ಚಿಕ್ಕಮಗಳೂರು: ಕಳೆದ ವರ್ಷ ಕಾಫಿನಾಡಿಗೆ 95 ಲಕ್ಷ ಪ್ರವಾಸಿಗರ ಭೇಟಿ

KannadaprabhaNewsNetwork | Updated : Jan 09 2024, 01:10 PM IST

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಗಿರಿ ಪ್ರದೇಶಕ್ಕೆ ಬಂದು ಹೋಗುತ್ತಿರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿ ಗರು ಆಗಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ 

ಚಿಕ್ಕಮಗಳೂರು ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಪ್ರಕೃತಿ ಪ್ರಿಯರ ಸ್ವರ್ಗ ಕಾಫಿಯ ನಾಡಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಹೋಗು ತ್ತಿದೆ. ಜಿಲ್ಲೆಗೆ 2021 ರಲ್ಲಿ 32,90,376 ಮಂದಿ ಪ್ರವಾಸಿಗರು ಬಂದಿದ್ದರೆ, 2022 ರಲ್ಲಿ 58 ಲಕ್ಷಕ್ಕೆ ಏರಿಕೆಯಾಗಿದ್ದರೆ, 2023ಕ್ಕೆ ಈ ಸಂಖ್ಯೆ 95 ಲಕ್ಷವನ್ನೂ ದಾಟಿದೆ. 

ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಕೇವಲ ಒಂದು ಸೀಮಿತವಾದ ಕಾಲ ಇಲ್ಲ. ಎಲ್ಲಾ ಕಾಲದಲ್ಲೂ ಅಂದರೆ ಇಡೀ ವರ್ಷ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಲೇ ಇರುತ್ತಾರೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತಿದೆ. ಗಿರಿ ಪ್ರದೇಶಕ್ಕೆ ವಾರದ ಕೊನೆಯಲ್ಲಿ ಸಾವಿರಾರು ಮಂದಿ ಆಗಮಿಸುವುದು, ಕೆಲವೆಡೆ ಆಗಾಗ ಟ್ರಾಫಿಕ್ ಜಾಮ್ ಆಗುವುದು ಸಹಜವಾಗಿದೆ.

ಇಲ್ಲಿಗೆ ಬರುವ ಸಂಖ್ಯೆ ಗಿಂತ ದೇವಾಲಯಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಅಂದರೆ, ಜಿಲ್ಲೆಗೆ ಬರುವ ಪ್ರವಾಸಿಗರಲ್ಲಿ ಅತಿ ಹೆಚ್ಚಿನ ಮಂದಿ ಭೇಟಿ ನೀಡುವುದು ಶೃಂಗೇರಿಗೆ, ಅದರಲ್ಲೂ ಶ್ರೀ ಶಾರದಾಂಬೆ ದೇಗುಲಕ್ಕೆ ಕಳೆದ ವರ್ಷ ಇಲ್ಲಿಗೆ ಸುಮಾರು 26 ಲಕ್ಷ ಪ್ರವಾಸಿಗರು, ಭಕ್ತರು ಭೇಟಿ ನೀಡಿದ್ದಾರೆ. 2021ರಲ್ಲಿ ಈ ಸಂಖ್ಯೆ 14.45 ಲಕ್ಷ ಇತ್ತು. ಇನ್ನು ಎರಡನೇ ಸ್ಥಾನದಲ್ಲಿ ಹೊರನಾಡು ಅಂದರೆ, 17 ಲಕ್ಷ, ಕಳಸಕ್ಕೆ 8 ಲಕ್ಷ ಪ್ರವಾಸಿಗರು, ಭಕ್ತರು ಬಂದು ಹೋಗಿದ್ದಾರೆ. 

ಗಿರಿಯಲ್ಲಿ ಪ್ರವಾಸಿಗರು: ಜಿಲ್ಲೆಯ ಗಿರಿ ಪ್ರದೇಶಕ್ಕೆ ಬಂದು ಹೋಗುತ್ತಿರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. 2021ರಲ್ಲಿ ಗಿರಿ ಪ್ರದೇಶದಲ್ಲಿ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆ 4.52 ಲಕ್ಷ ಇತ್ತು. ಆದರೆ, 2023ರಲ್ಲಿ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆ ಬರೋಬರಿ 13 ಲಕ್ಷಕ್ಕೂ ಹೆಚ್ಚು, ಕೆಮ್ಮಣ್ಣಗುಂಡಿಗೂ ಲಕ್ಷಾಂತರ ಮಂದಿ ಬಂದು ಹೋಗಿದ್ದಾರೆ.

ಪ್ರವಾಸಿಗರಿಗೆ ಸುರಕ್ಷಿತ: ಜಿಲ್ಲೆಯ ಜನ ತುಂಬಾ ಸೌಮ್ಯ ಸ್ವಭಾವದವರು. ಯಾರಿಗೂ ತೊಂದರೆ ನೀಡುವುದಿಲ್ಲ. ಚಿಕ್ಕಮಗಳೂರಿನ ಐ.ಜಿ.ರಸ್ತೆಯಲ್ಲಿ ವೀಕ್ ಎಂಡ್‌ನ ರಾತ್ರಿ ವೇಳೆಯಲ್ಲಿ ನೂರಾರು ಜನ ಪ್ರವಾಸಿಗರು ಇರುತ್ತಾರೆ, ಅವರಲ್ಲಿ ಯಾರೂ ಕೂಡ ಸ್ಥಳೀಯರಿಂದ ತೊಂದರೆಯಾಗುತ್ತಿದೆ ಎಂದು ಹೇಳಿರುವುದು ಯಾರ ಕಿವಿಗೂ ಬಿದ್ದಿಲ್ಲ, ತಮ್ಮ ಪಾಡಿಗೆ ಊಟ ಮುಗಿಸಿ, ಕಾಫಿ ಕುಡಿದು ವಾಕ್ ಮಾಡುತ್ತಾರೆ, ಯಾರಿಗೂ ಕೂಡ ಇಲ್ಲಿನ ಜನರಿಂದ ಅನಾನುಕೂಲವಾಗಿಲ್ಲ. 

ಹಾಗಾಗಿ ಕಳೆದ 2 ವರ್ಷಗಳಿಂದ ಜಿಲ್ಲೆಗೆ ಬರುತ್ತಿರುವ ಕೇರಳ ರಾಜ್ಯದ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಪ್ಯಾಕೇಜ್ ಟೂರಿನಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ ಆರಂಭದ ಮೂರು ತಿಂಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಪ್ರವಾಸಿಗರು ಬಂದಿದ್ದಾರೆ.

 ಅವರುಗಳಲ್ಲಿ ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡಿದವರೇ ಹೆಚ್ಚು ಮಂದಿ. ಇದರ ಜತೆಗೆ ದತ್ತಪೀಠಕ್ಕೂ ಬಂದು ಹೋಗಿದ್ದಾರೆ. ಒಟ್ಟಾರೆ, ಗಿರಿ ಶ್ರೇಣಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ.

Share this article