಮ್ಮ ಮುಂದಿರುವವರಿಗೆ ಕನ್ನಡ ತಿಳಿದಿದ್ದರೂ ನಾವು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ಏಕೆಂದರೆ ನಮಗೆ ಕನ್ನಡ ಮಾತನಾಡಲು ಮುಜುಗರ. ಎಲ್ಲಿ ನಮ್ಮನ್ನು ನೋಡಿ ನಗುತ್ತಾರೋ ಎಂಬ ಸಂಕೋಚ. ಆಗ ನಾವು ಕನ್ನಡ ಅಷ್ಟೊಂದು ಕೀಳು ಭಾಷೆಯೇ? ನಾವು ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು. ಬೇರೆ ಭಾಷೆಯ ಜನರಿಗಾಗಿ ನಾವು ನಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುವಾಗ ಅವರೇಕೆ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ? ಕಾರಣ ಇಷ್ಟೇ ಅವರಿಗೆ ಅವರ ಭಾಷೆಯ ಮೇಲಿರುವ ಪ್ರೀತಿ, ಅವರ ನುಡಿಯ ಮೇಲಿನ ಅಭಿಮಾನ. ನಮ್ಮ ಕನ್ನಡ ಭಾಷೆಯ ಮೇಲೆ ಕನ್ನಡಿಗರಾದ ನಾವೂ ಕೂಡ ಈ ರೀತಿಯ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಿಗರಾದ ನಾವು ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಮಾತನಾಡಿ, ಭಾರತ ಮಾತೆಯ ಹೆಮ್ಮೆಯ ಕನ್ನಡ ನಾಡಲ್ಲಿ ಇಲ್ಲದಿರುವುದು ಏನೂ ಇಲ್ಲ. ಕನ್ನಡನಾಡು ಹಚ್ಚ ಹಸುರಿನ ದಟ್ಟವಾದ ವನಗಳಿರುವ ಗಂಧದ ಬೀಡು. ಮೈದುಂಬಿ ಹರಿಯುತ್ತಿರುವ ಕೃಷ್ಣೆ, ಶರಾವತಿ, ತುಂಗೆ, ಕಾವೇರಿಯರ ಉಗಮದ ನಾಡು. ಶಂಕರ, ರಮಾನುಜ, ವಿದ್ಯಾರಣ್ಯ, ಬಸವೇಶ್ವರರು ನೆಲೆಸಿದ ಪುಣ್ಯದ ನೆಲೆಯಿದು. ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ ಮತ್ತು ಜನ್ನರು ಹುಟ್ಟಿದ ಪುಣ್ಯಭೂಮಿಯಿದು. ನಮ್ಮ ನಾಡು ಕರ್ನಾಟಕ ನಮ್ಮ ಭಾಷೆ ಕನ್ನಡದ ಎಂದು ಎದೆ ತಟ್ಟಿ ಗರ್ವದಿಂದ ಹೇಳಲು ಇಷ್ಟು ವಿಚಾರಗಳು ಸಾಕಲ್ಲವೇ? ಎಂದರು.ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಬಸವರಾಜು, ಮಹೇಶ, ಲೋಹಿತ, ಮಹದೇವಸ್ವಾಮಿ, ನಾಗರಾಜು, ಸಿದ್ದರಾಜು, ಶಿವಣ್ಣ, ನಾಗರತ್ನಮ್ಮ, ಕೋಮಲ, ಶೈಲಜಾ, ಚಂದ್ರಿಕ, ರೇಖಾ, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.----------
10ಸಿಎಚ್‌ಎನ್7ಚಾಮರಾಜನಗರ ತಾಲೂಕಿನ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ''''''''ಕನ್ನಡ ಮಾಸಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಕುಮಾರಸ್ವಾಮಿ ಮಾತನಾಡಿದರು.