ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗೆ ₹27 ಸಾವಿರ ಕೋಟಿ ಸಾಲ : ಮೂರು ವರ್ಷದಲ್ಲಿ ಯೋಜನೆ ಪೂರ್ಣ!

KannadaprabhaNewsNetwork |  
Published : Dec 31, 2024, 01:31 AM ISTUpdated : Dec 31, 2024, 04:35 AM IST
PRR map | Kannada Prabha

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ‘ಬೆಂಗಳೂರು ಬಿಸಿನೆಸ್‌ಕಾರಿಡಾರ್‌’ (ಬಿಬಿಸಿ) ನಿರ್ಮಾಣಕ್ಕೆ 27 ಸಾವಿರ ಕೋಟಿ ರು.ಸಾಲ ನೀಡಲು ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್‌(ಹುಡ್ಕೊ) ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಸಂಬಂಧ ಈ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲಿವೆ.

 ಬೆಂಗಳೂರು  : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ‘ಬೆಂಗಳೂರು ಬಿಸಿನೆಸ್‌ ಕಾರಿಡಾರ್‌’ (ಬಿಬಿಸಿ) ನಿರ್ಮಾಣಕ್ಕೆ 27 ಸಾವಿರ ಕೋಟಿ ರು.ಸಾಲ ನೀಡಲು ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್‌(ಹುಡ್ಕೊ) ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಸಂಬಂಧ ಈ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲಿವೆ.

ಬಿಬಿಸಿ ಯೋಜನೆಗೆ 2,560 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು ಯೋಜನೆಗೆ ಭೂಮಿ ನೀಡಿದ ರೈತರಿಗೆಬಿಡಿಎ ಕಾಯ್ದೆ ಹಾಗೂ ಭೂಸ್ವಾಧೀನ ಪರಿಹಾರ ಕಾಯ್ದೆ ಅನ್ವಯ ಪರಿಹಾರವನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ಕಳೆದ 16 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಿಆರ್‌ಆರ್‌(ಹೊಸ ಹೆಸರು ಬಿಬಿಸಿ) ಯೋಜನೆಗೆ ಇನ್ನೆರಡು ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಬಿಬಿಸಿ ಯೋಜನೆಗೆ ರಾಜ್ಯ ಸರ್ಕಾರದ ಖಾತರಿ ಮೂಲಕ ಸಾಲ ಪಡೆಯಲಾಗುತ್ತಿದೆ. 27 ಸಾವಿರ ಕೋಟಿ ಸಾಲ ನೀಡಲು ಹುಡ್ಕೊ ಸಮ್ಮತಿಸಿದೆ. ಇದರಲ್ಲಿ ಭೂ ಪರಿಹಾರಕ್ಕೆ 21 ಸಾವಿರ ಕೋಟಿ ರು. ಹಾಗೂ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ರು. ವೆಚ್ಚವಾಗಲಿದೆ. 100 ಮೀಟರ್ ಅಗಲದ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಅನುಗುಣವಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಚಟುವಟಿಕೆಗೆ ಅವಕಾಶ: ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. 50 ಮೀಟರ್ ಅಗಲದಲ್ಲಿ ಆರು ಪಥಗಳ ರಸ್ತೆ ನಿರ್ಮಿಸಲಾಗುತ್ತದೆ. ಉಳಿದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ. ಕೇವಲ ಟೋಲ್ ಸಂಗ್ರಹದಿಂದ ಸಾಲ ಮರುಪಾವತಿ ಕಷ್ಟ. ಹೀಗಾಗಿ ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿಡಲು ಚಿಂತಿಸಲಾಗಿದೆ.

ಮೂರು ವರ್ಷದಲ್ಲಿ ಪೂರ್ಣ : ಮೂರು ವರ್ಷದಲ್ಲಿ ಬಿಬಿಸಿ ಯೋಜನೆಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಬಿಡಿಎ ಪಡೆದ ಸಾಲದ ಬಡ್ಡಿಯನ್ನು ಸರ್ಕಾರವೇ ನಾಲ್ಕು ವರ್ಷಗಳ ಕಾಲ ಭರಿಸಲಿದೆ. ಆ ಅವಧಿಯೊಳಗೆ ಸಾಲ ಮರುಪಾವತಿಸಬೇಕು. ಇಲ್ಲವಾದಲ್ಲಿ ಸಾಲ ಮತ್ತು ಬಾಕಿ ಬಡ್ಡಿಯನ್ನು ಪ್ರಾಧಿಕಾರವೇ ಪಾವತಿಸಬೇಕಾಗುತ್ತದೆ. ಹೊಸ ಬಡಾವಣೆಗಳ ನಿರ್ಮಾಣ, ವಾಣಿಜ್ಯ ಉದ್ದೇಶಗಳಿಗೆ ಭೂಮಿ ಮೀಸಲಿಡುವ ಮೂಲಕ ಆದಾಯ ಮೂಲಗಳನ್ನು ಕಂಡುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

73 ಕಿ.ಮೀ ಉದ್ದದ ಯೋಜನೆ : ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆಂದು ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯು ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಈ ಹೊರ ವರ್ತುಲ ರಸ್ತೆಯು 100 ಮೀಟರ್ ಅಗಲದ, 73 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ರಸ್ತೆ ಸುಮಾರು 77 ಗ್ರಾಮಗಳ ನಡುವೆ ಹಾದುಹೋಗಲಿದೆ. ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್ ಜಂಕ್ಷನ್‌ನಿಂದ ಆರಂಭವಾಗುವ ಕಾರಿಡಾರ್, ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ಹಳೇ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್, ಚನ್ನಸಂದ್ರ, ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ತಲುಪಲಿದೆ. ಹೆಸರಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ವೈಟ್‌ಫೀಲ್ಡ್, ಹೊಸೂರು ರಸ್ತೆಗಳನ್ನು ಇದು ಸಂಪರ್ಕಿಸಲಿದೆ.

PREV

Recommended Stories

ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650
ಮಧ್ಯಮವರ್ಗದವರನ್ನು ಗಮನಿಸಿಕೊಂಡು ಬಿಡುಗಡೆಯಾದ ಏಸರ್‌ ವಿ ಪ್ರೊ ಕ್ಯೂಎಲ್‌ಇಡಿ ಟಿವಿ