ಬೆಂಗಳೂರು ದಕ್ಷಿಣ: ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ಕೃತಕ ಕಾಲು ಜೋಡಣೆ ಮಾಡಿದ ಹೆಗ್ಗಳಿಕೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಸಿಕರನ್ ಹೆಸರಿನ ಕರಡಿ ಪಾತ್ರವಾಗಿದೆ.
ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಕರಡಿಯ ಹಿಂಬದಿ ಎಡಗಾಲು ಮುರಿದು ನಡೆಯಲು ಆಗದ ಪರಿಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಸಿಕರನ್ ನನ್ನು ರಕ್ಷಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರಲಾಗಿತ್ತು.
ಹಿಂದಿನ ಎಡಗಾಲು ಮುರಿತಗೊಂಡಿದ್ದ ಕರಡಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಕರಡಿ ಆರೋಗ್ಯ ಸುಧಾರಣೆಯಾಗಿತ್ತು. ಉಳಿದ ಮೂರು ಕಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳುತ್ತಿತ್ತು. 2025ರಲ್ಲಿ ಜನವರಿಯಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರಾಣಿಗಳ ಜಾಗತಿಕ ಮೂಳೆ ತಜ್ಞ ಅಮೆರಿಕದ ಡೆರಿಕ್ ಕಂಪನಾ ವಸಿಕರನ್ ನಡಿಗೆಯನ್ನು ಗಮನಿಸಿದ್ದರು.
ಕರಡಿ ವಸಿಕರನ್ ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ವೈಲ್ಡ್ ಲೈಫ್ ಎಸ್.ಓ.ಎಸ್ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ಕೃತಕ ಕಾಲಿನ ಅಚ್ಚು, ಪರೀಕ್ಷೆ, ಅದನ್ನು ಲಯಬದ್ಧವಾಗಿ ಜೋಡಣೆ ಕಾರ್ಯ ಪರೀಕ್ಷಿಸಿದ ಬಳಿಕ ವಸಿಕರನ್ ಕೃತಕ ಕಾಲು ಜೋಡಣೆ ಯಶಸ್ವಿಯಾಗಿ ನೆರವೇರಿಸಲಾಯಿತು.
ಬೇರೆ ಪ್ರಾಣಿಗಳಂತೆ ಕರಡಿಗೆ ಕೃತಕ ಜೋಡಣೆ ಸವಾಲಿನ ಕೆಲಸವಾಗಿತ್ತು. ಜೋಡಣೆ ಬಳಿಕ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದು ನೆಮ್ಮದಿಯ ವಿಚಾರ ಎಂದು ಪ್ರಾಣಿಗಳ ಜಾಗತಿಕ ಮೂಳೆ ತಜ್ಞ ಅಮೆರಿಕದ ಡೆರಿಕ್ ಕಂಪನಾ ತಿಳಿಸಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 55 ಕರಡಿಗಳಿವೆ, ಅವುಗಳ ವಯಸ್ಸು ಸುಮಾರು 25 ರಿಂದ 30 ವರ್ಷ ಮೀರುತ್ತಿದ್ದು, ಸ್ವಾಭಾವಿಕವಾಗಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಮನುಷ್ಯರಿಗೆ ಆಗಲಿ ಪ್ರಾಣಿಗಳಿಗೆ ಆಗಲಿ ಕೃತಕ ಕಾಲು ಜೋಡಣೆ ಬಳಿಕ ಹೊಂದಿಕೊಳ್ಳಲು ಸಮಯಬೇಕು. ನಿಗಾ ವಹಿಸಿ ನೋಡಿಕೊಳ್ಳಲಾಗುತ್ತಿದೆ. ಇಂತಹ ಮಹತ್ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
- ಎ.ವಿ. ಸೂರ್ಯಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ.
ಇರುವೆ, ಗೆದ್ದಲು ಹುಳುಗಳನ್ನು ತಿನ್ನಲು ಕಾಲಿನ ಉಗುರು ಬಳಸಿ ಮರವೇರುತ್ತಿದ್ದ 16 ವರ್ಷ ಪ್ರಾಯದ ಕಾಡು ಕರಡಿಗೆ ಸರಿಯಾಗಿ ನಡೆದಾಡಲು ಆಗದ ಪರಿಸ್ಥಿತಿ ಉಂಟಾಗಿತ್ತು. ಯಶಸ್ವಿ ಕೃತಕ ಕಾಲಿನ ಜೋಡಣೆ ಮಾಡುವ ಅಮೆರಿಕದ ಖ್ಯಾತ ವೈದ್ಯ ಡೆರಿಕ್ ಅವರನ್ನು ಸಂಪರ್ಕಿಸಿ ಜನವರಿಯಲ್ಲಿ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಕರಡಿಯ ಇನ್ನೊಂದು ಕಾಲಿನ ಮಾದರಿ ಪಡೆದು ಕೃತಕ ಕಾಲು ಜೋಡಣೆ ಮಾಡಲಾಗಿದೆ.
-ಬಾ.ಅರುಣ್ ಶಾ. ವೈಲ್ಡ್ ಲೈಫ್ ಎಸ್.ಒ.ಎಸ್ ಸಂಸ್ಥೆ ಹಿರಿಯ ವೈದ್ಯಾಧಿಕಾರಿ