ಟೋಕಿಯೋ: ಸತತ 2ನೇ ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಳ್ಳುವ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಕನಸು ಭಗ್ನಗೊಂಡಿದೆ. ಟೋಕಿಯೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2022ರಲ್ಲಿ ಬೆಳ್ಳಿ, 2023ರಲ್ಲಿ ಚಿನ್ನ ಗೆದ್ದಿದ್ದ ನೀರಜ್‌ಗೆ ಈ ಬಾರಿ ಪದಕ ಸಿಗಲಿಲ್ಲ. ಆದರೆ ಅಭೂತಪೂರ್ವ ಪ್ರದರ್ಶನ ತೋರಿದ ಭಾರತದ ಮತ್ತೋರ್ವ ಸ್ಪರ್ಧಿ ಸಚಿನ್ ಯಾದವ್ 4ನೇ ಸ್ಥಾನಿಯಾಗಿ, ಅಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.
ಗುರುವಾರ ನಡೆದ ಫೈನಲ್‌ನಲ್ಲಿ 12 ಸ್ಪರ್ಧಿಗಳಿದ್ದರು. 2021ರಲ್ಲಿ ಟೋಕಿಯೋದ ಇದೇ ಟ್ರ್ಯಾಕ್‌ನಲ್ಲಿ ಐತಿಹಾಸಿಕ ಒಲಿಂಪಿಕ್ಸ್ ಚಿನ್ನ ಗೆದ್ದಿದ್ದ ನೀರಜ್ ಮತ್ತೆ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಆದರೆ ಮೊದಲೆರಡು ಎಸೆತದಲ್ಲಿ ಕ್ರಮವಾಗಿ 83.65 ಮೀ., 84.03 ಮೀ. ಎಸೆದರು. 3ನೇ ಎಸೆತ ಫೌಲ್ ಆದರೆ 4ನೇ ಎಸೆತದಲ್ಲಿ 82.86 ಮೀ. ದಾಖಲಾಯಿತು. ಸ್ಪರ್ಧೆಯಲ್ಲಿ ಉಳಿಯಬೇಕಿದ್ದರೆ 5ನೇ ಎಸೆತದಲ್ಲಿ 85.54 ಮೀ. ಎಸೆಯಬೇಕಿತ್ತು. ಆದರೆ ಎಸೆತ ಫೌಲ್ ಆಗಿ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.
25 ವರ್ಷದ ಸಚಿನ್, ಸ್ಪರ್ಧೆಯಲ್ಲಿ 4 ಬಾರಿ ನೀರಜ್‌ಗಿಂತ ಶ್ರೇಷ್ಠ ಎಸೆತ ದಾಖಲಿಸಿದರು. ಅವರು ಮೊದಲ ಪ್ರಯತ್ನದಲ್ಲೇ 86.27 ಮೀ. ದೂರಕ್ಕೆ ಜಾವೆಲಿನ್ ಎಸೆದು, ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಿದರು. 2ನೇ ಎಸೆತ ಫೌಲ್ ಆದರೆ, ಕೊನೆ 4 ಪ್ರಯತ್ನಗಳಲ್ಲಿ ಕ್ರಮವಾಗಿ 85.71 ಮೀ., 84.90 ಮೀ., 85.96 ಮೀ. ಮತ್ತು 80.95 ಮೀ. ದಾಖಲಿಸಿದರು.
ನದೀಂ, ವೆಬರ್‌ಗಿಲ್ಲ ಪದಕ:
ಕಳೆದ ಬಾರಿ ಬೆಳ್ಳಿ ವಿಜೇತ, ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಶದ್ ನದೀಂ(82.75 ಮೀ.) 10ನೇ ಸ್ಥಾನಿಯಾದರೆ, ಕಳೆದ ಬಾರಿ ಕಂಚು ಗೆದ್ದಿದ್ದ ಚೆಕ್ ಗಣರಾಜ್ಯದ ಜಾಕುಬ್ ವೆಡ್ಲೆಚ್(78.71 ಮೀ.) 11ನೇ ಸ್ಥಾನಿಯಾದರು. ಜರ್ಮನಿ ತಾರೆ ಜೂಲಿಯನ್ ವೆಬೆರ್(86.11 ಮೀ.) 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ವಾಲ್ಕೊಟ್ ಚಾಂಪಿಯನ್: ಟ್ರಿನಿಡಾಡ್ ಆ್ಯಂಡ್ ಟೊಬಾಗೋದ ಕೆಶೋರ್ನ್ ವಾಲ್ಕೊಟ್(88.16 ಮೀ.) ಚಿನ್ನ ಗೆದ್ದರೆ, 2 ಬಾರಿ ವಿಶ್ವ ಚಾಂಪಿಯನ್, ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್(87.38 ಮೀ.) ಬೆಳ್ಳಿ, ಅಮೆರಿಕದ ಕರ್ಟಿಸ್ ಥಾಂಪ್ಸನ್(86.67 ಮೀ.) ಬೆಳ್ಳಿ ಪಡೆದರು.
2018ರ ಬಳಿಕ ಮೊದಲ
ಸಲ ನೀರಜ್‌ಗೆ ಪದಕವಿಲ್ಲ
2018ರಲ್ಲಿ ಓಸ್ಟ್ರಾವಾ ಕಾಂಟಿನೆಂಟಲ್ ಕಪ್‌ನಲ್ಲಿ ನೀರಜ್‌ಗೆ ಪದಕ ಸಿಕ್ಕಿರಲಿಲ್ಲ. ಆ ಬಳಿಕ ಸ್ಪರ್ಧಿಸಿದ ಎಲ್ಲಾ ಕೂಟಗಳಲ್ಲೂ ನೀರಜ್ ಪದಕ ಗೆದ್ದಿದ್ದರು. ಇದರಲ್ಲಿ ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಪದಕಗಳೂ ಸೇರಿವೆ. ಮುಖ್ಯವಾಗಿ, 2021ರಿಂದ ನೀರಜ್ ಎಲ್ಲಾ ಸ್ಪರ್ಧೆಗಳಲ್ಲೂ ಚಿನ್ನ ಅಥವಾ ಬೆಳ್ಳಿ ಗೆದ್ದಿದ್ದರು. ಆದರೆ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿ ಅವರು ಅಗ್ರ-3ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.