;Resize=(412,232))
ಯಶಸ್ವಿ ವ್ಯಕ್ತಿಗಳು ಯಾರಿರುತ್ತಾರೋ ಅವರು ಕನಿಷ್ಠ ಆರು ತಿಂಗಳಿಗೊಮ್ಮೆ ಹೊಸ ಅಭ್ಯಾಸ ಶುರು ಮಾಡುತ್ತಾರೆ. ಹೊಸ ದಿನಚರಿ ಆರಂಭಿಸುತ್ತಾರೆ. ಅದು ಅವರನ್ನು ಅವರು ಹೊಸತಾಗಿಸುವ ಕ್ರಮ. ಹೊಸ ದಾರಿಗೆ ಹೊರಳುವ ಅಭ್ಯಾಸ. ಹೀಗೆ ಹೊಸ ವರ್ಷದಲ್ಲಿ ಹೊಸ ದಿನಚರಿ ಆರಂಭಿಸುವ ಪದ್ಧತಿ ಬಹಳ ಮಂದಿಗಿದೆ. ಅವರಿಗೆಂದೇ ಕೆಲವು ಐಡಿಯಾಗಳು ಇಲ್ಲಿವೆ.
1. ಸಮಯವನ್ನು ಆಡಿಟ್ ಮಾಡಿ
ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೊದಲು ಎಲ್ಲಿ ನೀವು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿಯುವುದು ಮುಖ್ಯ. ಅದಕ್ಕಾಗಿ ಒಂದು ವಾರಗಳ ಕಾಲ ಪ್ರತೀ ಗಂಟೆಯ ನಿಮ್ಮ ಚಟುವಟಿಕೆಯನ್ನು ಗಮನಿಸಿ. ಅದರಲ್ಲಿ ಯಾವುದು ಅನಗತ್ಯ ಚಟುವಟಿಕೆ ಎಂಬುದನ್ನು ಪಟ್ಟಿ ಮಾಡಿ. ಉದಾಹರಣೆಗೆ ಸೋಷಿಯಲ್ ಮೀಡಿಯಾ ಅಥವಾ ಅನಗತ್ಯ ಆಲೋಚನೆಗಳಲ್ಲಿ ಎಷ್ಟು ಸಮಯ ವ್ಯಯವಾಗುತ್ತಿದೆ ಎಂದು ತಿಳಿಯಿರಿ. ಯಾವ ಕೆಲಸಗಳು ನಿಮ್ಮನ್ನು ಮಾನಸಿಕವಾಗಿ ದಣಿಸುತ್ತಿವೆ ಎಂಬುದನ್ನು ಪಟ್ಟಿ ಮಾಡಿ. ಅದನ್ನು ಕ್ರಮೇಣ ತಿದ್ದಿಕೊಳ್ಳಿ
ಯಾವುದೇ ಹೊಸ ಅಭ್ಯಾಸವನ್ನು ಈಗಾಗಲೇ ಇರುವ ಹಳೆಯ ಅಭ್ಯಾಸದ ಜೊತೆಗೆ ಸೇರಿಸುವುದಕ್ಕೆ ‘ಹ್ಯಾಬಿಟ್ ಸ್ಟ್ಯಾಕಿಂಗ್’ ಎನ್ನುತ್ತಾರೆ. ಈ ಕ್ರಮ ಹೊಸ ಕೆಲಸವನ್ನು ನೆನಪಿಟ್ಟುಕೊಳ್ಳಲು ಮೆದುಳಿಗೆ ಸುಲಭ ಮಾಡಿಕೊಡುತ್ತದೆ. ಈ ಪದ್ಧತಿ ಹೇಗೆಂದರೆ ಈಗ ಒಂದು ಟೈಮಲ್ಲಿ ಒಂದು ಕೆಲಸ ಮಾಡುತ್ತಿದ್ದೀರಿ, ಅದು ಮುಗಿದ ನಂತರ, ಹೊಸ ಕೆಲಸ ಆರಂಭಿಸಿ. ಉದಾಹರಣೆಗೆ ಬೆಳಿಗ್ಗೆ ಕಾಫಿ ಕುಡಿದ ತಕ್ಷಣ, ನಾನು 5 ನಿಮಿಷಗಳ ಕಾಲ ಆ ದಿನ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸುತ್ತೇನೆ ಎಂದುಕೊಳ್ಳಿ. ಕ್ರಮೇಣ ಕಾಫಿ ಕುಡಿದ ತಕ್ಷಣ ದಿನಚರಿ ಪಟ್ಟಿ ಮಾಡುವುದು ಅಭ್ಯಾಸವಾಗುತ್ತದೆ.
3. ಡಿಜಿಟಲ್ ದಿನಚರಿ ಬದಲಾವಣೆ
ಈ ಕಾಲದಲ್ಲಿ ನಮ್ಮ ಅತೀ ದೊಡ್ಡ ಶತ್ರು ಎಂದರೆ ಸ್ಕ್ರೀನ್ ಅಡಿಕ್ಷನ್. ಕ್ಷಣಕ್ಕೊಮ್ಮೆ ಮೊಬೈಲ್ ನೋಡುವುದು ಅಭ್ಯಾಸವಾಗಿಬಿಟ್ಟಿದೆ. ಇದನ್ನು ನಿಯಂತ್ರಿಸಲು ಈ ಎರಡು ಕ್ರಮಗಳನ್ನು ಅನುಸರಿಸಿ:
ಡಿಜಿಟಲ್ ಸೂರ್ಯೋದಯ: ಎದ್ದ ತಕ್ಷಣ ಮೊದಲ 30 ನಿಮಿಷಗಳ ಕಾಲ ಫೋನ್ ನೋಡಬೇಡಿ. ಬದಲಿಗೆ ಸೂರ್ಯನ ಬೆಳಕಿನಲ್ಲಿ ತುಸು ಹೊತ್ತು ಕಳೆಯಿರಿ.
ಡಿಜಿಟಲ್ ಸೂರ್ಯಾಸ್ತ: ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಪಕ್ಕಕ್ಕಿಡಿ. ಬಳಸಲೇಬೇಡಿ. ಗಾಢ ನಿದ್ರೆಗೆ ನೆರವಾಗುತ್ತದೆ.
4. ಗುರಿ ಜೊತೆಗೆ ಕಾರ್ಯಪ್ರವೃತ್ತರಾಗಿ
ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಬಹಳಷ್ಟು ಮಂದಿ ಹೊಸ ಗುರಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನಾನು ತೂಕ ಇಳಿಸಿಕೊಳ್ಳಬೇಕು ಎನ್ನುವುದು ಗುರಿ. ಗುರಿ ಇಟ್ಟುಕೊಳ್ಳಿ. ಅದರ ಜೊತೆಗೆ ನಾನು ಪ್ರತಿದಿನ ಬೆಳಿಗ್ಗೆಯೋ ಸಂಜೆಯೋ ಕನಿಷ್ಠ 20 ನಿಮಿಷಗಳ ಕಾಲ ನಡೆಯುತ್ತೇನೆ ಎಂಬ ಅಭ್ಯಾಸ ರೂಢಿಸಿಕೊಳ್ಳಿ. ಗುರಿ ಇಟ್ಟುಕೊಳ್ಳುವುದರಿಂದ ನೀವು ಒತ್ತಡಕ್ಕೆ ಒಳಗಾಗಬಹುದು. ಆದರೆ ಆಯಾ ದಿನ ಏನು ಮಾಡಬೇಕು ಎಂದುಕೊಳ್ಳುವುದರಿಂದ ಶಿಸ್ತುಬದ್ಧತೆ ಬರುತ್ತದೆ.
5. ಡೀಪ್ ವರ್ಕ್
ಗಮನ ಕೇಂದ್ರೀಕರಿಸುವುದು ಈ ಕಾಲದ ಬಹುದೊಡ್ಡ ಸವಾಲು. ಮನಸ್ಸು ಚಂಚಲಗೊಳಿಸಲು ಬೇಕಾದಷ್ಟು ವಿಷಯಗಳಿವೆ. ಹಾಗಾಗಿ ನೀವು ಮಾಡಬೇಕಾದ ಅತ್ಯಂತ ಕಠಿಣ ಕೆಲಸಗಳಿಗೆ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ಒಳ್ಳೆಯದು.
ಫೋಕಸ್ ಅವರ್: ದಿನದಲ್ಲಿ ಯಾವುದಾದರೂ 90 ನಿಮಿಷಗಳನ್ನು ‘ಡೀಪ್ ವರ್ಕ್’ ಸಮಯವೆಂದು ಘೋಷಿಸಿ. ಆ ಸಮಯದಲ್ಲಿ ಇಂಟರ್ನೆಟ್ ಆಫ್ ಮಾಡಿ ಅಥವಾ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ. ಯಾವುದೇ ಡಿಸ್ಟರ್ಬೆನ್ಸ್ ಇರದೆ ಕೆಲಸದಲ್ಲಿ ತೊಡಗಿಕೊಳ್ಳಿ.
ಬ್ಯಾಚಿಂಗ್: ಇಮೇಲ್ ನೋಡುವುದು ಅಥವಾ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದನ್ನು ದಿನದಲ್ಲಿ ಕೇವಲ ಎರಡು ಬಾರಿ ಮಾತ್ರ ಮಾಡಿ. ಉದಾಹರಣೆಗೆ ಬೆಳಿಗ್ಗೆ 11ಕ್ಕೆ ಮತ್ತು ಸಂಜೆ 4ಕ್ಕೆ ಮಾತ್ರ ಇಮೇಲ್ ನೋಡುತ್ತೇನೆ ಅಥವಾ ಮೆಸೇಜ್‌ಗೆ ರಿಪ್ಲೈ ಮಾಡುತ್ತೇನೆ ಅಂದುಕೊಳ್ಳಿ.
6. ಆಹಾರ ಶಿಸ್ತು
ನಾವು ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಹೇಗೆ ತಿನ್ನುತ್ತೇವೆ ಎಂಬುದು ಮುಖ್ಯ. ಸಾಮಾನ್ಯವಾಗಿ ಊಟ ಮಾಡುವಾಗಲೂ ಮೊಬೈಲ್ ನೋಡುವುದು ರೂಢಿಯಾಗಿಬಿಟ್ಟಿದೆ. ಮೊಬೈಲ್ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆ ಮಾಡಬಹುದು. ಅಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಜೊತೆಗೆ ಪ್ರತೀ ಬಾರಿ ನೀರು ಕುಡಿಯುವಾಗಲೂ ಒಂದು ನಿಮಿಷ ಶಾಂತವಾಗಿ ಕುಳಿತುಕೊಳ್ಳಿ. ನಿಮ್ಮನ್ನು ನೀವು ಗಮನಿಸಿ. ಇದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
7. ಎಐ ಸದ್ಬಳಕೆ
ದಿನಕ್ಕೊಂದು ಹೊಸ ತಂತ್ರಜ್ಞಾನ ಬರುತ್ತಿದೆ. ಅದಕ್ಕೆ ತಕ್ಕಂತೆ ಸಿದ್ಧಗೊಳ್ಳುವುದು ಅನಿವಾರ್ಯ. ತಂತ್ರಜ್ಞಾನವನ್ನು ಅದರಲ್ಲೂ ಎಐ ಅನ್ನು ಕಲಿತು ನಿಮ್ಮ ಕೌಶಲವನ್ನಾಗಿ ಮಾಡಿಕೊಳ್ಳಿ. ಹೊಸ ಭಾಷೆ ಅಥವಾ ಕೌಶಲ್ಯ ಕಲಿಯಲು ಎಐ ಟೂಲ್‌ಗಳನ್ನು ದಿನಕ್ಕೆ 15 ನಿಮಿಷ ಬಳಸಿ. ವಾರದ ಅಡುಗೆಯ ಪಟ್ಟಿ ಅಥವಾ ವ್ಯಾಯಾಮದ ಚಾರ್ಟ್ ತಯಾರಿಸಲು ತಂತ್ರಜ್ಞಾನದ ಸಹಾಯ ಪಡೆದು ನಿಮ್ಮ ಸಮಯ ಉಳಿಸಿಕೊಳ್ಳಿ.
8. ಆಫ್‌ಲೈನ್ ಬಂಧವನ್ನು ಗಟ್ಟಿಮಾಡಿಕೊಳ್ಳಿ
ಡಿಜಿಟಲ್ ಜಗತ್ತಿನಲ್ಲಿ ನಮಗೆ ಆನ್‌ಲೈನ್ ಸಂಬಂಧ ಗಟ್ಟಿಯಾಗುತ್ತಿದೆ. ಆದರೆ ಆಫ್‌ಲೈನ್‌ನಲ್ಲಿ ಆತ್ಮೀಯರಿಂದ ದೂರವಾಗುತ್ತಿದ್ದೇವೆ. ಇದನ್ನು ಸರಿಪಡಿಸಲು ವಾರಕ್ಕೊಮ್ಮೆ ಒಬ್ಬ ಹಳೆಯ ಸ್ನೇಹಿತ ಅಥವಾ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿ. ನಿಮ್ಮ ಬಡಾವಣೆಯಲ್ಲಿ, ಕುಟುಂಬದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಿಂಗಳಿಗೊಮ್ಮೆ ಭಾಗವಹಿಸಿ.
9. ಶಟ್-ಡೌನ್
ಕೆಲಸದ ಒತ್ತಡವನ್ನು ಮನೆಗೆ ತರಬಾರದು. ಆ ಒತ್ತಡ ಬೇರೆಯವರಿಗೆ ದಾಟಿಸಬಾರದು. ಅದನ್ನು ತಡೆಯಲು ಈ ಎರಡು ಪದ್ಧತಿ ರೂಢಿಸಿಕೊಳ್ಳಿ.
ರಿವ್ಯೂ: ಮಲಗುವ ಮುನ್ನ ಇಂದು ಮಾಡಿದ ಕೆಲಸಗಳನ್ನು ಒಮ್ಮೆ ನೆನಪಿಸಿಕೊಳ್ಳಿ.
ಪ್ರಿಪರೇಶನ್: ಮರುದಿನ ಧರಿಸುವ ಬಟ್ಟೆ ಮತ್ತು ಕೆಲಸದ ಫೈಲ್‌ಗಳನ್ನು ಹಿಂದಿನ ರಾತ್ರಿಯೇ ಸಿದ್ಧಪಡಿಸಿಟ್ಟುಕೊಳ್ಳಿ. ಇದು ಬೆಳಗಿನ ಗೊಂದಲ ಮತ್ತು ನಿರ್ಧಾರ ತೆಗೆದುಕೊಳ್ಳುವ ತೊಂದರೆಯನ್ನು ಕಡಿಮೆ ಮಾಡುತ್ತದೆ.
10. ಮೈಕ್ರೋ ಲರ್ನಿಂಗ್
ದೊಡ್ಡ ಕೋರ್ಸ್‌ಗಳನ್ನು ಮಾಡಲಾಗದಿದ್ದರೂ, ಸಣ್ಣ ಸಣ್ಣ ಕಲಿಕೆ ಇರಲಿ. ಪ್ರಯಾಣದ ಸಮಯದಲ್ಲಿ ಕೇವಲ ಹಾಡು ಕೇಳುವ ಬದಲು ಜ್ಞಾನ ಹೆಚ್ಚಿಸುವ ಪಾಡ್‌ಕಾಸ್ಟ್‌ಗಳನ್ನು ಕೇಳಿ. ಒಂದು ಹೊಸ ಹವ್ಯಾಸವನ್ನು ಉದಾಹರಣೆಗೆ ಗಿಟಾರ್ ಕಲಿಕೆ, ಅಡುಗೆ ಅಥವಾ ಕೋಡಿಂಗ್ ಅನ್ನು ಕಲಿಯಲು ನಿರ್ಧರಿಸಿ.
ಹೊಸ ದಿನಚರಿಯನ್ನು ಪಾಲಿಸಲು ಸಣ್ಣ ಟಿಪ್ಸ್:
ದಿನಚರಿ ಬದಲಿಸಬೇಕು ಅಂತ ಒಂದೇ ಸಮಯದಲ್ಲಿ ಎಲ್ಲವನ್ನೂ ಪಾಲಿಸಲು ಹೋಗದಿರಿ. ವಾರಕ್ಕೆ ಕೇವಲ ಒಂದು ಹೊಸ ಹವ್ಯಾಸವನ್ನು ಮಾತ್ರ ಶುರು ಮಾಡಿ. ಒಂದು ದಿನ ದಿನಚರಿ ತಪ್ಪಿದರೆ ಪರವಾಗಿಲ್ಲ, ಮರುದಿನ ಮತ್ತೆ ಪ್ರಯತ್ನಿಸಿ. ಪರಿಪೂರ್ಣತೆಗಿಂತ ನಿರಂತರತೆ ಬಹಳ ಮುಖ್ಯ.
2026ರ ಹೊಸ ಆರಂಭ: ಮಾದರಿ ವೇಳಾಪಟ್ಟಿ
ಸಮಯ ಚಟುವಟಿಕೆ ವಿವರಣೆ
ಬೆಳಿಗ್ಗೆ 6:00 - 6:30 ಡಿಜಿಟಲ್ ಮುಕ್ತ ಆರಂಭ ಎದ್ದ ತಕ್ಷಣ ಫೋನ್ ನೋಡಬೇಡಿ. ಸ್ವಲ್ಪ ನೀರು ಕುಡಿದು, ಕಿಟಕಿ ಹೊರಗೆ ನೈಸರ್ಗಿಕ ಬೆಳಕನ್ನು ನೋಡಿ.
ಬೆಳಿಗ್ಗೆ 6:30 - 7:15 ದೈಹಿಕ ಚಟುವಟಿಕೆ ಯೋಗ, ವೇಗದ ನಡಿಗೆ ಅಥವಾ ಜಿಮ್. ದಿನವಿಡೀ ಚೈತನ್ಯದಿಂದಿರಲು ಇದು ಮುಖ್ಯ.
ಬೆಳಿಗ್ಗೆ 7:15 - 8:00 ವೈಯಕ್ತಿಕ ಕಲಿಕೆ/ ಧ್ಯಾನ 10 ನಿಮಿಷ ಧ್ಯಾನ ಮತ್ತು 20 ನಿಮಿಷ ಯಾವುದಾದರೂ ಪುಸ್ತಕ ಓದಿ.
ಬೆಳಿಗ್ಗೆ 9:00 - 11:00 ಡೀಪ್ ವರ್ಕ್ ನಿಮ್ಮ ದಿನದ ಅತ್ಯಂತ ಕಠಿಣ ಅಥವಾ ಪ್ರಮುಖ ಕೆಲಸವನ್ನು ಈ ಸಮಯದಲ್ಲಿ ಮುಗಿಸಿ. ನೋಟಿಫಿಕೇಶನ್ ಆಫ್ ಇರಲಿ.
ಮಧ್ಯಾಹ್ನ 1:00 - 2:00 ಸೊಗಸಾದ ಊಟ ಫೋನ್ ಬಳಸದೆ ಊಟ ಮಾಡಿ. ಊಟದ ನಂತರ 5-10 ನಿಮಿಷ ಸುಮ್ಮನೆ ಕುಳಿತುಕೊಳ್ಳಿ.
ಸಂಜೆ 5:00 - 6:00 ಕೌಶಲ್ಯ ಅಭಿವೃದ್ಧಿ ನಿಮ್ಮ ಹವ್ಯಾಸ ಅಥವಾ ಹೊಸ ಕೌಶಲ್ಯ (ಎಐ ಬಳಕೆ, ಭಾಷೆ ಕಲಿಕೆ ಇತ್ಯಾದಿ) ಕಲಿಯಲು ಮೀಸಲಿಡಿ.
ಸಂಜೆ 7:00 - 8:30 ಕುಟುಂಬ ಮತ್ತು ವಿರಾಮ ಡಿಜಿಟಲ್ ಸಾಧನಗಳಿಂದ ದೂರವಿದ್ದು ಕುಟುಂಬದವರ ಜೊತೆ ಕಾಲ ಕಳೆಯಿರಿ.
ರಾತ್ರಿ 9:00 - 9:30 ಶಟ್-ಡೌನ್ ಮರುದಿನ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಿ. ಬಟ್ಟೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ.
ರಾತ್ರಿ 10:00 ನಿದ್ರೆ ಫೋನ್ ಪಕ್ಕಕ್ಕಿಟ್ಟು ಮಲಗಿ.
5 ಜೀವನಶೈಲಿ ಬದಲಾವಣೆಗಳು
1. ಝೋನ್ 2 ವಾಕಿಂಗ್
ಇದೊಂದು ಲಯಬದ್ಧವಾದ ವ್ಯಾಯಾಮದಂತಹ ವಾಕಿಂಗ್. ನಿಮ್ಮ ಹೃದಯದ ಆರೋಗ್ಯಕ್ಕೆ ಮತ್ತು ಕೊಬ್ಬು ಕರಗಿಸಲು ತುಂಬಾ ಸಹಕಾರಿ. ಈ ವಾಕಿಂಗ್‌ನಲ್ಲಿ ನೀವು ವೇಗವಾಗಿ ನಡೆಯಬೇಕು. ಎಷ್ಟು ವೇಗವೆಂದರೆ ನಡೆಯುವಾಗ ಪಕ್ಕದಲ್ಲಿರುವವರ ಜೊತೆ ಮಾತನಾಡಲು ಸಾಧ್ಯವಿರಬೇಕು. ಆದರೆ ಹಾಡಲು ಹೋದರೆ ಸುಸ್ತಾಗಬೇಕು. ಈ ವಾಕಿಂಗ್ ಶೈಲಿ ನಿಮ್ಮ ದೇಹದ ಜೀವಕೋಶಗಳಿಗೆ ಹೆಚ್ಚು ಶಕ್ತಿ ನೀಡುತ್ತದೆ.
2. ಅನಲಾಗ್ ಪ್ಲೇ
ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯಲ್ಲೇ ಮುಳುಗಿರುವುದನ್ನು ತಡೆಯಲು ‘ಅನಲಾಗ್ ಪ್ಲೇ’ ಅತ್ಯಗತ್ಯ.
ಅನಲಾಗ್ ಪ್ಲೇ ಎಂದರೆ ಮೊಬೈಲ್, ಇಂಟರ್ನೆಟ್ ಇಲ್ಲದೆ ಮಾಡಬಹುದಾದ ಕೆಲಸ ಮಾಡುವುದು. ಉದಾಹರಣೆಗೆ ಪಜಲ್ ಬಿಡಿಸುವುದು, ಚಿತ್ರ ಬಿಡಿಸುವುದು, ಬೋರ್ಡ್ ಗೇಮ್ಸ್ (ಕ್ಯಾರಂ, ಚೆಸ್) ಆಡುವುದು ಅಥವಾ ಪುಸ್ತಕ ಓದುವುದು ಇತ್ಯಾದಿ. ಇದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ದೊರಕುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ.
3. 20-20-20 ನಿಯಮ
ನಾವು ಅತಿ ಹೆಚ್ಚು ಸಮಯ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೋಡುವುದರಿಂದ ಕಣ್ಣುಗಳು ಸುಸ್ತಾಗುತ್ತವೆ. ಇದನ್ನು ತಡೆಯಲು ಪ್ರತೀ 20 ನಿಮಿಷಕ್ಕೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ. ಇದು ಕಣ್ಣಿನ ಒತ್ತಡವನ್ನು ತಕ್ಷಣ ಕಡಿಮೆ ಮಾಡುತ್ತದೆ.
4. ಟೂ-ಮಿನಿಟ್ ರೂಲ್
ಯಾವುದಾದರೂ ಕೆಲಸ ಮಾಡಲು ತುಂಬಾ ಸೋಮಾರಿತನ ಎನಿಸುತ್ತಿದ್ದರೆ ಈ ನಿಯಮ ಬಳಸಿ. ಯಾವುದೇ ಕೆಲಸ ಮಾಡಲು ಎರಡು ನಿಮಿಷಕ್ಕಿಂತ ಕಡಿಮೆ ಸಮಯ ಸಾಕಾಗುತ್ತಿದ್ದರೆ ಅದನ್ನು ತಕ್ಷಣ ಮಾಡಿ ಮುಗಿಸಿ. ಉದಾಹರಣೆಗೆ ತಟ್ಟೆ ತೊಳೆಯುವುದು ಅಥವಾ ಬಟ್ಟೆ ಮಡಚುವುದು ಇತ್ಯಾದಿ. ಇದು ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳುತ್ತದೆ.
5. ಪ್ರೋಟೀನ್-ಯುಕ್ತ ಉಪಹಾರ
ಬೆಳಿಗ್ಗೆ ಕೇವಲ ಕಾರ್ಬೋಹೈಡ್ರೇಟ್ (ದೋಸೆ, ಇಡ್ಲಿ ಮಾತ್ರ) ತಿನ್ನುವ ಬದಲು ಪ್ರೋಟೀನ್ ಇರುವಂತೆ ನೋಡಿಕೊಳ್ಳಿ. ನಿಮ್ಮ ಉಪಾಹಾರದಲ್ಲಿ ಮೊಟ್ಟೆ, ಮೊಳಕೆ ಕಾಳು ಅಥವಾ ಪನೀರ್ ಇರುವಂತೆ ನೋಡಿಕೊಳ್ಳಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಟ್ಟು, ಮಧ್ಯಾಹ್ನದವರೆಗೆ ನೀವು ಹಸಿವಿನಿಂದ ಸುಸ್ತಾಗದಂತೆ ತಡೆಯುತ್ತದೆ.