;Resize=(412,232))
ತಲೆಮಾರುಗಳಿಂದ ಬಂದಿರುವ ಆಸ್ತಿ ಸರಿಯಾದ ಪ್ಲಾನಿಂಗ್ ಇಲ್ಲದೇ ಕಣ್ಣ ಮುಂದೆಯೇ ಕರಗಿ ಹೋಗುವ ಉದಾಹರಣೆ ಸಾಕಷ್ಟಿದೆ. ಇದಕ್ಕೆ ಹಣದ ನಿರ್ವಹಣೆ ಸರಿಯಾಗಿ ತಿಳಿಯದಿರುವುದು ಮಾತ್ರವಲ್ಲ, ನಾವು ಮಾಡುವ ಅನೇಕ ತಪ್ಪು ನಿರ್ಧಾರಗಳೂ ಹಣ ಕೈಜಾರಿ ಹೋಗುವಂತೆ ಮಾಡುತ್ತವೆ. ಆ ಕಾರಣ ಮತ್ತು ಅದರಿಂದ ಪಾರಾಗುವ ಉಪಾಯ ಇಲ್ಲಿದೆ.
ಬಹಳಷ್ಟು ಜನರಿಗೆ ವಿಲ್ ಬಗ್ಗೆ ಸರಿಯಾದ ಜ್ಞಾನವಿಲ್ಲ. ಜೊತೆಗೆ ಉಡಾಫೆಯಿಂದಲೂ ವಿಲ್ ಮಾಡಿಸಲ್ಲ. ಇದರಿಂದ ಯಜಮಾನ ತೀರಿಕೊಂಡ ಬಳಿಕ ಮನೆಮಂದಿ ಕೋರ್ಟ್, ಲಾಯರ್ ಅಂತ ವೃಥಾ ಅಲೆಯಬೇಕಾಗುತ್ತದೆ. ಇದು ಹಣ ಮತ್ತು ನೆಮ್ಮದಿ ಎರಡನ್ನೂ ಹಾಳು ಮಾಡುತ್ತದೆ. ಆದ್ದರಿಂದ ಕಡ್ಡಾಯವಾಗಿ ವಿಲ್ ಇರಲಿ.
2. ಸ್ಟೇಟಸ್ ವ್ಯೂಹ
‘ಸ್ಟೇಟಸ್’ ಮೈಂಟೇನ್ ಮಾಡುವ ಕಾರಣಕ್ಕೆ ಸಾಲ ಮಾಡಿ ಐಷಾರಾಮಿ ಕಾರು, ಬಟ್ಟೆ ಅಥವಾ ವಾಚ್‌ಗಳ ಮೇಲೆ ಹಣ ಸುರಿಯುವವರು ಹೆಚ್ಚು. ಇದರ ಬದಲಾಗಿ ಚಿನ್ನ, ಜಮೀನು ಅಥವಾ ಷೇರು ಮಾರುಕಟ್ಟೆಯಂತಹ ಬೆಲೆ ಹೆಚ್ಚಾಗುವ ಕಡೆ ಹಣ ಹೂಡಿಕೆ ಮಾಡಿ. ಹಣ ಬಂದಮೇಲೆ ಸ್ಟೇಟಸ್ ಬಗ್ಗೆ ಚಿಂತಿಸಿ.
3. ಕ್ರೆಡಿಟ್ ಕಾರ್ಡ್ ವ್ಯಾಮೋಹ
ಕ್ರೆಡಿಟ್ ಕಾರ್ಡ್ ಬಳಸಿ ಮನಬಂದ ಹಾಗೆ ಹಣ ಖರ್ಚು ಮಾಡುವುದು ಅಪಾಯ. ಬಡ್ಡಿ ಅಥವಾ ಚಕ್ರಬಡ್ಡಿ ಕತೆ ಗೊತ್ತಲ್ಲಾ. ಸಾಲ ತೀರಿಸುವುದರಲ್ಲೇ ಅರ್ಧ ಜೀವನ ಕಳೆದುಹೋದರೆ, ಮಕ್ಕಳಿಗೆ ಏನು ಉಳಿಸಲು ಸಾಧ್ಯ.
4. ಇನ್ಶೂರೆನ್ಸ್ ಅವ್ಯವಸ್ಥೆ
ಆರೋಗ್ಯ ಸಮಸ್ಯೆ ಹೇಳಿ ಕೇಳಿ ಬರುವುದಿಲ್ಲ. ಒಮ್ಮೆ ದೊಡ್ಡ ಆರೋಗ್ಯ ಸಮಸ್ಯೆ ಬಂದರೆ ಅಷ್ಟರವರೆಗೆ ಮಾಡಿದ ಸೇವಿಂಗ್ಸ್ ಆಸ್ಪತ್ರೆ ಪಾಲಾಗಬಹುದು. ಅದಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಮತ್ತು ಲೈಫ್ ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಅತ್ಯಗತ್ಯ.
5. ಹೂಡಿಕೆ ಎಡವಟ್ಟು
ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವುದು ಜಾಣತನ ಅಲ್ಲ. ಚಿನ್ನ, ಮ್ಯೂಚುವಲ್ ಫಂಡ್ಸ್, ಶೇರುಗಳು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದರೆ, ಒಂದು ಕಡೆ ನಷ್ಟವಾದರೂ ಇನ್ನೊಂದು ಕಡೆ ಲಾಭ ಸಿಗುತ್ತದೆ. ಇದು ಹಣದ ಸುರಕ್ಷತೆಗೆ ಬಹಳ ಮುಖ್ಯ.
6. ಬಚ್ಚಿಟ್ಟ ಸಾಲ
ಸಾಲ, ಕಷ್ಟ ಇತ್ಯಾದಿ ತಲೆನೋವೆಲ್ಲ ಮನೆಯವರಿಗೆ ಯಾಕೆ ಹೇಳ್ಬೇಕು ಅಂತ ಹೆಚ್ಚಿನವರು ಸಾಲದ ವಿಚಾರ ಮನೆಮಂದಿಗೆ ಹೇಳುವುದೇ ಇಲ್ಲ. ಆದರೆ ಸಡನ್ನಾಗಿ ಅವರಿಗೆ ತೊಂದರೆಯಾದರೆ, ಆ ಸಾಲದ ಹೊರೆ ಸಂಗಾತಿಯ, ಮಕ್ಕಳ ಮೇಲೆ ಬೀಳುತ್ತದೆ. ಇದರಿಂದ ಅವರು ಆಸ್ತಿ ಅನುಭವಿಸುವ ಬದಲು ಸಾಲ ತೀರಿಸುವುದರಲ್ಲೇ ಕಂಗೆಟ್ಟು ಹೋಗುತ್ತಾರೆ. ಹಣಕಾಸಿನ ಪರಿಸ್ಥಿತಿ ಮತ್ತು ಸಾಲದ ಬಗ್ಗೆ ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಿ. ಆಗ ಅವರೂ ಖರ್ಚು ಮಾಡುವ ಮೊದಲ ಯೋಚನೆ ಮಾಡುತ್ತಾರೆ.